
ಕರ್ನಾಟಕದ ಕರಾವಳಿ ಎಂದಾಕ್ಷಣ ನೆನಪಾಗುವುದು ಕಡಲತೀರಗಳು, ಅಲೆಗಳ ಅಬ್ಬರ, ತೆಂಗಿನ ಮರಗಳ ಸಾಲು ಮತ್ತು ಸೂರ್ಯಾಸ್ತದ ಸೊಬಗು. ಆದರೆ, ಉಡುಪಿಯಿಂದ ಸುಮಾರು 25 ಕಿ.ಮೀ. ಉತ್ತರದಲ್ಲಿರುವ ಸಾಲಿಗ್ರಾಮದಲ್ಲಿ ಇವೆಲ್ಲಕ್ಕಿಂತ ಭಿನ್ನವಾದ ಪ್ರಕೃತಿ ಲೋಕವೊಂದು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.
ಹಿನ್ನೀರಿನ ಇಕ್ಕೆಲಗಳಲ್ಲಿ ಹರಡಿಕೊಂಡಿರುವ ಮ್ಯಾಂಗ್ರೋವ್ ಕಾಡುಗಳು, ಪ್ರಶಾಂತ ಜಲಮಾರ್ಗಗಳು, ಹಕ್ಕಿಗಳ ಕಲರವ ಹಾಗೂ ಜಲಚರಗಳ ಚಟುವಟಿಕೆಗಳ ನಡುವೆ ಸಾಗುವ ಅನುಭವ ಪ್ರವಾಸಿಗರಿಗೆ ಹೊಸ ಲೋಕವನ್ನೇ ತೆರೆದಿಡುತ್ತದೆ.
ಸಾಲಿಗ್ರಾಮದ ಹಿನ್ನೀರಿನ ಮ್ಯಾಂಗ್ರೋವ್ ಅರಣ್ಯವು ಕರಾವಳಿಯ ಪರಿಸರ ಸೌಂದರ್ಯವನ್ನು ಹತ್ತಿರದಿಂದ ಪರಿಚಯಿಸುವ ವಿಶಿಷ್ಟ ತಾಣ. ಇಲ್ಲಿನಹಿನ್ನೀರಿನ ಪ್ರದೇಶದಲ್ಲಿ ಮ್ಯಾಂಗ್ರೋವ್ ಮರಗಳು ಕಿರಿದಾದ ಜಲಮಾರ್ಗಗಳ ಇಕ್ಕೆಲಗಳಲ್ಲಿ ಬೆಳೆದು ನಿಂತಿವೆ.
ಅವುಗಳ ಹೆಣೆದುಕೊಂಡಿರುವ ಬೇರುಗಳು, ಹಸಿರಿನ ಹೊದಿಕೆ ಮತ್ತು ನೀರಿನಲ್ಲಿ ಮೂಡುವ ಪ್ರತಿಬಿಂಬಗಳು ಪ್ರಕೃತಿಯ ಅಪರೂಪದ ಚಿತ್ರಣವನ್ನು ಕಟ್ಟಿಕೊಡುತ್ತವೆ. ನಗರದ ಗದ್ದಲದಿಂದ ದೂರವಾಗಿ, ನೆಮ್ಮದಿಯ ಕ್ಷಣಗಳನ್ನು ಕಳೆಯಲು ಬಯಸುವವರಿಗೆ ಈ ತಾಣ ಹೇಳಿಮಾಡಿಸಿದಂತಿದೆ.
ಈ ಹಿನ್ನೀರನ್ನು ಅನ್ವೇಷಿಸಲು ಕಾಯಕಿಂಗ್ ಅತ್ಯುತ್ತಮ ಮಾರ್ಗ. ಸ್ಥಳೀಯ ಪ್ರವಾಸ ಆಯೋಜಕರು ಒಬ್ಬರು ಕುಳಿತು ಸಾಗುವ ಹಾಗೂ ಇಬ್ಬರು ಕುಳಿತು ಸಾಗಬಹುದಾದ ಕಾಯಕಿಂಗ್ ವ್ಯವಸ್ಥೆ ಕಲ್ಪಿಸುತ್ತಾರೆ. ಸುರಕ್ಷತೆಗಾಗಿ ಜೀವ ರಕ್ಷಕ ಕವಚಗಳನ್ನೂ ಒದಗಿಸಲಾಗುತ್ತದೆ. ಮಾರ್ಗದರ್ಶಕರ ಸಹಾಯದೊಂದಿಗೆ ಸಾಗುವ ಅವಕಾಶವಿರುವುದರಿಂದ, ಮೊದಲ ಬಾರಿಗೆ ಕಾಯಕಿಂಗ್ ಮಾಡುವವರೂ ಈ ಅನುಭವವನ್ನು ಆಸ್ವಾದಿಸಬಹುದು.
ಕಿರಿದಾದ ಜಲಮಾರ್ಗಗಳಲ್ಲಿ ದೋಣಿಯನ್ನು ನಿಧಾನವಾಗಿ ಮುನ್ನಡೆಸುತ್ತಾ ಹೋದಂತೆ ಎರಡೂ ಬದಿಗಳಲ್ಲಿ ಹರಡಿರುವ ಮ್ಯಾಂಗ್ರೋವ್ ಮರಗಳ ಹಸಿರು ಲೋಕ ಕಣ್ಮುಂದೆ ತೆರೆದುಕೊಳ್ಳುತ್ತದೆ.
ನೀರಿನ ಮೇಲೆ ಪ್ರತಿಫಲಿಸುವ ಮರಗಳ ಬೇರುಗಳು ಮತ್ತು ಎಲೆಗಳ ವಿನ್ಯಾಸ ನೋಡುಗರನ್ನು ಮಂತ್ರಮುಗ್ಧಗೊಳಿಸುತ್ತವೆ. ಇಲ್ಲಿ ವೇಗಕ್ಕೆ ಅಥವಾ ದೂರ ಕ್ರಮಿಸುವುದಕ್ಕೆ ಮಹತ್ವವಿಲ್ಲ; ಪ್ರಕೃತಿಯ ಸೊಬಗನ್ನು ಆಸ್ವಾದಿಸುತ್ತಾ ನಿಧಾನವಾಗಿ ಸಾಗುವುದೇ ಪ್ರವಾಸದ ನಿಜವಾದ ಆನಂದ.
ಸಾಲಿಗ್ರಾಮದ ಹಿನ್ನೀರು ಪ್ರಕೃತಿ ಪ್ರಿಯರು ಹಾಗೂ ಪಕ್ಷಿ ವೀಕ್ಷಕರಿಗೆ ಆಕರ್ಷಕ ತಾಣವಾಗಿದೆ. ಮಿಂಚುಳ್ಳಿ, ಬೆಳ್ಳಕ್ಕಿ ಮತ್ತು ವಿವಿಧ ಜಾತಿಯ ಕೊಕ್ಕರೆಗಳು ಜಲಮಾರ್ಗಗಳ ಸುತ್ತಮುತ್ತ ಕಾಣಸಿಗುತ್ತವೆ.
ಆಕಾಶದಲ್ಲಿ ಹಾರಾಡುವ ಗಿಡುಗ ಹಾಗೂ ಬಿಳಿ ಹೊಟ್ಟೆಯ ಸಮುದ್ರ ಗರುಡಗಳೂ ಗಮನ ಸೆಳೆಯುತ್ತವೆ. ನೀರಿನ ಅಂಚಿನ ಕೆಸರಿನಲ್ಲಿ ಓಡಾಡುವ ಏಡಿ, ಮಣ್ಣಿನೊಳಗೆ ಅಡಗುವ ಸಣ್ಣ ಜಲಚರಗಳು ಈ ಪರಿಸರಕ್ಕೆ ಮತ್ತಷ್ಟು ಜೀವ ತುಂಬುತ್ತವೆ.
ಮ್ಯಾಂಗ್ರೋವ್ ಕಾಡುಗಳು ಕೇವಲ ಹಸಿರಿನ ಸೌಂದರ್ಯಕ್ಕೆ ಸೀಮಿತವಾಗಿಲ್ಲ. ಮೀನುಗಳು, ಚಿಪ್ಪುಮೀನುಗಳು ಸೇರಿದಂತೆ ಹಲವು ಜಲಚರಗಳಿಗೆ ಆಶ್ರಯ ಒದಗಿಸುವ ಮೂಲಕ ಕರಾವಳಿಯ ಪರಿಸರ ಸಮತೋಲನ ಕಾಪಾಡುವಲ್ಲಿಯೂ ಮಹತ್ವದ ಪಾತ್ರ ವಹಿಸುತ್ತವೆ. ಈ ಕಾರಣದಿಂದ ಹಿನ್ನೀರಿನ ಪ್ರವಾಸವನ್ನು ಕೇವಲ ಮನರಂಜನೆಯಾಗಿ ನೋಡದೆ, ಪ್ರಕೃತಿಯ ಸೂಕ್ಷ್ಮ ಪರಿಸರ ವ್ಯವಸ್ಥೆಯನ್ನು ಅರಿಯುವ ಅವಕಾಶವಾಗಿಯೂ ಪರಿಗಣಿಸಬಹುದು.
ಸಾಲಿಗ್ರಾಮದ ಹಿನ್ನೀರನ್ನು ನೋಡಲು ಮುಂಜಾನೆ ಅಥವಾ ಸಂಜೆಯ ಸಮಯ ಸೂಕ್ತ. ಬೆಳಗಿನ ತಂಪಾದ ವಾತಾವರಣದಲ್ಲಿ ಕಾಯಕಿಂಗ್ ಮಾಡುವುದು ಹೆಚ್ಚು ಆರಾಮದಾಯಕ. ಸೂರ್ಯೋದಯದ ಸಮಯದಲ್ಲಿ ನೀರಿನ ಮೇಲೆ ಮೂಡುವ ಮೃದುವಾದ ಬೆಳಕು, ನಿಶ್ಚಲವಾಗಿ ಕಾಣುವ ಮ್ಯಾಂಗ್ರೋವ್ ಮರಗಳು ಹಾಗೂ ಹಕ್ಕಿಗಳ ಚಲನವಲನಗಳು ಮನಸ್ಸಿಗೆ ಮುದ ನೀಡುತ್ತವೆ. ಪಕ್ಷಿ ವೀಕ್ಷಣೆಗೆ ಆಸಕ್ತಿ ಇರುವವರಿಗೂ ಇದು ಉತ್ತಮ ಸಮಯ.
ಸಂಜೆಯ ಹೊತ್ತಿನಲ್ಲಿ ಸೂರ್ಯನ ಬೆಳಕು ಬದಲಾಗುತ್ತಿದ್ದಂತೆ ಹಿನ್ನೀರಿನ ಬಣ್ಣವೂ ಹೊಸ ರೂಪ ಪಡೆದುಕೊಳ್ಳುತ್ತದೆ. ಮರಗಳ ನೆರಳು, ನೀರಿನಲ್ಲಿ ಮೂಡುವ ಪ್ರತಿಬಿಂಬಗಳು ಮತ್ತು ಹಸಿರಿನ ನಡುವೆ ಹರಿಯುವ ಜಲಮಾರ್ಗಗಳು ಛಾಯಾಗ್ರಹಣಕ್ಕೆ ಸುಂದರ ಹಿನ್ನೆಲೆಯಾಗುತ್ತವೆ. ಪ್ರಕೃತಿಯ ಸಣ್ಣ ಸಣ್ಣ ಬದಲಾವಣೆಗಳನ್ನು ಗಮನಿಸುತ್ತಾ ಸಮಯ ಕಳೆಯಲು ಬಯಸುವವರಿಗೆ ಈ ಅನುಭವ ವಿಶೇಷವಾಗಿರುತ್ತದೆ.
ಪ್ರಕೃತಿಯ ಸೊಬಗನ್ನು ಆಸ್ವಾದಿಸಿದ ಬಳಿಕ ಸಾಲಿಗ್ರಾಮದ ಐತಿಹಾಸಿಕ ಶ್ರೀ ಗುರು ನರಸಿಂಹ ದೇವಸ್ಥಾನಕ್ಕೂ ಭೇಟಿ ನೀಡಬಹುದು. ಈ ಭಾಗದ ಪ್ರಮುಖ ಧಾರ್ಮಿಕ ತಾಣಗಳಲ್ಲಿ ಒಂದಾಗಿರುವ ದೇವಸ್ಥಾನದಲ್ಲಿ ನರಸಿಂಹ ದೇವರ ಮೂರ್ತಿಯನ್ನು ಸಾಲಿಗ್ರಾಮ ಶಿಲೆಯಿಂದ ಕೆತ್ತಲಾಗಿದೆ ಎಂಬ ನಂಬಿಕೆಯಿದೆ. ದೇವಸ್ಥಾನದ ಆವರಣದಲ್ಲಿರುವ ಶಂಖ ಮತ್ತು ಚಕ್ರ ಎಂಬ ಪವಿತ್ರ ತೀರ್ಥಕೊಳಗಳು ಇಲ್ಲಿನ ವಿಶೇಷ ಆಕರ್ಷಣೆಗಳಾಗಿವೆ.
ಹೀಗೆ ಪ್ರಕೃತಿ ಸೌಂದರ್ಯ, ಪಕ್ಷಿ ವೀಕ್ಷಣೆ, ಕಾಯಕಿಂಗ್ ಅನುಭವ ಮತ್ತು ಧಾರ್ಮಿಕ ದರ್ಶನವನ್ನು ಒಂದೇ ಪ್ರವಾಸದಲ್ಲಿ ಆನಂದಿಸಲು ಸಾಲಿಗ್ರಾಮ ಅವಕಾಶ ಕಲ್ಪಿಸುತ್ತದೆ. ಸಾಮಾನ್ಯ ಜಲಕ್ರೀಡಾ ತಾಣಗಳಿಗಿಂತ ಭಿನ್ನವಾಗಿ, ಇಲ್ಲಿ ಪ್ರಕೃತಿಯೊಂದಿಗೆ ಬೆರೆಯಲು ಮತ್ತು ಪರಿಸರದ ನಿಶ್ಶಬ್ದತೆಯನ್ನು ಅನುಭವಿಸಲು ಅವಕಾಶವಿದೆ.
ಮ್ಯಾಂಗ್ರೋವ್ ಕಾಡಿನ ನಡುವೆ ನಿಧಾನವಾಗಿ ಸಾಗುವ ಕಾಯಕಿಂಗ್, ನೀರಿನ ಅಂಚಿನಲ್ಲಿ ಕಾಣಸಿಗುವ ಪುಟ್ಟ ಜೀವಿಗಳು, ಹಕ್ಕಿಗಳ ಹಾರಾಟ ಮತ್ತು ಹಿನ್ನೀರಿನ ಪ್ರಶಾಂತತೆ—ಇವೆಲ್ಲವೂ ಸಾಲಿಗ್ರಾಮದ ಪ್ರವಾಸವನ್ನು ಸ್ಮರಣೀಯವಾಗಿಸುತ್ತವೆ. ಕರಾವಳಿಯ ಮತ್ತೊಂದು ಮಗ್ಗುಲನ್ನು ಅರಿಯಲು ಬಯಸುವವರು ಉಡುಪಿಯ ಸಮೀಪದ ಈ ಪರಿಸರ ಸ್ನೇಹಿ ಪ್ರವಾಸಿ ತಾಣವನ್ನು ತಮ್ಮ ಪ್ರವಾಸದ ಪಟ್ಟಿಗೆ ಸೇರಿಸಿಕೊಳ್ಳಬಹುದು.
ಪ್ರವಾಸದ ವೇಳೆ ಸ್ಥಳೀಯ ಮಾರ್ಗದರ್ಶಕರ ಸೂಚನೆಗಳನ್ನು ಪಾಲಿಸಿ, ಜೀವ ರಕ್ಷಕ ಕವಚ ಧರಿಸಿ. ಮ್ಯಾಂಗ್ರೋವ್ ಸಸ್ಯವರ್ಗಕ್ಕೆ ಹಾನಿ ಮಾಡದೆ, ಕಸವನ್ನು ನೀರಿನಲ್ಲಿ ಎಸೆಯದೆ ಪರಿಸರವನ್ನು ಸ್ವಚ್ಛವಾಗಿಡುವುದು ಪ್ರತಿಯೊಬ್ಬ ಪ್ರವಾಸಿಗನ ಜವಾಬ್ದಾರಿ.