

ಕರ್ನಾಟಕದ ಹಂಪಿ ಎಂದರೆ ಕಣ್ಣಮುಂದೆ ಬರುವುದು ವಿಜಯನಗರ ಸಾಮ್ರಾಜ್ಯದ ವೈಭವ, ಭವ್ಯ ದೇವಾಲಯಗಳು, ಕಲ್ಲಿನ ರಥಗಳು ಹಾಗೂ ಇತಿಹಾಸ ಸಾರುವ ಶಿಲ್ಪಕಲೆ. ಆದರೆ ಇಲ್ಲಿನ ವಿಠ್ಠಲ ದೇವಾಲಯದಲ್ಲಿ ಇವೆಲ್ಲವನ್ನೂ ಮೀರಿಸುವ ಮತ್ತೊಂದು ಅಚ್ಚರಿಯಿದೆ.
ಹಂಪಿಯ ವಿಜಯ ವಿಠ್ಠಲ ದೇವಾಲಯದ ‘ಸಂಗೀತ ಕಂಬಗಳು’ ಇಂದಿಗೂ ಜಗತ್ತಿನ ಪ್ರಮುಖ ವಾಸ್ತುಶಿಲ್ಪದ ಅದ್ಭುತಗಳಲ್ಲಿ ಒಂದಾಗಿ ಉಳಿದಿವೆ. 16ನೇ ಶತಮಾನದ ಈ ದೇವಾಲಯದ ಆವರಣದಲ್ಲಿರುವ ರಂಗಮಂಟಪದ 56 ಕಂಬಗಳನ್ನು ಮೆಲ್ಲನೆ ತಟ್ಟಿದರೆ ಸಾಕು, ಭಾರತೀಯ ಶಾಸ್ತ್ರೀಯ ಸಂಗೀತದ ‘ಸ-ರೆ-ಗ-ಮ’ ಸ್ವರಗಳು ಮತ್ತು ಮೃದಂಗ, ವೀಣೆ, ಡಮರುಗಳ ನಾದ ಹೊಮ್ಮುತ್ತದೆ.
ಒಂದೊಂದು ಕಂಬದಿಂದ ಒಂದೊಂದು ರೀತಿಯ ನಾದ ಕೇಳಿಸುವ ಈ ಅಪರೂಪದ ಕೌತುಕ ಇಂದಿಗೂ ಪ್ರವಾಸಿಗರು, ಇತಿಹಾಸಾಸಕ್ತರು ಮತ್ತು ವಾಸ್ತುಶಿಲ್ಪ ಅಧ್ಯಯನಕಾರರ ಗಮನ ಸೆಳೆಯುತ್ತಿದೆ.
ವಿಠ್ಠಲ ದೇವಾಲಯದ ಮಹಾಮಂಟಪದಲ್ಲಿರುವ ಸಂಗೀತದ ಕಂಬಗಳು ಹಂಪಿಯ ಅತ್ಯಂತ ವಿಶಿಷ್ಟ ಐತಿಹಾಸಿಕ ವೈಶಿಷ್ಟ್ಯಗಳಲ್ಲಿ ಒಂದಾಗಿವೆ. ಈ ಮಂಟಪದಲ್ಲಿ ಒಟ್ಟು 56 ಸಂಗೀತದ ಕಂಬಗಳಿದ್ದು, ಅವುಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಸುಮಾರು 3.6 ಮೀಟರ್ ಎತ್ತರದ ಈ ಕಂಬಗಳಲ್ಲಿ 40 ಕಂಬಗಳು ಹಾದಿಯ ರೂಪದಲ್ಲಿ ಜೋಡಿಸಲ್ಪಟ್ಟಿದ್ದರೆ, ಉಳಿದ 16 ಕಂಬಗಳು ಅಂಗಳದ ಭಾಗದಲ್ಲಿವೆ ಎಂದು ಹೇಳಲಾಗುತ್ತದೆ.
ಪ್ರತಿಯೊಂದು ಕಂಬವೂ ಒಂದೇ ಗ್ರಾನೈಟ್ ಶಿಲೆಯಿಂದ ಕೆತ್ತಲ್ಪಟ್ಟಿದ್ದು, ಮುಖ್ಯ ಕಂಬಗಳ ಸುತ್ತಲೂ ಸಣ್ಣ ಕಂಬಗಳ ವಿನ್ಯಾಸವಿದೆ. ಇವುಗಳಿಂದ ಹೊರಹೊಮ್ಮುವ ಸ್ವರಗಳ ಕಾರಣದಿಂದಲೇ ಅವುಗಳಿಗೆ ‘ಸ ರಿ ಗ ಮ’ ಕಂಬಗಳು ಎಂಬ ಹೆಸರೂ ಬಂದಿದೆ.
ಇಲ್ಲಿ ಗಮನ ಸೆಳೆಯುವ ಸಂಗತಿಯೆಂದರೆ, ಈ ಕಂಬಗಳನ್ನು ಸಂಗೀತದ ವಾದ್ಯಗಳಂತೆ ರೂಪಿಸಲು ಆಧುನಿಕ ಯಂತ್ರೋಪಕರಣಗಳೇನೂ ಇರಲಿಲ್ಲ. ಶಿಲೆಯ ಗುಣಲಕ್ಷಣ, ಅದರ ಗಾತ್ರ, ಆಕಾರ ಮತ್ತು ಕೆತ್ತನೆಯ ನಿಖರತೆಯನ್ನು ಆಧರಿಸಿ ಕಲ್ಲಿನಿಂದಲೇ ವಿಭಿನ್ನ ಧ್ವನಿಗಳನ್ನು ಹೊರಹೊಮ್ಮಿಸುವಂತೆ ರೂಪಿಸಿರುವುದು ಪ್ರಾಚೀನ ಶಿಲ್ಪಿಗಳ ತಾಂತ್ರಿಕ ಜ್ಞಾನಕ್ಕೆ ಸಾಕ್ಷಿಯಾಗಿದೆ.
ವಿಜಯನಗರದ ವೈಭವಕ್ಕೆ ಸಂಗೀತದ ಸ್ಪರ್ಶ
ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ನಿರ್ಮಾಣಗೊಂಡ ಈ ದೇವಾಲಯವು ಕಲೆ, ಸಂಗೀತ, ನೃತ್ಯ ಮತ್ತು ಧಾರ್ಮಿಕ ಆಚರಣೆಗಳ ನಡುವಿನ ಆಳವಾದ ಸಂಬಂಧವನ್ನು ಪ್ರತಿಬಿಂಬಿಸುತ್ತದೆ. ಆ ಕಾಲದಲ್ಲಿ ದೇವಾಲಯಗಳು ಕೇವಲ ಪೂಜಾ ಸ್ಥಳಗಳಾಗಿರಲಿಲ್ಲ; ಅವು ಸಂಗೀತ, ನೃತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಪ್ರಮುಖ ಕೇಂದ್ರಗಳಾಗಿದ್ದವು.
ಮಹಾಮಂಟಪದ ಕಂಬಗಳ ನಡುವಿನ ಜಾಗದಲ್ಲಿ ನೃತ್ಯ ಪ್ರದರ್ಶನಗಳು ನಡೆಯುತ್ತಿದ್ದಿರಬಹುದು ಎಂಬುದು ಈ ವಿನ್ಯಾಸದ ಕುರಿತು ಮೂಡುವ ಆಸಕ್ತಿದಾಯಕ ಕಲ್ಪನೆಯಾಗಿದೆ. ನೃತ್ಯಗಾರರ ಹೆಜ್ಜೆಗಳ ಲಯಕ್ಕೆ ಕಲ್ಲಿನ ಕಂಬಗಳಿಂದ ಹೊರಹೊಮ್ಮುವ ನಾದವೂ ಸೇರಿದ್ದರೆ, ಆ ದೃಶ್ಯ ಎಷ್ಟು ಮನಮೋಹಕವಾಗಿರಬಹುದು ಎಂಬುದನ್ನು ಊಹಿಸಬಹುದು.
1565ರಲ್ಲಿ ವಿಜಯನಗರ ಸಾಮ್ರಾಜ್ಯದ ಪತನದ ಬಳಿಕ ಹಂಪಿಯ ಅನೇಕ ಸ್ಮಾರಕಗಳು ಹಾನಿಗೊಳಗಾದವು. ದೇವಾಲಯದ ಕೆಲವು ಭಾಗಗಳೂ ನಾಶವಾದವು. ಆದರೂ ಸಂಗೀತದ ಕಂಬಗಳ ಬಹುಭಾಗ ಇಂದಿಗೂ ಉಳಿದುಕೊಂಡಿದ್ದು, ಅಂದಿನ ಕಲಾತ್ಮಕ ಪರಂಪರೆಯನ್ನು ನೆನಪಿಸುತ್ತಿದೆ.
ಕಲ್ಲಿನಿಂದ ಸಂಗೀತದ ನಾದ ಹೊರಹೊಮ್ಮುವುದು ಹೇಗೆ..?
ಕಲ್ಲನ್ನು ತಟ್ಟಿದಾಗ ಅದರಲ್ಲಿ ಕಂಪನ ಉಂಟಾಗುತ್ತದೆ. ಇದರಿಂದ ಗ್ರಾನೈಟ್ ಶಿಲೆಯೊಳಗೆ ಯಾಂತ್ರಿಕ ಅಲೆಗಳು ಸೃಷ್ಟಿಯಾಗುತ್ತವೆ. ಜೊತೆಗೆ, ಸುತ್ತಲಿನ ಗಾಳಿಯಲ್ಲಿಯೂ ಧ್ವನಿ ಅಲೆಗಳು ಹರಡುತ್ತವೆ. ಈ ಕಂಪನಗಳ ಆವರ್ತನವೇ ಧ್ವನಿಯ ಸ್ವರವನ್ನು ನಿರ್ಧರಿಸುತ್ತದೆ. ವೇಗವಾಗಿ ಕಂಪಿಸಿದಾಗ ಹೆಚ್ಚು ತೀಕ್ಷ್ಣವಾದ ಸ್ವರ ಕೇಳಿಸಿದರೆ, ನಿಧಾನವಾಗಿ ಕಂಪಿಸಿದಾಗ ಕಡಿಮೆ ಸ್ವರ ಕೇಳಿಸುತ್ತದೆ.
ಎಲ್ಲ ಕಲ್ಲುಗಳೂ ಸಂಗೀತ ನಾದ ಹೊರಹೊಮ್ಮುವುದಿಲ್ಲವೇಕೆ...?
ಕಲ್ಲನ್ನು ತಟ್ಟಿದಾಗ ಸ್ಪಷ್ಟವಾದ ನಾದ ಕೇಳಿಸಬೇಕಾದರೆ ಅದರ ರಚನೆಯೂ ಮುಖ್ಯವಾಗುತ್ತದೆ. ಕಲ್ಲಿನೊಳಗಿನ ಬಿರುಕುಗಳು, ರಂಧ್ರಗಳು ಮತ್ತು ದುರ್ಬಲ ಭಾಗಗಳು ಕಂಪನದ ಶಕ್ತಿಯನ್ನು ಹೀರಿಕೊಳ್ಳಬಹುದು ಅಥವಾ ಚದುರಿಸಬಹುದು. ಇದರಿಂದ ಸ್ಪಷ್ಟವಾದ ಸ್ವರದ ಬದಲು ಮಂದವಾದ ಶಬ್ದ ಕೇಳಿಸುತ್ತದೆ.
ಇದಕ್ಕೆ ವಿರುದ್ಧವಾಗಿ, ಗಡಸುತನ ಹೊಂದಿರುವ, ಕಡಿಮೆ ದೋಷಗಳಿರುವ ಮತ್ತು ಉತ್ತಮ ಆಂತರಿಕ ರಚನೆಯುಳ್ಳ ಕಲ್ಲುಗಳಲ್ಲಿ ಕಂಪನಗಳು ಹೆಚ್ಚು ಸ್ಪಷ್ಟವಾಗಿ ಹರಡಬಹುದು. ಕಲ್ಲಿನ ಸ್ಥಿತಿಸ್ಥಾಪಕ ಗುಣ ಹಾಗೂ ಕಂಪನದ ವೇಳೆ ಶಕ್ತಿಯನ್ನು ಉಳಿಸಿಕೊಳ್ಳುವ ಸಾಮರ್ಥ್ಯವೂ ಧ್ವನಿಯ ಗುಣಮಟ್ಟವನ್ನು ನಿರ್ಧರಿಸುತ್ತವೆ.
ಹೀಗಾಗಿ ಹಂಪಿಯ ಸಂಗೀತದ ಕಂಬಗಳ ರಹಸ್ಯ ಕೇವಲ ಕಲ್ಲಿನ ಆಯ್ಕೆಯಲ್ಲಿಲ್ಲ; ಕಲ್ಲಿನ ಗುಣಮಟ್ಟ, ಅದರ ನಿಖರ ಕೆತ್ತನೆ ಮತ್ತು ವಿನ್ಯಾಸದ ಸಮನ್ವಯದಲ್ಲಿದೆ. ಆದರೆ, ಪ್ರತಿಯೊಂದು ಕಂಬದಿಂದ ಹೊರಹೊಮ್ಮುವ ನಿರ್ದಿಷ್ಟ ಸ್ವರಕ್ಕೆ ಕಾರಣವೇನು ಎಂಬುದನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ವೈಜ್ಞಾನಿಕ ಅಧ್ಯಯನದ ಅಗತ್ಯವಿದೆ.
ತುಂಗಭದ್ರೆಯ ತಟದಲ್ಲಿ ಅರಳಿದ ಸಾಮ್ರಾಜ್ಯದ ಸಾಂಸ್ಕೃತಿಕ ಸಂಪತ್ತು
ವಿಠ್ಠಲ ದೇವಾಲಯವು ತುಂಗಭದ್ರಾ ನದಿಯ ದಕ್ಷಿಣ ದಡದಲ್ಲಿದೆ. ಪಶ್ಚಿಮ ಘಟ್ಟಗಳಲ್ಲಿ ತುಂಗಾ ಮತ್ತು ಭದ್ರಾ ನದಿಗಳು ಸಂಗಮಿಸುವುದರಿಂದ ಹುಟ್ಟುವ ತುಂಗಭದ್ರಾ ನದಿ ಹಂಪಿಯ ಮೂಲಕ ಹರಿದು ಮುಂದೆ ಕೃಷ್ಣಾ ನದಿಯನ್ನು ಸೇರುತ್ತದೆ.
ವಿಜಯನಗರ ಸಾಮ್ರಾಜ್ಯದ ಬೆಳವಣಿಗೆಯಲ್ಲಿ ಈ ನದಿಯ ಪಾತ್ರ ಮಹತ್ವದ್ದಾಗಿತ್ತು. ಕೃಷಿಗೆ ನೀರು ಒದಗಿಸುವುದರ ಜೊತೆಗೆ, ನದಿಯ ಭೌಗೋಳಿಕ ಸ್ಥಾನವು ಸಾಮ್ರಾಜ್ಯದ ರಾಜಧಾನಿಗೆ ನೈಸರ್ಗಿಕ ರಕ್ಷಣೆಯನ್ನೂ ಒದಗಿಸಿತ್ತು. ನದಿಯ ತಟದಲ್ಲಿ ಬೆಳೆದ ಈ ನಗರವು ವ್ಯಾಪಾರ, ಧಾರ್ಮಿಕ ಚಟುವಟಿಕೆಗಳು, ಕಲೆ ಮತ್ತು ವಾಸ್ತುಶಿಲ್ಪದ ಪ್ರಮುಖ ಕೇಂದ್ರವಾಗಿ ಬೆಳೆದಿತ್ತು.
ಇಂದು ಹಂಪಿಯ ಸಂಗೀತದ ಕಂಬಗಳು ಕೇವಲ ಪ್ರವಾಸಿ ಆಕರ್ಷಣೆಯಲ್ಲ. ಅವು ಕಲ್ಲಿನೊಳಗಿನ ಧ್ವನಿಯ ಸಾಧ್ಯತೆಗಳನ್ನು ಅರಿತಿದ್ದ ಪ್ರಾಚೀನ ಶಿಲ್ಪಿಗಳ ಕೌಶಲ, ವಿಜಯನಗರದ ಸಾಂಸ್ಕೃತಿಕ ವೈಭವ ಮತ್ತು ಭಾರತೀಯ ವಾಸ್ತುಶಿಲ್ಪದ ಸೃಜನಶೀಲತೆಯನ್ನು ಪರಿಚಯಿಸುವ ಅಪರೂಪದ ಪರಂಪರೆಯಾಗಿದೆ. ಕಲ್ಲಿನ ಕಂಬವೊಂದರಿಂದ ಸಂಗೀತದ ನಾದವನ್ನು ಹೊರಹೊಮ್ಮಿಸುವ ಈ ಕಲ್ಪನೆಯೇ ಶತಮಾನಗಳ ನಂತರವೂ ಜನರಲ್ಲಿ ಅಚ್ಚರಿ ಮೂಡಿಸುತ್ತಿದೆ.