ಇಂಟರ್ ನೆಟ್ ಸೌಲಭ್ಯದಿಂದಾಗಿ ಜಗತ್ತು ತುಂಬಾ ಕಿರಿದಾಗಿ ಕಾಣುತ್ತಿದೆ. ಕೈಯಲ್ಲೊಂದು ಮೊಬೈಲ್ ಇದ್ದರೆ ಜಗತ್ತೇ ಅಂಗೈಯಲ್ಲಿ ಎನ್ನುವ ತಂತ್ರಜ್ಞಾನ, ಅಭಿವ್ಯಕ್ತಿ ಸ್ವಾತಂತ್ರ್ಯದ ದನಿಯಾಗಿರುವ ಸಾಮಾಜಿಕ ತಾಣಗಳು ಮನುಷ್ಯನನ್ನು ಬೆಸೆಯುವ ಕೊಂಡಿಗಳಾಗಿ ಮಾರ್ಪಟ್ಟಿವೆ. ಫೇಸ್ ಬುಕ್, ಟ್ವಿಟರ್, ಇನ್ ಸ್ಟಾಗ್ರಾಂ ಯಾವುದೇ ಸಾಮಾಜಿಕ ತಾಣವಿರಲಿ ಜಗತ್ತಿನ ಎಲ್ಲಾ ಆಗುಹೋಗುಗಳು ಇಲ್ಲಿ ಜಗಜ್ಜಾಹೀರಾಗುತ್ತವೆ. ಮನುಷ್ಯ ಪರಸ್ಪರ ಮಾತನಾಡುವುದಕ್ಕಿಂತ ಹೆಚ್ಚು ಸಾಮಾಜಿಕ ಜಾಲತಾಣಗಳ ಮೂಲಕ ಸಂವಹನ ನಡೆಸುತ್ತಾನೆ. ಹೀಗೆ ಸಾಮಾಜಿಕ ತಾಣಗಳು ನಮ್ಮ ಜೀವನದ ಅವಿಭಾಜ್ಯ ಅಂಗಗಳಾಗಿ ಮಾರ್ಪಟ್ಟಿವೆ. ಆದಾಗ್ಯೂ, ಸಾಮಾಜಿಕ ತಾಣಗಳ ಬಳಕೆಗೂ ನೀತಿ ಸಂಹಿತೆ ಇದೆ. ಆದರೆ ಹೆಚ್ಚಿನ ನೆಟಿಜನ್ ಗಳಿಗೆ ಈ ಬಗ್ಗೆ ಅರಿವು ಇರುವುದಿಲ್ಲ. ಹೀಗಾಗಿ ಸಾಮಾಜಿಕ ಜಾಲತಾಣಗಳು ಅಸುರಕ್ಷಿತ ವಾತಾವರಣವನ್ನು ಸೃಷ್ಟಿಸುತ್ತವೆ. ಯಾವುದೇ ಸಾಮಾಜಿಕ ತಾಣಗಳನ್ನು ಬಳಸುವಾಗ ಅವು ನಮ್ಮ ವೈಯಕ್ತಿಕ ಡೈರಿ ಅಲ್ಲ ಎಂಬುದು ನೆನಪಿನಲ್ಲಿಟ್ಟುಕೊಳ್ಳಬೇಕು. ಅಷ್ಟೇ ಅಲ್ಲ, ಪ್ರತಿಯೊಂದು ತಾಣವನ್ನು ಬಳಸುವಾಗ ಆ ತಾಣದ ಉಪಯೋಗ ಮತ್ತು ದುರುಪಯೋಗಗಳ ಬಗ್ಗೆಯೂ ಅರಿವು ಇರಬೇಕು.