ವಿಶ್ವಸಂಸ್ಥೆಯಲ್ಲಿ ಕಾಶ್ಮೀರ ವಿವಾದ ಪ್ರಸ್ತಾಪ: ಒಐಸಿ ಮಧ್ಯಪ್ರವೇಶಕ್ಕೆ ಪಾಕ್ ಆಗ್ರಹ

ಕಾಶ್ಮೀರ ವಿವಾದಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ಮತ್ತೆ ತನ್ನ ಕ್ಯಾತೆ ಮುಂದುವರೆಸಿದ್ದು, ವಿಶ್ವಸಂಸ್ಥೆಯಲ್ಲಿ ವಿಷಯ ಪ್ರಸ್ತಾಪಿಸಿ ವಿಶ್ವ ಸಮುದಾಯ ಮತ್ತು ಇಸ್ಲಾಮಿಕ್ ಸಹಕಾರ ಸಂಸ್ಥೆಯ ಮಧ್ಯಪ್ರವೇಶಕ್ಕೆ ಆಗ್ರಹಿಸಿದೆ.
ವಿಶ್ವಸಂಸ್ಥೆಯ ಪಾಕಿಸ್ತಾನದ ಶಾಶ್ವತ ಪ್ರತಿನಿಧಿ ಮಲೀಹ ಲೋಧಿ (ಸಂಗ್ರಹ ಚಿತ್ರ)
ವಿಶ್ವಸಂಸ್ಥೆಯ ಪಾಕಿಸ್ತಾನದ ಶಾಶ್ವತ ಪ್ರತಿನಿಧಿ ಮಲೀಹ ಲೋಧಿ (ಸಂಗ್ರಹ ಚಿತ್ರ)

ವಿಶ್ವಸಂಸ್ಥೆ: ಕಾಶ್ಮೀರ ವಿವಾದಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ಮತ್ತೆ ತನ್ನ ಕ್ಯಾತೆ ಮುಂದುವರೆಸಿದ್ದು, ವಿಶ್ವಸಂಸ್ಥೆಯಲ್ಲಿ ವಿಷಯ ಪ್ರಸ್ತಾಪಿಸಿ ವಿಶ್ವ ಸಮುದಾಯ ಮತ್ತು ಇಸ್ಲಾಮಿಕ್ ಸಹಕಾರ  ಸಂಸ್ಥೆಯ ಮಧ್ಯ ಪ್ರವೇಶಕ್ಕೆ ಆಗ್ರಹಿಸಿದೆ.

ಇತ್ತ ಭಾರತ-ಪಾಕಿಸ್ತಾನ ಗಡಿಯಲ್ಲಿ ಪಾಕ್ ಸೈನಿಕರು ಕದನ ವಿರಾಮ ಉಲ್ಲಂಘನೆ ಮಾಡಿ ಭಾರತೀಯ ಸೈನಿಕರತ್ತ ಗುಂಡಿನ ದಾಳಿ ನಡೆಸುತ್ತಿರುವಂತೆಯೇ ಅತ್ತ ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನ  ಮತ್ತೆ ಕಾಶ್ಮೀರ ವಿವಾದವನ್ನು ಪ್ರಸ್ತಾಪಿಸುವ ಮೂಲಕ ಭಾರತದ ಕೆಂಗಣ್ಣಿಗೆ ಗುರಿಯಾಗಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆಯಲ್ಲಿ ಆಯೋಜಿಸಿದ್ದ "ಪ್ರಾದೇಶಿಕ ಸಂಸ್ಥೆಗಳು ಮತ್ತು  ಸಮಕಾಲೀನ ಜಾಗತಿಕ ಭದ್ರತಾ ಸವಾಲು"ಗಳ ಕುರಿತ ಚರ್ಚೆ ವೇಳೆ ಪಾಕಿಸ್ತಾನದ ಶಾಶ್ವತ ಪ್ರತಿನಿಧಿ ಮಲೀಹ ಲೋಧಿ ಅವರು ಈ ವಿಚಾರವನ್ನು ಪ್ರಸ್ತಾಪಿಸಿದ್ದಾರೆ.

ಈ ವೇಳೆ ಮಾತನಾಡಿದ ಮಲೀಹ ಲೋಧಿ ಅವರು, " ಜಾಗತಿಕ ಶಾಂತಿ ಮತ್ತು ಸಮೃದ್ಧಿಯ ಪ್ರಚಾರಕ್ಕೆಇಸ್ಲಾಮಿಕ್ ಸಹಕಾರ ಸಂಸ್ಥೆ (OIC)ಯ 57 ಸದಸ್ಯರು ಶ್ರಮಿಸಲು ಸಿದ್ಧರಿದ್ದಾರೆ.  ವಿಶ್ವಸಂಸ್ಥೆ ಸಹಕಾರ ಮತ್ತು ವಿಶ್ವ ಸಮುದಾಯ ಒಗ್ಗೂಡಿದರೆ ಕಾಶ್ಮೀರ ವಿವಾದ ಸೇರಿದಂತೆ ಪಾಲೆಸ್ತೀನ್ ಸಮಸ್ಯೆ ಮತ್ತು ಮಧ್ಯ ಪ್ರಾಚ್ಯ ಭಾಗದ ಘರ್ಷಣೆಗಳನ್ನು ತಡೆಯಬಹುದು. ಹೀಗಾಗಿ  ವಿಶ್ವಸಂಸ್ಥೆ ಈ ಬಗ್ಗೆ ಗಂಭೀರವಾಗಿ ಚಿಂತಿಸಬೇಕಿದ್ದು, ವಿವಾದಕ್ಕೆ ಸಂಬಂಧಿಸಿದಂತೆ ಮಧ್ಯ ಪ್ರವೇಶ ಮಾಡುವ ಮೂಲಕ ಸಂಧಾನಕ್ಕೆ ಮುಂದಾಗಬೇಕು ಎಂದು ಅವರು ಹೇಳಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ಗಡಿಯಲ್ಲಿ ಕಳೆದ ಹಲವು ದಿನಗಳಿಂದ ನಡೆಯುತ್ತಿರುವ ನಿರಂತರ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ತೀವ್ರ ಕಳವಳ ವ್ಯಕ್ತಪಡಿಸಿದ್ದ ವಿಶ್ವಸಂಸ್ಥೆ ಮುಖ್ಯಸ್ಥ  ಬಾನ್ ಕಿ ಮೂನ್ ಅವರು ಪರಸ್ಪರ ಸಂಯಮ ಕಾಯ್ದುಕೊಳ್ಳುವಂತೆ ಉಭಯ ದೇಶಗಳಿಗೆ ಸಲಹೆ ನೀಡಿದ್ದರು. ಇದರ ಬೆನ್ನಲ್ಲೇ ವಿಶ್ವಸಂಸ್ಥೆ ಕಾರ್ಯಕ್ರಮದಲ್ಲಿ ಪಾಕಿಸ್ತಾನದ ಸದಸ್ಯೆ ಮಲೀಹ  ಲೋಧಿ ಅವರು ಈ ವಿಚಾರ ಪ್ರಸ್ತಾಪ ಮಾಡಿದ್ದಾರೆ.

ಇದೇ ಆಗಸ್ಟ್ 23 ರಂದು ಉಭಯ ದೇಶಗಳ ಭದ್ರತಾ ಸಲಹೆಗಾರರಾದ ಅಜಿತ್ ಧೋವಲ್ ಮತ್ತು ಸರ್ತಾಜ್ ಏಜಾಜ್ ಅವರು ದೆಹಲಿಯಲ್ಲಿ ಸಭೆ ಸೇರುತ್ತಿದ್ದು, ಭೇಟಿ ವೇಳೆ ಗಡಿಯಲ್ಲಿನ  ಪರಿಸ್ಥಿತಿ ಕುರಿತು ಚರ್ಚೆ ನಡೆಸಲಿದ್ದಾರೆ. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಮತ್ತು ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರ ಭೇಟಿಯಾಗುವ ಕುರಿತು ನಿರ್ಧಾರ ಕೈಗೊಳ್ಳುವ ಸಾಧ್ಯತೆ  ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com