

ನವದೆಹಲಿ: ಅಮೆರಿಕ ಅಧಿಕಾರಿಗಳು ದಾವೂದ್ ಇಬ್ರಾಹಿಂ ನ ಹಣ ವಿನಿಮಯ ಮಾಡುತ್ತಿದ್ದ ಫೈನಾನ್ಸಿಯರ್ ಅಲ್ತಫ್ ಖನಾನಿಯನ್ನು ಬಂಧಿಸಿದ್ದಾರೆ.
ಅಮೇರಿಕಾದ ಮಾದಕ ಪದಾರ್ಥ ಜಾರಿ ಕಾರ್ಯಾಲಯದ ಅಧಿಕಾರಿಗಳು ಸೆ.11 ರಂದು ಅಲ್ತಫ್ ಖನಾನಿಯನ್ನು ಬಂಧಿಸಿದ್ದು, ಪಾಕಿಸ್ತಾನ ಮೂಲದ ಖನಾನಿ ಹಣ ವಿನಿಮಯ ಸಂಸ್ಥೆ, ದುಬೈ ಮೂಲದ ಅಲ್ ಜರೂನಿ ವಿನಿಮಯ ಸಂಸ್ಥೆ ಕಾರ್ಯನಿವರ್ಹಣೆಗೆ ನವೆಂಬರ್ 13 ರಂದು ನಿರ್ಬಂಧ ವಿಧಿಸಿದ್ದಾರೆ.
ಖನಾನಿ ಹಣ ವಿನಿಮಯ ಸಂಸ್ಥೆ, ಜರೂನಿ ವಿನಿಮಯ ಸಂಸ್ಥೆ ಭಯೋತ್ಪಾದಕ ಸಂಘಟನೆ ಹಾಗೂ ದಾವೂದ್ ಇಬ್ರಾಹಿಂ ನೊಂದಿಗೆ ನಂಟು ಹೊಂದಿದೆ. ಪ್ರಮುಖ ಬೆಳವೆಣಿಗೆಯೆಂದರೆ ಕಾರ್ಯಾಚರಣೆ ನಡೆಸಿರುವ ಅಮೆರಿಕ ಅಧಿಕಾರಿಗಳಿಗೆ ಬಂಧಿತ ಖನಾನಿ ಕರೆನ್ಸಿ ವಿನಿಮಯ( ಹಣ ವಿನಿಮಯ) ವಿಷಯದಲ್ಲಿ ದಾವೂದ್ ಇಬ್ರಾಹಿಂ ಗೆ ಸಹಾಯ ಮಾಡುತ್ತಿದ್ದ ಎಂಬುದಕ್ಕೆ ಮಹತ್ವದ ಸಾಕ್ಷಿ ದೊರೆತಿದೆ.
ಖನಾನಿ ಹಣ ವರ್ಗಾವಣೆ ಸಂಸ್ಥೆ, ಯುಎಇ, ಅಮೇರಿಕಾದ, ಬ್ರಿಟನ್, ಕೆನಡಾ, ಆಸ್ಟ್ರೇಲಿಯಾ ಸೇರಿದಂತೆ ಹಲವು ದೇಶಗಳಿಂದ ಅಕ್ರಮ ಹಣ ಪಾಕಿಸ್ತಾನಕ್ಕೆ ಅಕ್ರಮವಾಗಿ ಹಣ ವರ್ಗಾವಣೆ ಮಾಡುತ್ತಿದ್ದು, ತಾಲಿಬಾನ್ ನಂತಹ ಉಗ್ರ ಸಂಘಟನೆಗಳಿಗೆ ವಾರ್ಷಿಕವಾಗಿ ಬಿಲಿಯನ್ ಡಾಲರ್ ಗಟ್ಟಲೆ ಹಣವನ್ನು ವ್ಯವಸ್ಥಿತ ಅಪರಾಧಗಳಿಗಾಗಿ ವರ್ಗಾವಣೆ ಮಾಡುತ್ತಿದೆ ಎಂಬ ಮಾಹಿತಿ ಬಹಿರಂಗವಾಗಿದೆ.
ಖನಾನಿ ಬಂಧನದಿಂದ ಡಿ-ಕಂಪನಿಯ ವ್ಯಾಪಾರ ವಹಿವಾಟುಗಳಿಗೆ ಹೊಡೆತಬಿದ್ದಿದ್ದು, ಮುಂದಿನ ಟಾರ್ಗೆಟ್ ದಾವೂದ್ ಇಬ್ರಾಹಿಂ ಎನ್ನಲಾಗುತ್ತಿದೆ.