ಯು ಎನ್ ಎಚ್ ಆರ್ ಸಿ: ಇಸ್ರೇಲ್ ವಿರುದ್ಧ ಮತ ಹಾಕುವುದರಿಂದ ಹಿಂದೆ ಸರಿದ ಭಾರತ

೨೦೧೪ ಗಾಜಾ ವಿವಾದದಲ್ಲಿ ಇಸ್ರೇಲ್ ದೇಶ ಎಸಗಿರುವ ಯುದ್ಧ ಅಪರಾಧಗಳನ್ನು ಖಂಡಿಸಿದ ವಿಶ್ವಸಂಸ್ಥೆ ಮಾನವ ಹಕ್ಕುಗಳ ಆಯೋಗದ ಮಂಡನೆಗೆ ಮತ
ಪ್ಯಾಲೆಸ್ಟೇನಿಯನ್ನರ ವಿರದ್ಧ ಇಸ್ರೇಲ್ ನಡೆಸಿದ್ದ ಯುದ್ಧದ ಒಂದು ದೃಶ್ಯ
ಪ್ಯಾಲೆಸ್ಟೇನಿಯನ್ನರ ವಿರದ್ಧ ಇಸ್ರೇಲ್ ನಡೆಸಿದ್ದ ಯುದ್ಧದ ಒಂದು ದೃಶ್ಯ

ನವದೆಹಲಿ: ೨೦೧೪ ಗಾಜಾ ವಿವಾದದಲ್ಲಿ ಇಸ್ರೇಲ್ ದೇಶ ಎಸಗಿರುವ ಯುದ್ಧ ಅಪರಾಧಗಳನ್ನು ಖಂಡಿಸಿದ ವಿಶ್ವಸಂಸ್ಥೆ ಮಾನವ ಹಕ್ಕುಗಳ ಆಯೋಗದ ಮಂಡನೆಗೆ ಮತ ಹಾಕುವುದರಿಂದ ಭಾರತ ತನ್ನ ನಿಲುವು ಬದಲಿಸಿಕೊಂಡು ಹಿಂದೆ ಸರಿದಿದೆ.

ಆದರೆ ಶುಕ್ರವಾರ ಸ್ಪಷ್ಟೀಕರಣ ನೀಡಿರುವ ಭಾರತ "ಪ್ಯಾಲೆಸ್ಟೇನಿಯನ್ನರ ಹೋರಾಟಕ್ಕೆ ಭಾರತ ಬೆಂಬಲ ಎಂದೆಂದಿಗೂ ಇದ್ದು, ಈ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದಿದೆ".

ವಿಶ್ವಸಂಸ್ಥೆಯ ಖಂಡನೆ ಅಂತರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯಕ್ಕೆ(ಐ ಸಿ ಸಿ) ಒಳಪಟ್ಟಿರುವುದರಿಂದ ನಾವು ಮತ ಹಾಕುವುದರಿಂದ ಹಿಂದೆಸರಿದಿದ್ದೇವೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್ ತಿಳಿಸಿದ್ದಾರೆ.

"ಭಾರತ ಐ ಸಿ ಸಿ ಒಪ್ಪಂದಕ್ಕೆ ಪಾಲುದಾರನಲ್ಲ" ಎಂದು ಅವರು ತಿಳಿಸಿದ್ದಾರೆ.

"ಈ ಹಿಂದೆ ಕೂಡ ಮಾವ ಹಕ್ಕುಗಳ ಆಯೋಗ ಸಿರಿಯಾ ಮತ್ತು ಉತ್ತರ ಕೊರಿಯಾ ದೇಶಗಳ ಖಂಡನೆಯನ್ನು ಐ ಸಿ ಸಿಗೆ ನೇರವಾಗಿ ವಹಿಸಿದಾಗ ನಾವು ಮತ ಹಾಕಿರಲಿಲ್ಲ" ಎಂದು ಅವರು ತಿಳಿಸಿದ್ದಾರೆ. ಇಂದಿನ ಖಂಡನೆಯಲ್ಲೂ ಇದೇ ತಂತ್ರ ಪಾಲಿಸಿದ್ದೇವೆ ಎಂದು ವಿಕಾಸ್ ಸ್ವರೂಪ್ ಹೇಳಿದ್ದಾರೆ.

ಯು ಎನ್ ಎಚ್ ಆರ್ ಸಿ ಯ ೪೭ ರಾಷ್ಟ್ರಗಳಲ್ಲಿ ೪೧ ದೇಶಗಳು ಈ ಖಂಡನೆಗೆ ಸಹಮತ ತೋರಿ ಮತ ಹಾಕಿದ್ದರೆ ಅಮೇರಿಕಾ ಈ ಖಂಡನೆಯನ್ನು ವಿರೋಧಿಸಿ ಮತ ಹಾಕಿದೆ. ಭಾರತವೂ ಒಳಗೊಂಡಂತೆ ಐದು ದೇಶಗಳು ತಟಸ್ಥವಾಗಿ ಉಳಿದಿವೆ.

ಈ ವರ್ಷ ಪ್ರಧಾನಿ ನರೇಂದ್ರ ಮೋದಿ ಇಸ್ರೇಲ್ ಪ್ರವಾಸ ಕೈಗೊಳ್ಳಲಿದ್ದು, ಭಾರತ ಮೊದಲ ಬಾರಿಗೆ ಇಸ್ರೇಲ್ ಯುದ್ಧ ಅಪರಾಧ ಖಂಡನೆಯ ಪರವಾಗಿ ಮತ ಹಾಕುವುದರಿಂದ ಹಿಂದೆ ಸರಿದಿರುವುದು, ತನ್ನ ನೀತಿಯಲ್ಲಿ ತಂದುಕೊಂಡಿರುವ ಭಾರಿ ಬದಲಾವಣೆಯಾಗಿದೆ. ಇಸ್ರೇಲ್ ದೇಶಕ್ಕೆ ಭೇಟಿ ನೀಡುತ್ತಿರುವ ಭಾರತದ ಮೊದಲ ಪ್ರಧಾನಿಯಾಗಲಿದ್ದಾರೆ ಮೋದಿ..

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com