

ಥ್ಯಾಂಪಿಕೊ: ಎಂಥಾ ಕಾಲ ಬಂಥಪ್ಪ, ಹೆಂಡ್ತಿ ಇಸ್ತ್ರಿ ಮಾಡಲಿಲ್ಲವೆಂದು, ಗಂಡನೇ ಆಕೆಯನ್ನು ಜೈಲಿಗೆ ಅಟ್ಟೋದೇ?
ಹೌದು, ಇದು ಆಗಿರೋದು ದೂರದ ಮೆಕ್ಸಿಕೋದಲ್ಲಿ. ಇಂಗ್ಲಿಷ್ನಲ್ಲಿ ವೈಫ್ ಅನ್ನೋ ಪದವನ್ನು ಅಕ್ಷರಶಃ ಬಿಡಿಸಿ `ವಾಷಿಂಗ್ ಐರನಿಂಗ್ ಫುಡ್ ಎಂಟರ್ಟೇನ್ ಮೆಂಟ್' ಅಂತ ಜೋಕು ಮಾಡ್ತಿರ್ತಾರೆ. ಇದನ್ನೇ ಸೀರಿಯಸ್ಸಾಗಿ ತೆಗೆದುಕೊಂಡಿರುವ ಆತ, ಇಷ್ಟೆಲ್ಲಾ ರದ್ಧಾಂತ ಮಾಡಿಬಿಟ್ಟಿದ್ದಾನೆ. ಆಕೆ ಇನ್ನೂ ಈಗಷ್ಟೆ ಹದಿಹರೆಯ ದಾಟಿದ 21ರ ಯುವತಿ. ಡಲ್ಸ್ ರೆಕ್ವಿನಾ ಗಾರ್ಸಿಯಾ ಆಕೆಯ ಹೆಸರು. ಈಗಿನ ಕಾಲದಲ್ಲೂ ಮನೆಗೆಲಸ, ಗಂಡನ ಸೇವೆ ಮಾಡು ಅಂತ ಕೇಳೋದು ತಪ್ಪು ಎಂಬ ಲೆಕ್ಕಾಚಾರ ಇರುವಾಗ ಇಸ್ತ್ರಿ ಮಾಡಲಿಲ್ಲವೆಂದು ಜೈಲಿಗೆ ಅಟ್ಟಿದ್ದಾನೆ ಎಂಬುದೇ ಅಚ್ಚರಿಯ ವಿಚಾರ.
ಆಗಿದ್ದಿಷ್ಟು, ಟ್ರಕ್ ಡ್ರೈವಿಂಗ್ ವೃತ್ತಿಯ ಪತಿರಾಯ ಎಡ್ಗರ್ ಇವಾನ್ ಮನೆಗೆ ದಡಬಡಾಯಿಸಿಕೊಂಡು ಬಂದವನೇ, ಹೆಂಡತಿಗೆ ಬಟ್ಟೆ ಐರನ್ ಮಾಡಿಕೊಡಲು ಹೇಳಿದ್ದಾನೆ. ಗೆಳತಿಯ ಮನೆಗೆ ಹೋಗಬೇಕೆಂದು ಅರ್ಜೆಂಟ್ ಮಾಡಿದ್ದಾನೆ. ಆದರೆ ಪತ್ನಿ ಅವನ ಮಾತಿಗೆ ಸೊಪ್ಪು ಹಾಕಿಲ್ಲ. ಗದರಿ ಕೆಲಸ ಮಾಡಿಸಲು ಹೊರಟಾಗ, ಇನ್ನೊಬ್ಬಾಕೆಯನ್ನು ನೋಡಲು ಹೊರಟಿದ್ದೀಯ. ಬೇಕಾದ್ರೆ ನೀನೇ ಮಾಡ್ಕೊ ಎಂದು ನಿರ್ಲಕ್ಷ ತೋರಿಸಿದ್ದಾಳೆ. ಇದರಿಂದ ಕುಪಿತನಾದ ಪತಿ ತಕ್ಷಣಕ್ಕೆ ಪೊಲೀಸರಿಗೆ ಕರೆ ಮಾಡಿ, ತನ್ನ ಹೆಂಡತಿ ಇಡೀ ದಿನ ಟಿವಿ ಮುಂದೆ ಕಾಲ ಕಳೀತಾಳೆಂದೂ, ನಯಾಪೈಸೆ ಮನೆಗೆಲಸ ಮಾಡೋದಿಲ್ಲವೆಂದೂ ಉತ್ಪ್ರೇಕ್ಷಿಸಿ ದೂರು ನೀಡಿದ್ದಾನೆ.
ತಕರಾರು ಬಗೆಹರಿಸಿ ಸಮಾಧಾನ ಹೇಳಿ ಕಳಿಸುವ ಬದಲು ಪೊಲೀಸರು, ಆಕೆಗೆ ರು.1500 ದಂಡ ವಿಧಿಸಿದ್ದಾರೆ. ಪಾಪ ಆಕೆಯ ಬಳಿ ಅಷ್ಟು ಹಣ ಇರಲಿಲ್ಲವಂತೆ. ಪೊಲೀಸರು ಗಂಡನಿಗೆ ಆಕೆಯ ಪರವಾಗಿ ದಂಡ ಕಟ್ಟುವಂತೆ ಕೇಳಿದ್ದಾರೆ. ಕಟ್ಟದ ಆಕೆಯನ್ನು 12 ಗಂಟೆ ಸೆರೆಮನೆಯಲ್ಲಿ ಕೂರಿಸಿದ್ದಾರೆ. ಇದಕ್ಕೆ ಸಾಕಷ್ಟು ಆಕ್ಷೇಪವೂ ವ್ಯಕ್ತವಾಗಿದೆ.