

ಲಂಡನ್: ಎನ್ನಾರೈ ಕೈಗಾರಿಕೋದ್ಯಮಿ, ಲಂಡನ್ನ ಕೋಟ್ಯಧಿತಿಗಳಲ್ಲಿ ಒಬ್ಬರಾದ ಲಾರ್ಡ್ ಸ್ವರಾಜ್ ಪೌಲ್ ಅವರ ಪುತ್ರ ಅಂಗದ್ ಪೌಲ್ (45) ಅವರು ಭಾನುವಾರ ಲಂಡನ್ನ ತಮ್ಮ
ಬಹುಅಂತಸ್ತಿನ ಕಟ್ಟಡದಿಂದ ಬಿದ್ದು ಸಾವನ್ನಪ್ಪಿದ್ದಾರೆ.
8ನೇ ಮಹಡಿಯಿಂದ ಬಿದ್ದ ಕ್ಯಾಪರೋ ಗ್ರೂಪ್ನ ಸಿಇಒ ಅಂಗದ್ ತೀವ್ರ ಗಾಯಗೊಂಡು, ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಸದ್ಯಕ್ಕೆ ಈ ಸಾವಿನ ದಿನ ಕಾರಣಗಳ ಬಗ್ಗೆ ಯಾವುದೇ ಅನುಮಾನ ಮೂಡಿಲ್ಲ. ತನಿಖೆಯ ಬಳಿಕವಷ್ಟೇ ಸತ್ಯಾಂಶ ಹೊರಬೀಳಲಿದೆ ಎಂದು ಲಂಡನ್ ಪೊಲೀಸರು ತಿಳಿಸಿದ್ದಾರೆ.
ಉಕ್ಕಿನ ದರದಲ್ಲಾದ ಗಣನೀಯ ಇಳಿಕೆಯಿಂದಾಗಿ ಅಂಗದ್ ಅವರ ಕಂಪನಿ ಕ್ಯಾಪರೋ ಗ್ರೂಪ್ ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಒಳಗಾಗಿರುವ ಸಂದರ್ಭದಲ್ಲೇ ಇಂತಹುದೊಂದು ದುರ್ಘಟನೆ ಸಂಭವಿಸಿದೆ. ಕ್ಯಾಪರೋ ಗ್ರೂಪ್ ಭಾರತ ಸೇರಿದಂತೆ ವಿಶ್ವಾದ್ಯಂತ 40 ಕಂಪನಿಗಳನ್ನು ಹೊಂದಿದ್ದು, 10 ಸಾವಿರ ಮಂದಿ ನೌಕರರನ್ನು ಒಳಗೊಂಡಿದೆ. ವರ್ಷಕ್ಕೆ ಸುಮಾರು ಒಂದು ಶತಕೋಟಿ ಪೌಂಡ್ನಷ್ಟು ವಹಿವಾಟು ಕೂಡ ನಡೆಸುತ್ತಿದೆ. ಸೂಪರ್ ಫಾಸ್ಟ್ ಕಾರು ಉತ್ಪಾದನೆ, ಸಿನಿಮಾ, ವಿನ್ಯಾಸ, ಹೋಟೆಲ್, ಸ್ಟೀಲ್ ಪೈಪ್ ಗಳು ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ
ಗುರುತಿಸಿಕೊಂಡಿದೆ.
ಇತ್ತೀಚೆಗೆ ತೀವ್ರ ಬಿಕ್ಕಟ್ಟಿಗೆ ಒಳಗಾದ ಕಂಪನಿ 450 ಮಂದಿಯನ್ನು ಕೆಲಸದಿಂದ ತೆಗೆದುಹಾಕಿತ್ತು. ಇನ್ನೂ 1,200 ಮಂದಿಯ ಭವಿಷ್ಯ ತೂಗುಯ್ಯಾಲೆಯಲ್ಲಿದೆ. ಗ್ರೂಪ್ನ 16 ಕಂಪನಿಗಳು ದಿವಾಳಿಯಾಗಿ ಮುಚ್ಚುವ ಸ್ಥಿತಿ ತಲುಪಿದೆ. ಇಂತಹ ಬಿಕ್ಕಟ್ಟಿನ ನಡುವೆಯೇ ಸ್ವರಾಜ್ ಅವರಿಗೆ ಮಗನ ಸಾವು ಆಘಾತ ಉಂಟು ಮಾಡಿದೆ. ಅಂಗದ್ 10 ವರ್ಷಗಳ ಹಿಂದೆ ವಕೀಲೆ ಮಿಶೆಲ್ ಬೋನ್ರನ್ನು ವಿವಾಹವಾಗಿದ್ದು, ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಅಂಗದ್ರ ತಂದೆ ಸ್ವರಾಜ್ ಪೌಲ್ ಲಂಡನ್ನ 47ನೇ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆ ಹೊಂದಿದ್ದಾರೆ.