

ವಿಯೆಟ್ನಾಂ: ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆಗಳಿಗೆ ಕೊರತೆ ಇಲ್ಲ. ಆದರೆ ಅದರ ವಿರುದ್ಧ ದೊಡ್ಡ ಸಂಖ್ಯೆಯ ಜನತೆ ವೆಬ್‍ಸೈಟ್‍ನ ಆಡಳಿತ ವರ್ಗಕ್ಕೆ ದೂರು ಸಲ್ಲಿಸಿದರೆ ಮಾತ್ರ ಅಂಥ ಖಾತೆಗಳು ಪರಿಶೀಲನೆಗೊಳಪಡುತ್ತವೆ. ಆದರೆ ಕೆಲವು ಹೆಸರುಗಳಿರುತ್ತವೆ. ಅವು ಇನ್ಯಾವುದೋ ಭಾಷೆಯ ಬೈಗುಳವೋ, ಅಶ್ಲೀಲ ಪದವೋ ಆಗಿಬಿಟ್ಟಿರುತ್ತದೆ.
ಆ ಹೆಸರುಗಳು ಹೇಳಲು ಕೂಡ ಮುಜುಗರವಾಗುವಂತಿರುತ್ತವೆ. ಅಂಥ ಹೆಸರುಗಳಲ್ಲಿ ಖಾತೆ ತೆರೆದರೆ ಖುದ್ದು ವೆಬ್ ಸೈಟೇ ಅದನ್ನು ಬ್ಲಾಕ್ ಮಾಡಿ ಬಿಡುತ್ತದೆ. ಕೆಲವೊಮ್ಮೆ ಅವುಗಳು ಕೂಡ ನಕಲಿ ನಾಮದ ನಕಲಿ ಖಾತೆಗಳೇ ಆಗಿರುತ್ತವೆ. ಆದರೆ ಅಪರೂಪದ ಪ್ರಕರಣಗಳಲ್ಲಿ ದುರದೃಷ್ಟವಶಾತ್ ಅವು ನಿಜನಾಮಗಳಾಗಿರುತ್ತವೆ. ತಮ್ಮದಲ್ಲದ ತಪ್ಪಿಗೆ ತೊಂದರೆ ಅನುಭವಿಸುವಂತಾಗುತ್ತದೆ.ಅಂಥದೊಂದು ಪ್ರಕರಣ ಇಲ್ಲಿದೆ.
ವಿಯೆಟ್ನಾಮಿ ಆಸ್ಟ್ರೇಲಿಯದ ಈ ಪ್ರಜೆಯ ಹೆಸರು `ಫೋ ದ ಬಿಕ್' ಎಂದು. ಆದರೆ ಅದರ ಇಂಗ್ಲಿಷ್‍ನ ಸ್ಪೆಲ್ಲಿಂಗ್ ಅತ್ಯಂತ ಕೆಟ್ಟ ಬೈಗುಳದಂತಿದೆ. ಅದೇ ಕಾರಣಕ್ಕೆ ಆತ ಎಷ್ಟೇ ಬಾರಿ ಫೇಸ್‍ಬುಕ್‍ನಲ್ಲಿ ಖಾತೆ ತೆರೆದರೂ ತಕ್ಷಣ ಅದನ್ನು ಬ್ಲಾಕ್ ಮಾಡಲಾಗುತ್ತಿದೆ. ಫೇಸ್‍ಬುಕ್‍ಗೆ ಮನವರಿಕೆ ಮಾಡುವ ನಿಟ್ಟಿನಲ್ಲಿ ಆತ ಈ ಬಗ್ಗೆ ಹಲವು ಬಾರಿ ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ.
ಅಂತಿಮವಾಗಿ ಆತ ಪಾಸ್‍ಪೋರ್ಟ್ ಪುಟವನ್ನೇ ಫ್ರೊಫೈಲ್ ಚಿತ್ರವನ್ನಾಗಿ ಮಾಡಿಕೊಂಡಿದ್ದಾನೆ. ಆನಂತರವೇ ಅದನ್ನು ಫೇಸ್‍ಬುಕ್ ಪರಿಗಣಿಸಿದೆ. ಇದೀಗ ಆ ಪಾಸ್ ಪೋರ್ಟ್ ಪ್ರತಿ ಇರುವ ಚಿತ್ರ ತನ್ನ ಹೆಸರಿನ ಕಾರಣದಿಂದಲೇ ವೈರಲ್ ಆಗಿ 1.25 ಲಕ್ಷ ಶೇರ್‍ಗಳಾಗಿವೆ! ಹೀಗೊಂದು ಖ್ಯಾತಿಗಳಿಸಿದ್ದರೂ ಆತ ತನ್ನ ಹೆಸರಿಂದ ಅನುಭವಿಸುತ್ತಿರುವ ತೊಂದರೆಗೆ ಹೆಸರೇ ಬದಲಾಯಿಸಿಕೊಳ್ಳಲು ಚಿಂತನೆ ನಡೆಸುತ್ತಿದ್ದಾನೆ.