
ಮತ್ತೊಂದೆಡೆ ಫ್ರಾನ್ಸ್ ಅಧ್ಯಕ್ಷ ಫ್ರಾಂಕೋಯಿಸ್ ಹೊಲಾಂಡ್ ಅವರು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರನ್ನು ವಾಷಿಂಗ್ ಟನ್ ನಲ್ಲಿ ಭೇಟಿ ಮಾಡಿದ್ದು, ಇಸ್ಲಾಮಿಕ್ ಸ್ಟೇಟ್ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿರುವ ರಷ್ಯಾಗೆ ಬೆಂಬಲ ನೀಡುವಂತೆ ಕೋರಿದ್ದಾರೆ. ಇದೇ ವೇಳೆ ರಷ್ಯಾ ಯುದ್ಧ ವಿಮಾನವನ್ನು ಹೊಡೆದುರುಳಿಸಿದ ಟರ್ಕಿ ವರ್ತನೆ ವಿರುದ್ಧ ಕೂಡ ಹೊಲಾಂಡ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಇತ್ತ ಇಸಿಸ್ ಉಗ್ರರ ವಿರುದ್ಧ ಕಾರ್ಯಾಚರಣೆಯಲ್ಲಿ ಸಿರಿಯಾಗೆ ಬೆಂಬಲ ನೀಡುತ್ತಿರುವ ರಷ್ಯಾ ಈ ಪ್ರಕರಣದ ಬಳಿಕ ತನ್ನ ಬೆಂಬಲವನ್ನು ಹಿಂಪಡೆಯಲು ಮುಂದಾಗಿದೆ ಎಂದು ಹೇಳಲಾಗುತ್ತಿದ್ದು, ಇದೇ ವಿಚಾರಕ್ಕಾಗಿ ನ್ಯಾಟೋ ತುರ್ತು ಸಭೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಮ್ಮೆ ತಮ್ಮ ಹೇಳಿಕೆಯನ್ನು ಸ್ಪಷ್ಟಪಡಿಸಿರುವ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು, ಸಿರಿಯಾದಲ್ಲಿ ದಾಳಿ ನಡೆಸುತ್ತಿರುವ ರಷ್ಯಾ, ಸಿರಿಯಾ ಅಧ್ಯಕ್ಷ ಅಸ್ಸಾದ್ ಅವರಿಗೆ ಬೆಂಬಲ ನೀಡಲಷ್ಟೇ ಸೇನಾ ಕಾರ್ಯಾಚರಣೆ ನಡೆಸುತ್ತಿದೆ. ಆದರೆ ರಷ್ಯಾ ತನ್ನ ದಾಳಿಯನ್ನು ಉಗ್ರರ ನಿರ್ನಾಮಕ್ಕಾಗಿ ಮಾಡಿದರೆ ಒಳಿತು ಎಂದು ಪರೋಕ್ಷವಾಗಿ ರಷ್ಯಾಗೆ ಟಾಂಗ್ ನೀಡಿದ್ದಾರೆ. ಇದೇ ವೇಳೆ ಟರ್ಕಿಗೆ ತನ್ನ ವಾಯುಗಡಿ ರಕ್ಷಿಸಿಕೊಳ್ಳುವ ಹಕ್ಕಿದೆ ಎಂದು ಹೇಳುವ ಮೂಲಕ ಒಬಾಮ ಪರೋಕ್ಷವಾಗಿ ಟರ್ಕಿ ಬೆಂಬಲಕ್ಕೆ ನಿಂತಿದ್ದಾರೆ.
ಇತ್ತ ರಷ್ಯಾ ಕೂಡ ಅಮೆರಿಕ ಹೇಳಿಕೆಯನ್ನು ತೀಕ್ಷ್ಣವಾಗಿ ವಿರೋಧಿಸಿದ್ದು, ಟರ್ಕಿ ಮೊದಲಿನಿಂದಲೂ ಬಂಡುಕೋರರ ಬೆಂಬಲಕ್ಕೆ ನಿಂತಿದ್ದು, ಇದೇ ಕಾರಣಕ್ಕಾಗಿ ಸಿರಿಯಾದಲ್ಲಿ ಅಸ್ಸಾದ್ ಅವರ ಸರ್ಕಾರವನ್ನು ಪತನಗೊಳಿಸಲು ಯತ್ನಿಸುತ್ತಿದೆ. ಆ ಮೂಲಕ ಟರ್ಕಿ ಗಡಿ ಮುಖಾಂತರವಾಗಿ ಬಂಡುಕೋರರನ್ನು ಸೇರಿಸುವ ಹುನ್ನಾರ ಟರ್ಕಿಯದ್ದಾಗಿದೆ ಎಂದು ರಷ್ಯಾ ಆರೋಪಿಸಿದೆ.
ಒಟ್ಟಾರೆ ರಷ್ಯಾ ಯುದ್ಧ ವಿಮಾನವನ್ನು ಹೊಡೆದುರುಳಿಸಿದ ಟರ್ಕಿ ಕಾರ್ಯ ಇದೀಗ ಬಲಿಷ್ಠ ಸೇನೆಯನ್ನು ಹೊಂದಿರುವ ವಿಶ್ವದ ಎರಡು ರಾಷ್ಟ್ರಗಳ ನಡುವಿನ ಶೀತಲ ಸಮರಕ್ಕೆ ಕಾರಣವಾಗಿದೆ.
ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ
Advertisement