ಸಿಂಗಾಪುರ: ತಮ್ಮ ನೇತೃತ್ವದ ಸರ್ಕಾರ ಭಾರತದಲ್ಲಿ ಹಣಕಾಸು ಸುಧಾರಣೆಗಳನ್ನು ಕೈಗೊಳ್ಳಲು ಮುಂದಾಗಿದೆ. ಮುಂದಿನ ವರ್ಷವೇ ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ) ಕಾನೂನು ಜಾರಿಗೆ ತರಲು ಬದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾನ ಮಾಡಿದ್ದಾರೆ.
ಮಂಗಳವಾರ ಸಿಂಗಾಪುರ-ಭಾರತ ಹಣಕಾಸು ಸಮ್ಮೇಳನದಲ್ಲಿ ಮಾತನಾಡಿದ ಅವರು, 18 ತಿಂಗಳಲ್ಲಿ ಆರ್ಥಿಕ ಸುಧಾರಣೆ ವೇಗವಾಗಿ ನಡೆದಿದೆ ಎಂದಿದ್ದಾರೆ. ವಿದೇಶಿ ನೇರ ಬಂಡವಾಳ ಹೂಡಿಕೆ ಬಗ್ಗೆ ತಮ್ಮ ನೇತೃತ್ವದ ಸರ್ಕಾರ ನಿಯಮಗಳನ್ನು ಸರಳೀಕರಣಗೊಳಿಸಲಾಗಿದೆ.
ಸರಕು ಮತ್ತು ಸೇವೆ ಮಸೂದೆ, ಭಾರತದ 2 ಪ್ರಮುಖ ವಿಮಾನ ನಿಲ್ದಾಣಗಳ ಅಭಿವೃದ್ಧಿ, ಸ್ಮಾರ್ಟ್ ಸಿಟಿಗಳ ನಿರ್ಮಾಣದಂಥ ಮಹತ್ವದ ವಿಷಯ ಕುರಿತು ಮಾತನಾಡಿದ ಅವರು, ಆರ್ಥಿಕ ಅಭಿವೃದ್ಧಿ ಕೊನೆಯ ಮೈಲು ತಲುಪಿದ್ದು, ಪ್ರಗತಿದರ ವೇಗಗೊಳ್ಳಲಿದೆ.
ವಿದೇಶಿ ನೇರ ಹೂಡಿಕೆ ಪ್ರಮಾಣ ಶೇ.40ರಷ್ಟು ಏರಿಕೆ ಕಂಡಿದ್ದೇ ಇದಕ್ಕೆ ನಿದರ್ಶನ. ಅತ್ಯಂತ ಮುಕ್ತ ವಾಣಿಜ್ಯ ವಲಯವಾಗುತ್ತಿರುವ ಭಾರತದ ಆರ್ಥಿಕ ಪ್ರಗತಿ ತ್ವರಿತಗೊಳಿಸಲು ಜಿಎಸ್‍ಟಿ ರೂಪಿಸಲಾಗಿದೆ.
ಕಂಪನಿ ಕಾನೂನು ನ್ಯಾಯಮಂಡಳಿ ಸ್ಥಾಪಿಸಲಾಗಿದ್ದು, ರೈಲ್ವೆ, ಎಲ್ಲರಿಗೂ ವಸತಿ, ಪುನರ್‍ಬಳಕೆ ಇಂಧನ, 19 ಕೋಟಿ ಹೊಸ ಬ್ಯಾಂಕ್ ಖಾತೆ ತೆರೆಯುವಿಕೆ, ಮುದ್ರಾ, ಸ್ವಚ್ಛತೆ ಯಂಥ 14 ಪ್ರಮುಖ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವಿವರಿಸಿದರು. ಬಳಿಕ ಭಾರತೀಯ ಸಮುದಾಯವನ್ನುದ್ದೇಶಿಸಿ ಅವರು ಮಾತನಾಡಿದರು.