
ಕಠ್ಮಂಡು: ನೇಪಾಳದ ಮೊದಲ ಮಹಿಳಾ ರಾಷ್ಟ್ರಪತಿಯಾಗಿ ಆಯ್ಕೆಯಾದ ಬಿಧ್ಯಾ ದೇವಿ ಬಂಡಾರಿಯವರಿಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ಗುರುವಾರ ಅಭಿನಂದನೆ ಸಲ್ಲಿಸಿದ್ದಾರೆ.
ನಿನ್ನೆ ನಡೆದ ರಾಷ್ಟ್ರಪತಿ ಚುನಾವಣೆಯಲ್ಲಿ ಬಿದ್ಯಾ ದೇವಿ ಭಂಡಾರಿ ಅವರು ನೇಪಾಳಿ ಕಾಂಗ್ರೆಸ್ ಎದುರಾಳಿ ಕುಲ್ ಬಹದ್ದೂರ್ ಗುರಾಂಗ್ ಅವರನ್ನು ಸೋಲಿಸಿ ಮೊದಲ ಮಹಿಳಾ ರಾಷ್ಟ್ರಪತಿಯಾಗಿ ಹೊರಹೊಮ್ಮಿದ್ದಾರೆ.
ನೇಪಾಳದ ಮೊದಲ ಮಹಿಳಾ ರಾಷ್ಟ್ರಪತಿಯಾಗಿ ಆಯ್ಕೆಯಾಗಿರುವ ಬಿಧ್ಯಾ ದೇವಿಯವರಿಗೆ ಇಂದು ಪ್ರಣಬ್ ಮುಖರ್ಜಿಯವರು ಶುಭಾಶಯ ಹೇಳಿದ್ದು, ಈ ಬಾರಿ ನೇಪಾಳದಲ್ಲಿ ನಡೆದ ರಾಷ್ಟ್ರಪತಿ ಚುನಾವಣೆ ನೇಪಾಳದ ಇತಿಹಾಸವನ್ನೇ ಬದಲಿಸಿದೆ. ನಿಮ್ಮ ಮಾರ್ಗದರ್ಶನದಿಂದ ನೇಪಾಳವು ಮುಂದಿನ ದಿನಗಳಲ್ಲಿ ಶಾಂತಿ, ಭದ್ರತೆ ಹಾಗೂ ಅಭಿವೃದ್ಧಿಗಳಲ್ಲಿಲ್ಲಿ ಉತ್ತಮ ರೀತಿಯಲ್ಲಿ ಯಶಸ್ವಿ ಸಾಧಿಸಲಿದೆ ಎಂಬುದರ ಬಗ್ಗೆ ನನಗೆ ನಂಬಿಕೆಯಿದೆ ಎಂದು ಹೇಳಿದ್ದಾರೆ.
ಉತ್ತಮ ಗೆಳಯ ಹಾಗೂ ನೆರೆರಾಷ್ಟ್ರವಾಗಿ ಭಾರತ ನೇಪಾಳದೊಂದಿಗೆ ಉತ್ತಮ ಸಂಬಂಧವನ್ನು ಉಳಿಸಿಕೊಂಡು ಹೋಗಲಿದೆ. ನಮ್ಮಿಂದ ಸಾಧ್ಯವಾದಷ್ಟು ಸಹಾಯ ಹಾಗೂ ಬೆಂಬಲವನ್ನು ನೇಪಾಳಕ್ಕೆ ನೀಡುತ್ತೇವೆ. ನೇಪಾಳ-ಭಾರತದ ನಡುವಿನ ಸಂಬಂಧವನ್ನು ಉತ್ತಮಗೊಳಿಸಲು ನೇಪಾಳದೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ ಎಂದು ಹೇಳಿದ್ದಾರೆ.
ಸಿಪಿಎನ್-ಯುಎಂಎಲ್ ಉಪಾಧ್ಯಕ್ಷೆಯಾಗಿದ್ದ ಬಿಧ್ಯಾ ದೇವಿಯವರು 1991ರಲ್ಲಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದ ಕಮ್ಯೂನಿಸ್ಟ್ ನಾಯಕ ಮದನ್ ಭಂಡಾರಿಯವರ ಪತ್ನಿಯಾಗಿದ್ದಾರೆ. ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರು ಇತ್ತೀಚೆಗಷ್ಟೇ ಚೇತರಿಸಿಕೊಂಡಿದ್ದರು.
Advertisement