
ವಿಶ್ವಸಂಸ್ಥೆ: ಮರಣದಂಡನೆ ಶಿಕ್ಷೆಯನ್ನು ರದ್ದುಗೊಳಿಸುವಂತೆ ಭಾರತದ ಕಾನೂನು ಸಮಿತಿ ಮಾಡಿರುವ ಶಿಫಾರಸ್ಸಿಗೆ ವಿಶ್ವಸಂಸ್ಥೆಯ ಮಾನವಹಕ್ಕು ಸಮಿತಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ಗಲ್ಲುಶಿಕ್ಷೆಯನ್ನು ರದ್ದುಗೊಳಿಸುವಂತೆ ಭಾರತಕ್ಕೆ ಸಲಹೆ ನೀಡಿದೆ.
ಗಲ್ಲುಶಿಕ್ಷೆ ರದ್ದತಿ ಕುರಿತಂತೆ ಭಾರತ ಸರ್ಕಾರ ನೇಮಿಸಿದ್ದ ಕಾನೂನು ಸಮಿತಿಯು ಕಳೆದ ಆಗಸ್ಟ್ ನಲ್ಲಿ ತನ್ನ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿತ್ತು. ಅಲ್ಲದೆ ತನ್ನ ಶಿಫಾರಸ್ಸಿನಲ್ಲಿ ಅಪರಾಧಗಳನ್ನು ತಡೆಯುವಲ್ಲಿ ಮರಣದಂಡನೆ ಶಿಕ್ಷೆ ಹೆಚ್ಚೇನು ಪರಿಣಾಮಕಾರಿಯಾಗುತ್ತಿಲ್ಲ. ಹೀಗಾಗಿ ಭಯೋತ್ಪಾದನೆಯಂತಹ ಅಪರಾಧಗಳನ್ನು ಹೊರತುಪಡಿಸಿ ಉಳಿದೆಲ್ಲ ಅಪರಾಧಗಳಿಗೆ ಮರಣದಂಡನೆ ಶಿಕ್ಷೆ ವಿಧಿಸುವುದನ್ನು ಕೈ ಬಿಡಬೇಕು ಎಂದು ಹೇಳಿತ್ತು.
ಇದೀಗ ಭಾರತದ ಕಾನೂನು ಸಮಿತಿಯ ಶಿಫಾರಸ್ಸಿಗೆ ಮೆಚ್ಚುಗೆ ಸೂಚಿಸಿರುವ ವಿಶ್ವಸಂಸ್ಥೆ, ಭಾರತ ಸರ್ಕಾರಕ್ಕೆ ಗಲ್ಲು ಶಿಕ್ಷೆಯನ್ನು ಕೈಬಿಡುವಂತೆ ಸಲಹೆ ನೀಡಿದೆ. "ಗಲ್ಲು ಶಿಕ್ಷೆಗೆ ಸಂಬಂಧಿಸಿದಂತೆ ಭಾರತದ ಕಾನೂನು ಸಮಿತಿಯ ತೀರ್ಮಾನ ಮತ್ತು ಶಿಫಾರಸ್ಸುಗಳು ಭಾರತದಲ್ಲಿ ಮರಣದಂಡನೆಯನ್ನು ನಿಷೇಧಿಸುವ ಪರವಾಗಿ ಒಂದು ಗಟ್ಟಿ ಧ್ವನಿಯನ್ನು ಮೊಳಗುವಂತೆ ಮಾಡಿದೆ. ಹೀಗಾಗಿ ಭಾರತ ಸರ್ಕಾರ ಈ ಶಿಫಾರಸ್ಸನ್ನು ಪರಿಣಾಮಕಾರಿಯಾಗಿ ಜಾರಿ ಮಾಡುವ ಮೂಲಕ ಮರಣದಂಡನೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು" ಎಂದು ವಿಶ್ವಸಂಸ್ಥೆಯ ಮಾನವ ಹಕ್ಕು ಇಲಾಖೆಯ ವಕ್ತಾರ ಕ್ರಿಸ್ಟೋಫ್ ಹೆನ್ಸ್ ಮನವಿ ಮಾಡಿಕೊಂಡಿದ್ದಾರೆ.
ಕಳೆದ ಆಗಸ್ಟ್ 31ರಂದು ಭಾರತದ ಕಾನೂನು ಸಮಿತಿಯು ಭಯೋತ್ಪದನೆಯಂತಪ ಅಪರಾಧಗಳನ್ನು ಹೊರತುಪಡಿಸಿ ಉಳಿದ ಅಪರಾಧಗಳಿಗೆ ನೀಡುವ ಗಲ್ಲುಶಿಕ್ಷೆಯನ್ನು ರದ್ದುಗೊಳಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು.
Advertisement