

ರಾಮೇಶ್ವರಂ: ಅಂತರಾಷ್ಟ್ರೀಯ ಜಲ ಗಡಿ ದಾಟಿ ಮೀನುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ತಮಿಳುನಾಡಿನ 15 ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಸೋಮವಾರ ಬಂಧಿಸಿದೆ.
ಕಾರೈ ನಗರ್ ಎಂಬಲ್ಲಿ ಶ್ರೀಲಂಕಾ ನೌಕಾಪಡೆ ಮೀನುಗಾರರನ್ನು ಬಂಧಿಸಿದೆ. ತಮಿಳುನಾಡಿನ ನಾಗಪಟ್ಟಣಂನ ಅಕ್ಕಾರೈ ಪೆಟ್ಟಯಿಂದ 2 ದೋಣಿಗಳಲ್ಲಿ ಮೀನುಗಾರಿಕೆಗೆ ತೆರಳಿದ್ದರು ಎಂದು ಮೂಲಗಳು ತಿಳಿಸಿವೆ.
ಕಳೆದ ಸೋಮವಾರ ರಾತ್ರಿ ಕಚ್‌ತೀವ್ ಪ್ರದೇಶದಲ್ಲಿ ಮೀನು ಹಿಡಿಯುತ್ತಿದ್ದ 60 ಕ್ಕೂ ಹೆಚ್ಚು ದೋಣಿಗಳ ಮೀನುಗಾರಿಕಾ ಬಲೆಗಳು ಮತ್ತು ಇತರೆ ಸಲಕರಣೆಗಳನ್ನು ಲಂಕಾದ ನೌಕಾಪಡೆ ನಾಶ ಮಾಡಿ ಅವುಗಳನ್ನು ಸಮುದ್ರಕ್ಕೆ ಎಸೆದಿದ್ದರು, ಹೀಗಾಗಿ ಮೀನುಗಾರರು ಬರಿಗೈಯಲ್ಲಿ ಮರಳಿದ್ದರು ಎಂದು ಮೀನುಗಾರರು ಆರೋಪಿಸಿದ್ದಾರೆ. ಇನ್ನು ಬಂಧಿತ ಮೀನುಗಾರರನ್ನು ಕಾಂಗೆಸಂತುರೈ ಎಂಬಲ್ಲಿಗೆ ಕರೆದೊಯ್ಯಲಾಗಿದೆ ಎಂದು ಮೀನುಗಾರಿಕಾ ಇಲಾಖೆ ಜಂಟಿ ನಿರ್ದೇಶಕ ಸುಬ್ಬರಾಜ್ ತಿಳಿಸಿದ್ದಾರೆ.