
ಯುನೈಟೆಡ್ ನೇಷನ್ಸ್: ವಿಶ್ವಸಂಸ್ಥೆಯಲ್ಲಿ ಏ.22 ರಂದು ಸಭೆ ಸೇರಿದ್ದ 175 ದೇಶಗಳ ಪ್ರತಿನಿಧಿಗಳು ಪ್ಯಾರಿಸ್ ನಲ್ಲಿ ನಡೆದಿದ್ದ ಹವಾಮಾನ ಬದಲಾವಣೆ ಒಪ್ಪಂದಕ್ಕೆ ಸಹಿಹಾಕಿದ್ದಾರೆ. ಈ ಮೂಲಕ ಜಾಗತಿಕ ತಾಪಮಾನವನ್ನು ತಗ್ಗಿಸಲು ಕೈಗೊಳ್ಳಬೇಕಾದ ಕ್ರಮಗಳ ತುರ್ತು ಅಗತ್ಯವನ್ನು ಸ್ಪಷ್ಟಪಡಿಸಿದ್ದಾರೆ.
ಒಪ್ಪಂದ ಯಶಸ್ವಿಯಾಗಿ ಕಾರ್ಯಗತವಾಗಲು, ಹಸಿರುಮನೆ ಅನಿಲ ಹೊರಸೂಸುವಿಕೆಗೆ ಕಾರಣವಾಗಿರುವ ಕನಿಷ್ಠ 55 ದೇಶಗಳು ಒಪ್ಪಂದಕ್ಕೆ ಸಹಿ ಹಾಕಿರುವ ಅಂಶಗಳನ್ನು ಜಾರಿಗೊಳಿಸಬೇಕಿದೆ. ಜಾಗತಿಕವಾಗಿ ಅತಿ ಹೆಚ್ಚು ಹಸಿರುಮನೆ ಅನಿಲ ಹೊರಸೂಸುವಿಕೆಗೆ ಕಾರಣವಾಗಿರುವ ಅಮೆರಿಕ, ಚೀನಾ ದೇಶಗಳು ಏ.22 ರಂದು ಒಪ್ಪಂದಕ್ಕೆ ಸಹಿಹಾಕಿದ್ದು ವರ್ಷಾಂತ್ಯಕ್ಕೆ ಒಪ್ಪಂದದಲ್ಲಿರುವ ಅಂಶಗಳನ್ನು ಜಾರಿಗೊಳಿಸಬೇಕಿದೆ.
ದಿನದಿಂದ ದಿನಕ್ಕೆ ಹೆಚ್ಚಿತ್ತಿರುವ ಜಾಗತಿಕ ತಾಪಮಾನವನ್ನು ತಗ್ಗಿಸುವುದಕ್ಕೆ 2015 ರ ಡಿಸಂಬರ್ ನಲ್ಲಿ ನಡೆದ ಹವಾಮಾನ ಬದಲಾವಣೆ ಕುರಿತ ಶೃಂಗಸಭೆಯಲ್ಲಿ ಜಾಗತಿಕ ನಾಯಕರು ಕರೆ ನೀಡಿದ್ದರು. ಇದರ ಭಾಗವಾಗಿ 190ಕ್ಕೂ ಹೆಚ್ಚು ದೇಶಗಳು ಸೇರಿ ಹವಾಮಾನ ಬದಲಾವಣೆ ಬಗೆಗಿನ ಪ್ಯಾರಿಸ್ ಒಪ್ಪಂದವನ್ನು ರೂಪಿಸಿದ್ದವು.
ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್ ಅವರು ಏರ್ಪಡಿಸಿದ್ದ ಸಹಿ ಹಾಕುವ ಸಮಾರಂಭದಲ್ಲಿ ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಭಾರತದ ಪರವಾಗಿ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಚೌಕಟ್ಟಿನ ಆಧಾರದಲ್ಲಿ ಪ್ರಬಲ ಮತ್ತು ಸುಸ್ಥಿರವಾದ ಹವಾಮಾನ ಕರಾರು ರೂಪಿಸಬೇಕು ಎಂಬುದು ಭಾರತದ ಒತ್ತಾಯವಾಗಿತ್ತು. ಭಾರತ ಎತ್ತಿರುವ ಎಲ್ಲ ಮುಖ್ಯ ಕಾಳಜಿ ಮತ್ತು ನಿರೀಕ್ಷೆಗಳನ್ನು ಒಪ್ಪಂದ ಒಳಗೊಂಡಿದೆ.
Advertisement