

ಲಂಡನ್: ಹಿಂದೂ ಸಂಸ್ಕೃತಿ ಆಕ್ರಮಣಶೀಲ ಮತಾಂತರಕ್ಕೆ ಅವಕಾಶ ನೀಡುವುದಿಲ್ಲ ಎಂದು ಆರ್ ಎಸ್ಎಸ್ ನ ಮುಖಂಡ ಮೋಹನ್ ಭಾಗವತ್ ತಿಳಿಸಿದ್ದಾರೆ.
ಹಿಂದುತ್ವ ಒಂದು ಧರ್ಮವಲ್ಲ, ಜೀವನ ವಿಧಾನವಾಗಿದ್ದು ಎಲ್ಲಾ ಅನನ್ಯತೆಗಳನ್ನು ಒಪ್ಪುವ, ಗೌರವಿಸುವ ಸಂಸ್ಕೃತಿಯಾಗಿದೆ, ಬೇರೆ ಯಾವುದೇ ತತ್ವ, ಧರ್ಮವನ್ನು ಅವಲೋಕಿಸಿದ ನಂತರ, ವ್ಯಕ್ತಿಯೋರ್ವ ತನ್ನ ಸ್ವಇಚ್ಛೆಯಿಂದ ಮತಾಂತರವಾಗುವುದಾದರೆ ಅದನ್ನು ನಮ್ಮ ಸಂಸ್ಕೃತಿ ಒಪ್ಪುತ್ತದೆ. ಪ್ರತಿಯೊಬ್ಬ ವ್ಯಕ್ತಿಯು ತನ್ನ ಮತ ಯಾವುದಾಗಿರಬೇಕೆಂಬ ನಿರ್ಧಾರವನ್ನು ಹೊಂದಿರಬಹುದು ಎಂದು ನಮ್ಮ ಸಂಸ್ಕೃತಿ ಹೇಳುತ್ತದೆ. ಆದರೆ ಆಕ್ರಮಣಶೀಲ ಮತಾಂತರವನ್ನು ನಮ್ಮ ಸಂಸ್ಕೃತಿ ಒಪ್ಪುವುದಿಲ್ಲ, ಅದಕ್ಕೆ ಅವಕಾಶವನ್ನೂ ನೀಡುವುದಿಲ್ಲ ಎಂದು ಮೋಹನ್ ಭಾಗವತ್ ಹೇಳಿದ್ದಾರೆ.
ಯುಕೆ ಮೂಲದ ಹಿಂದೂ ಸ್ವಯಂ ಸೇವಕ ಸಂಘ( ಹೆಚ್ಎಸ್ ಎಸ್) ಆಯೋಜಿಸಿದ್ದ ಐಡೆಂಟಿಟಿ, ಇಂಟಿಗ್ರೇಷನ್ ಎಂಬ ವಿಷಯದ ಬಗ್ಗೆ ಆರ್ ಎಸ್ ಎಸ್ ನ ಸರಸಂಘಚಾಲಕರು ಮಾತನಾಡುತ್ತಿದ್ದರು. ಬೇರೆ ಮತಗಳಲ್ಲಿ ನಮಗೆ ಸಮಸ್ಯೆ ಇಲ್ಲ. ಒಗ್ಗಟ್ಟಿನಿಂದ ಇರಬಹುದು ಎಂಬುದನ್ನು ಹಿಂದೂ ತಾನು ಜೀವಿಸುವೆಲ್ಲೆಡೆ ಸಾರುತ್ತಾನೆ. ವಿವಿಧತೆಯನ್ನು ಆಚರಿಸಬೇಕೆಂದು ಹಿಂದುತ್ವ ಹೇಳುತ್ತದೆ ಎಂದು ಮೋಹನ್ ಭಾಗವತ್ ತಿಳಿಸಿದ್ದಾರೆ.