ಕುಲಭೂಷಣ್ ಯಾದವ್ ಕುರಿತ ಅಜೀಜ್ ಹೇಳಿಕೆ "ಸುದ್ದಿ ಸತ್ಯಕ್ಕೆ ದೂರವಾದದ್ದು": ಪಾಕಿಸ್ತಾನ
ಇಸ್ಲಾಮಾಬಾದ್: ಪಾಕಿಸ್ತಾನದ ವಿರುದ್ಧ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದ ಮೇರೆಗೆ ಬಂಧನಕ್ಕೀಡಾಗಿರುವ ಕುಲಭೂಷಣ್ ಯಾದವ್ ಕುರಿತ ನವಾಜ್ ಷರೀಫ್ ಅವರ ಸಲಹೆಗಾರ ಸರ್ತಾಜ್ ಅಜೀಜ್ ಅವರ ಹೇಳಿಕೆ ಕುರಿತ ಸುದ್ದಿ ಸಂಪೂರ್ಣ ತಪ್ಪು ಎಂದು ಪಾಕಿಸ್ತಾನ ಸರ್ಕಾರ ಹೇಳಿದೆ.
ನಿನ್ನೆಯಷ್ಟೇ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರ ಸಲಹೆಗಾರ ಸರ್ತಾಜ್ ಅಜೀಜ್ ಅವರು, ಪಾಕಿಸ್ತಾನದ ವಶದಲ್ಲಿರುವ ಕುಲಭೂಷಣ್ ಯಾದವ್ ಪಾಕಿಸ್ತಾನದ ವಿರುದ್ಧ ಬೇಹುಗಾರಿಕೆ ನಡೆಸುತ್ತಿದ್ದರು ಎಂಬುದರ ಕುರಿತು ಯಾವುದೇ ಪ್ರಬಲ ಸಾಕ್ಷಿ ಲಭ್ಯವಾಗಿಲ್ಲ ಎಂದು ಹೇಳಿದ್ದರು. ಈ ವಿಚಾರ ಪಾಕಿಸ್ತಾನದ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆಯೇ ಈ ಬಗ್ಗೆ ಸ್ಪಷ್ಟನೆ ನೀಡಿರುವ ಪಾಕಿಸ್ತಾನ ವಿದೇಶಾಂಗ ಇಲಾಖೆ ಸರ್ತಾಜ್ ಅಜೀಜ್ ಅವರ ಹೇಳಿಕ ಕುರಿತ ಸುದ್ದಿಗಳು ಸಂಪೂರ್ಣ ತಪ್ಪಾಗಿದ್ದು, ಅವರ ಹೇಳಿಕೆ ಕುರಿತ ಸುದ್ದಿಗಳು ಸತ್ಯಕ್ಕೆ ದೂರವಾದದ್ದು ಎಂದು ಹೇಳಿದೆ.
ಪಾಕಿಸ್ತಾನದ ವಿದೇಶಾಂಗ ಇಲಾಖೆಯ ವಕ್ತಾರರು ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಕುಲಭೂಷಣ್ ಯಾದವ್ ಕುರಿತು ಹೇಳಿಕೆ ನೀಡಿದ್ದ ಸರ್ತಾಜ್ ಅಜೀಜ್ ಅವರು, ಪ್ರಕರಣದ ಸಂಬಂಧ ತನಿಖಾಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಕುಲಭೂಷಣ್ ಯಾದವ್ ಪಾಕಿಸ್ತಾನದ ವಿರುದ್ಧ ಬೇಹುಗಾರಿಕೆ ನಡೆಸುತ್ತಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಮತ್ತು ಅವರ ನೆಟ್ವರ್ಕ್ ಕುರಿತ ತನಿಖೆ ನಡೆಸಲಾಗುತ್ತಿದೆ, ಪ್ರಕರಣ ತನಿಖೆ ಪ್ರಗತಿಯಲ್ಲಿರುವುದರಿಂದ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಆದರೆ ಇದನ್ನು ಮಾಧ್ಯಮಗಳು ತಪ್ಪಾಗಿ ಗ್ರಹಿಸಿದ್ದು, ಈ ಕುರಿತ ಸುದ್ದಿಗಳು ಸಂಪೂರ್ಣ ತಪ್ಪು ಎಂದು ಹೇಳಿದೆ. ಅಲ್ಲದೆ ಯಾವುದೇ ರೀತಿಯ ಸಾಕ್ಷ್ಯಾಧಾರಗಳನ್ನು ಬಹಿರಂಗ ಪಡಿಸುವುದಿಲ್ಲ ಎಂದು ಪಾಕಿಸ್ತಾನ ವಿದೇಶಾಂಗ ಇಲಾಖೆ ಹೇಳಿದೆ. ಅಂತೆಯೇ ಸ್ವತಃ ಕುಲಭೂಷಣ್ ಯಾದವ್ ಅವರು ಕಳೆದ ಮಾರ್ಚ್ ನಲ್ಲಿ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ. ಹೀಗಾಗಿ ಸರ್ತಾಜ್ ಅಜೀಜ್ ಅವರ ಹೇಳಿಕೆ ಕುರಿತ ಸುದ್ದಿ ಸಂಪೂರ್ಣ ತಪ್ಪು ಎಂದು ಹೇಳಿದೆ.
ಕಳೆದ ಮಾರ್ಚ್ ನಲ್ಲಿ ಬಲೂಚಿಸ್ತಾನದ ಮೇಲೆ ದಾಳಿ ನಡೆಸಿದ್ದ ಪಾಕಿಸ್ತಾನ ಪಡೆಗಳು ಅಲ್ಲಿ ಪಾಕ್ ವಿರುದ್ಧ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದ ಮೇರೆಗೆ ಕುಲಭೂಷಣ್ ಯಾದವ್ ಅವರನ್ನು ಬಂಧಿಸಲಾಗಿತ್ತು. ಪಾಕಿಸ್ತಾನ ಸರ್ಕಾರ ಹೇಳಿಕೊಂಡಿರುವಂತೆ ಬಂಧನದ ಬಳಿಕ ಸ್ವತಃ ಕುಲಭೂಷಣ್ ಯಾದವ್ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದು, 2013ರಿಂದಲೂ ತಾನು ಕರಾಚಿ ಮತ್ತು ಬಲೂಚಿಸ್ತಾನದಲ್ಲಿ ಭಾರತ ಗುಪ್ತಚರ ಇಲಾಖೆ ರಾ ಪರವಾಗಿ ಗೂಢಚರ್ಯೆ ನಡೆಸುತ್ತಿದ್ದೆ ಎಂದು ಹೇಳಿದ್ದಾನೆ ಎಂದು ಆರೋಪಿಸಿದೆ.
ಆದರೆ ಪಾಕಿಸ್ತಾನದ ಆರೋಪವನ್ನು ನಿರಾಕರಿಸಿರುವ ಭಾರತ ಕುಲಭೂಷಣ್ ಯಾದವ್ ಉದ್ಯಮಿಯೇ ಹೊರತು ಗೂಢಚಾರಿಯಲ್ಲ. ವ್ಯಾಪಾರದ ಉದ್ದೇಶದಿಂದ ಪಾಕಿಸ್ತಾನಕ್ಕೆ ತೆರಳಿದ್ದರು ಎಂದು ಹೇಳಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ