ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಎನ್‌ಆರ್‌ಐಗಳು ದೇಶದ ಯಾವುದೇ ಮೂಲೆಯಲ್ಲಿ ಮನೆ ಖರೀದಿಸಬಹುದು!

ಅನಿವಾಸಿ ಭಾರತೀಯರು(ಎನ್‌ಆರ್‌ಐ) ದೇಶದ ಯಾವುದೇ ಮೂಲೆಯಲ್ಲಿ ಮನೆ ಖರೀದಿಸಬಹುದು ಎಂದು ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ...
Published on
ನವದೆಹಲಿ: ಅನಿವಾಸಿ ಭಾರತೀಯರು(ಎನ್‌ಆರ್‌ಐ) ದೇಶದ ಯಾವುದೇ ಮೂಲೆಯಲ್ಲಿ ಮನೆ ಖರೀದಿಸಬಹುದು ಎಂದು ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶ ಹೊರಡಿಸಿದೆ. 
ತಮ್ಮ ವಂಶಸ್ಥರು ಇದ್ದ ಜಾಗದಲ್ಲಿ ಮನೆ ಭೂಮಿ ಖರೀದಿಸಬೇಕು ಎಂದು ಬಯಸುವುದು ಸಹಜ. ಕೆಲಸದ ನಿಮ್ಮಿತ್ತ ವಿದೇಶಗಳಲ್ಲಿ ಹೋಗಿ ನೆಲೆಸಿರುತ್ತಾರೆ. ಅಂತಹವರು ತಾಯ್ನಾಡಲ್ಲಿ ಮನೆ, ಭೂಮಿ ಖರೀದಿಸಲು ಇಚ್ಚಿಸುವುದರಲ್ಲಿ ತಪ್ಪೇನಿಲ್ಲ. ದೇಶದ ಯಾವುದೇ ಸ್ಥಳದಲ್ಲಿ ಮನೆ, ಭೂಮಿ ಖರೀದಿಸುವ ಹಕ್ಕು ಅವರಿಗಿದೆ ಎಂದು ಆಯೋಗ ತಿಳಿಸಿದೆ. 
ಅನಿವಾಸಿ ಭಾರತೀಯರಾದ ರೇಷ್ಮಾ ಭಗತ್ ಮತ್ತು ಅವರ ಪುತ್ರ ತರುಣ್ ಭಗತ್ ಎಂಬುವವರು ಸೂಪರ್ ಟೆಕ್ ಕಂಪನಿ ವಿರುದ್ಧ ದೂರು ಸಲ್ಲಿಸಿದ್ದರು. 2008ರಲ್ಲಿ ಉತ್ತರ ಪ್ರದೇಶದ ಗ್ರೇಟರ್ ನೊಯ್ಡಾದಲ್ಲಿ ಸೂಪರ್ ಟೆಕ್ ಕಂಪನಿಯ ಕಟ್ಟಡ ನಿರ್ಮಾಣ ಯೋಜನೆಯಲ್ಲಿ ಫ್ಲಾಟ್ ಗಾಗಿ ರು.64 ಲಕ್ಷ ಹಣವನ್ನು ಮುಂಗಡವಾಗಿ ನೀಡಿದ್ದರು.
ಆದರೆ, ಕಂಪನಿ ಮಾತ್ರ ಫ್ಲಾಟ್ ನಿರ್ಮಿಸಲೇ ಇಲ್ಲ. ಫ್ಲ್ಯಾಟ್ ನಿರ್ಮಿಸದಿದ್ದಾಗ ನೀಡಿದ ಹಣದ ಬಡ್ಡಿ ಹಾಗೂ ಇತರ ಹಾನಿ ಸೇರಿದಂತೆ ಒಟ್ಟು ರು.1.40 ಕೋಟಿ ಕಂಪನಿ ನೀಡಬೇಕು ಎಂದು ಆಯೋಗಕ್ಕೆ ದೂರು ನೀಡಿದ್ದರು.
ಅರ್ಜಿ ವಿಚಾರಣೆ ಕೈಗೆತ್ತಿಕೊಂಡಿದ್ದ ಆಯೋಗ, ದೂರಿಗೆ ಪ್ರತಿಕ್ರಯಿಸುವಂತೆ ಕಂಪನಿಗೆ ಸೂಚಿಸಿತ್ತು. ಆಗ ಕಂಪನಿಯವರು ತರುಣ್ ಭಗತ್ ಅವರು ಅನಿವಾಸಿ ಭಾರತೀಯರಾಗಿದ್ದು, ವಾಸಿಸುವ ಉದ್ದೇಶದಿಂದ ಫ್ಲಾಟ್ ಖರೀದಿಸುತ್ತಿಲ್ಲ. ಕೇವಲ ಲಾಭಕ್ಕಾಗಿ ಫ್ಲ್ಯಾಟ್ ಖರೀದಿಸುತ್ತಿದ್ದಾರೆ. ಹಾಗಾಗಿ, ಹಣ ಮರುಪಾವತಿಸಲು ಸಾಧ್ಯವಿಲ್ಲ ಎಂದು ಹೇಳಿತ್ತು.
ಆದರೆ, ಕಂಪನಿ ಆರೋಪವನ್ನು ತಳ್ಳಿ ಹಾಕಿರುವ ಆಯೋಗ, ಅನಿವಾಸಿ ಭಾರತೀಯನಿಗೆ ತಾಯ್ನಾಡಲ್ಲಿ ಮನೆ ಇರಬೇಕು ಎಂದು ಬಯಸುವುದು ಸಹಜ. ಅನಿವಾಸಿ ಭಾರತೀಯರಿಗೆ ದೇಶದಲ್ಲಿ ಆಸ್ತಿ ಖರೀದಿಸಬಾರದು ಎಂಬ ನಿಯಮ ಅನ್ವಯವಾಗುವುದಿಲ್ಲ. ದೇಶದಲ್ಲಿ ಯಾವುದೇ ಮೂಲೆಯಲ್ಲಾದರೂ ಅನಿವಾಸಿ ಭಾರತೀಯರು ಮನೆ, ಭೂಮಿಯನ್ನು ಖರೀದಿಸಬಹುದು ಎಂದು ತಿಳಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com