ಫೇಸ್ ಬುಕ್ ನಲ್ಲಿ ಲವ್: ಪಾಕ್ ಹುಡುಗನ ಕೈ ಹಿಡಿದ ಭಾರತೀಯ ಹುಡುಗಿ

ಫೇಸ್ ಬುಕ್ ಎಂಬ ಸಾಮಾಜಿಕ ಜಾಲತಾಣ ಬಂದ ಮೇಲೆ ಎಲ್ಲೆಲ್ಲಿಯೋ ಇದ್ದವರು ಪರಿಚಯವಾಗುತ್ತಾರೆ. ಹಳೆಯ ಸ್ನೇಹಿತರು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಪೇಶಾವರ: ಫೇಸ್ ಬುಕ್ ಎಂಬ ಸಾಮಾಜಿಕ ಜಾಲತಾಣ ಬಂದ ಮೇಲೆ ಎಲ್ಲೆಲ್ಲಿಯೋ ಇದ್ದವರು ಪರಿಚಯವಾಗುತ್ತಾರೆ. ಹಳೆಯ ಸ್ನೇಹಿತರು ಸಿಗುತ್ತಾರೆ. ಫೇಸ್ ಬುಕ್ ನಲ್ಲಿ ಉಂಟಾದ ಸ್ನೇಹ ಪ್ರೀತಿಗೆ ತಿರುಗಿದ ಉದಾಹರಣೆಗಳೂ ಇವೆ.

ಇಲ್ಲಿ ಧರ್ಮ,ಜಾತಿ ,ದೇಶಗಳ ಗಡಿಯನ್ನು ಮೀರಿ ಎರಡು ಹೃದಯಗಳು ಪ್ರೀತಿಸಿವೆ. ಪ್ರೀತಿಸಿ ಮದುವೆಯಾಗಿವೆ.  ಭಾರತೀಯ ಯುವತಿಯೊಬ್ಬಳು ಫೇಸ್‌ಬುಕ್‌ನಲ್ಲಿ ಸ್ನೇಹಿತನಾದ ಪಾಕಿಸ್ತಾನದ ಯುವಕನನ್ನು ವಿವಾಹವಾಗಿದ್ದಾಳೆ.

22 ವರ್ಷದ ಮೆಹ್ರುನ್ನೀಸಾ ಎರಡು ತಿಂಗಳ ಹಿಂದೆ ಪಾಕಿಸ್ತಾನಕ್ಕೆ ಸಾಮಾನ್ಯ ವೀಸಾದ ಮೇಲೆ ಹೋಗಿದ್ದಳು. ಅಲ್ಲಿನ ಸ್ವಾತ್‌ ಜಿಲ್ಲೆಯ ಕಣಿವೆ ಪ್ರದೇಶಕ್ಕೆ ತೆರಳಿ  ತನ್ನ ಪ್ರಿಯತಮ 24 ವರ್ಷದ ಇಜಾಜ್‌ ಖಾನ್‌ನನ್ನು ವಿವಾಹವಾಗಿದ್ದಾಳೆ. ಈ ಜೋಡಿ ತಮ್ಮ ಮದುವೆಯನ್ನು ಅಧಿಕೃತವಾಗಿ ಘೋಷಿಸಿಕೊಂಡಿದ್ದು ಮೊನ್ನೆ 10ನೇ ತಾರೀಖಿನಂದು, ಅಂದರೆ ಮೆಹ್ರುನ್ನೀಸಾಳ ವೀಸಾ ಅವಧಿ ಮುಗಿಯಲು ಮೂರು ದಿನ ಬಾಕಿ ಉಳಿದಿರುವಾಗ.

'ನಾನು ನನ್ನ ಸ್ವ ಇಚ್ಛೆಯಿಂದ ಮನೆ ಬಿಟ್ಟು ಓಡಿಬಂದು ಇಜಾಜ್‌ನನ್ನು ಮದುವೆಯಾಗಿದ್ದೇನೆ. ಮತ್ತೆ ನಾನು ಭಾರತಕ್ಕೆ ಹೋದರೆ ನನ್ನ ಜೀವಕ್ಕೆ ಪಾಕ್‌  ವಿರೋಧಿ ಸಂಘಟನೆಗಳಿಂದ ಅಪಾಯವಿದೆ. ಹಾಗಾಗಿ ನನಗೆ ಭಾರತಕ್ಕೆ ಹೋಗಲು ಭಯವಾಗುತ್ತಿದೆ ಎಂದು ಮೆಹ್ರುನ್ನೀಸಾ ಹೇಳಿದ್ದಾಳೆ.

ಇದೀಗ ತನ್ನ ಪತಿಯೊಂದಿಗೆ ಸಂತೋಷವಾಗಿದ್ದು, ಮಾನವೀಯ ನೆಲೆಯಲ್ಲಿ ತನ್ನ ವೀಸಾ ಅವಧಿಯನ್ನು ಹೆಚ್ಚಿಸುವಂತೆ ಪಾಕ್‌ ಸರ್ಕಾರವನ್ನು ಮೆಹ್ರುನ್ನೀಸಾ ಕೋರಿದ್ದಾಳೆ. ಆದರೆ ಮೂಲಗಳ ಪ್ರಕಾರ, ಮೆಹ್ರುನ್ನೀಸಾಳ ಮನವಿಯನ್ನು ಪಾಕ್ ಸರ್ಕಾರ ಪುರಸ್ಕರಿಸಿಲ್ಲ ಎಂದು ತಿಳಿದು ಬಂದಿದೆ.

ಈ ನಡುವೆ ಇಂಥಹದ್ದೆ ಇನ್ನೊಂದು ಪ್ರೇಮ ಪ್ರಕರಣದಲ್ಲಿ ಅಮೆರಿಕದ ಯುವತಿಯೊಬ್ಬಳು ಫೇಸ್‌ಬುಕ್‌ನಲ್ಲಿ ಪರಿಚಯವಾದ ಪಾಕ್‌ ಯುವಕನನ್ನು ವಿವಾಹವಾಗಿ ಮತಾಂತರವಾಗಿದ್ದಾಳೆ.

ಲಾಸ್‌ ವೇಗಸ್‌ನ ಅರ್ಮೆನೊ ಶರಿಯಾ ಆಂಜ್ಲಿ ಎಂಬ ಯುವತಿ ಶಾಂಗ್ಲಾ ಜಿಲ್ಲೆಯ ಗುಡ್ಡಗಾಡು ಪ್ರದೇಶದ 25 ವರ್ಷದ ತಸೀರುಲ್ಲಾ ಎಂಬಾತನನ್ನು ವಿವಾಹವಾಗಿದ್ದಾಳೆ. ಆಕೆ ಲಾಸ್ ವೇಗಾಸ್ ನಲ್ಲಿ ಪೊಲೀಸ್ ಇಲಾಖೆಯಲ್ಲಿ ಕೆಲಸದಲ್ಲಿದ್ದಳು. 

'ತಸೀರುಲ್ಲಾನನ್ನು ಮದುವೆಯಾಗಿರುವುದು ಮತ್ತು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿರುವುದು ನನ್ನ ಜೀವನದ ಅವಿಸ್ಮರಣೀಯ ಕ್ಷಣಗಳಾಗಿವೆ.ಅಲ್ಲಿನ ಜನರ ಆದರಣೀಯ ಗುಣಗಳನ್ನು ನಾನು ಸಂತೋಷವಾಗಿ ಅನುಭವಿಸುತ್ತಿದ್ದೇನೆ ಎಂದು ಅರ್ಮೆನೊ ಶರಿಯಾ ಆಂಜ್ಲಿ ಹೇಳಿದ್ದಾಳೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com