

ಟೆಕ್ಸಾಸ್: ದಿಢೀರ್ ಹೃದಯಾಘಾತಕ್ಕೆ ಒಳಗಾಗಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಜೈಲಿನ ಭದ್ರತಾ ಸಿಬ್ಬಂದಿಯ ಪ್ರಾಣ ಉಳಿಸಲು ಕೈದಿಗಳು ತಾವಿದ್ದ ಜೈಲಿನ ಬಾಗಿಲನ್ನೇ ಛಿದ್ರಗೊಳಿಸಿದ ಘಟನೆ ಟೆಕ್ಸಾಸ್ ನಲ್ಲಿ ನಡೆದಿದೆ.
ಅಮೆರಿಕದ ಫೋರ್ಟ್ ವರ್ತ್ ಸಿಟಿ ಕೋರ್ಟ್ ಬಿಲ್ಡಿಂಗ್ ನಲ್ಲಿರುವ ಜೈಲಿನಲ್ಲಿ ಈ ಘಟನೆ ನಡೆದಿದ್ದು, ಜೈಲಿನಲ್ಲಿ ಭದ್ರತಾ ಅಧಿಕಾರಿ ದಿಢೀರ್ ಹೃದಯಾಘಾತಕ್ಕೆ ತುತ್ತಾಗಿ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ಇದನ್ನು ನೋಡಿದ ಜೈಲು ಕೈದಿಗಳು ಸಾಕಷ್ಟು ಬಾರಿ ಕೂಗಾಟ ನಡೆಸಿದರೂ ಯಾವೊಬ್ಬ ಇತರೆ ಅಧಿಕಾರಿ ಒಳಗೆ ಬರಲೇ ಇಲ್ಲ. ಬೇರೆ ಮಾರ್ಗವಿಲ್ಲದೇ ಕೈದಿಗಳೇ ಜೈಲಿನ ಬಾಗಿಲನ್ನು ಒಡೆದು ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಜೈಲು ಅಧಿಕಾರಿಗೆ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಈ ವೇಳೆ ಎಲ್ಲ ಕೈದಿಗಳ ಕೈಯಲ್ಲಿ ಕೋಳ ಇತ್ತು ಎಂದು ತಿಳಿದುಬಂದಿದೆ.
ಅಲ್ಲದೆ ಮತ್ತೊಂದು ತುದಿಯಲ್ಲಿದ್ದ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆಯೇ ಆ್ಯಂಬುಲೆನ್ಸ್ ಗೆ ಕರೆ ಮಾಡಿದ್ದಾರೆ. ಬಳಿಕ ಕೈದಿಗಳನ್ನು ಮತ್ತೊಂದು ಕೊಠಡಿಗೆ ಹಾಕಿ ಬೀಗ ಹಾಕಿದ್ದಾರೆ. ಹೃದಯಾಘಾತಕ್ಕೀಡಾದ ಅಧಿಕಾರಿಗೆ ತಕ್ಷಣ ಸಿಪಿಆರ್ ಚಿಕಿತ್ಸೆ (ಹೃದಯ ಮತ್ತು ಶ್ವಾಸಕೋಶ ಪ್ರಚೋದಕ ಪ್ರದರ್ಶನ)ಯನ್ನು ತುರ್ತಾಗಿ ಆಸ್ಪತ್ರೆಗೆ ಸೇರಿಸಿದ ಪರಿಣಾಮ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದೀಗ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಜೈಲು ಅಧಿಕಾರಿಗಳು ಕೈದಿಗಳಿರುವ ಬಾಗಿಲುಗಳನ್ನು ಮತ್ತು ಅವುಗಳ ಬೀಗಗಳನ್ನು ಮತ್ತಷ್ಟು ಭದ್ರ ಪಡಿಸಿದ್ದಾರಂತೆ.
ಕೈದಿಗಳು ತಿಳಿಸಿರುವಂತೆ ಹೃದಯಾಘಾತಕ್ಕೊಳಗಾಗುವ ಮೊದಲು ಭದ್ರತಾ ಅಧಿಕಾರಿ ಕೈದಿಗಳೊಂದಿಗೆ ಸಾಮರಸ್ಯದಿಂದ ಇದ್ದರಂತೆ. ಈ ವೇಳೆ ದಿಢೀರ್ ಹೃದಯಾಘಾತಕ್ಕೊಳಗಾಗಿದ್ದಾರೆ.
ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ.