

ವಾಷಿಂಗ್ಟನ್: ಕಳೆದ ವರ್ಷ ಜಗತ್ತಿನಾದ್ಯಂತ ನಡೆದ ಭಯೋತ್ಪಾದಕ ದಾಳಿಯಲ್ಲಿ ಅರ್ಧಕ್ಕಿಂತಲೂ ಹೆಚ್ಚು ಪಾಲು ಭಾರತ, ಪಾಕಿಸ್ತಾನ, ಅಫ್ಘಾನಿಸ್ತಾನ ಸೇರಿದಂತೆ ಐದು ರಾಷ್ಟ್ರಗಳಲ್ಲಿ ಆಗಿವೆ ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಪಂಚದಾದ್ಯಂತ ನಡೆದ ಒಟ್ಟು ಭಯೋತ್ಪಾದಕ ದಾಳಿಯ ಶೇಕಡಾ 55ರಷ್ಟು ಭಾರತ, ಪಾಕಿಸ್ತಾನ, ಅಫ್ಘಾನಿಸ್ತಾನ, ಇರಾಕ್ ಮತ್ತು ನೈಜೀರಿಯಾಗಳಲ್ಲಿ ಸಂಭವಿಸಿದೆ ಎಂದು ಭಯೋತ್ಪಾದನೆ ನಿಗ್ರಹದ ಅಮೇರಿಕಾ ದೇಶದ ಸಂಯೋಜಕರಾದ ಜಸ್ಟಿನ್ ಸಿಬರೆಲ್ಲ್ ನಿನ್ನೆ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಪಾಕಿಸ್ತಾನ, ಇರಾಕ್, ಅಫ್ಘಾನಿಸ್ತಾನ, ನೈಜೀರಿಯಾ ಮತ್ತು ಸಿರಿಯಾ ದೇಶಗಳಲ್ಲಿ ಶೇಕಡಾ 74ರಷ್ಟು ಸಾವು ಭಯೋತ್ಪಾದಕ ದಾಳಿಯಿಂದ ಉಂಟಾಗಿದೆ. ಮೇರಿಲ್ಯಾಂಡ್ ವಿಶ್ವವಿದ್ಯಾಲಯ ಸಂಗ್ರಹಿಸಿರುವ ಅಂಕಿಅಂಶಗಳಿಂದ ಇದು ಗೊತ್ತಾಗಿದೆ.
2015ರಲ್ಲಿ 92 ದೇಶಗಳಲ್ಲಿ ಭಯೋತ್ಪಾದಕ ದಾಳಿ ನಡೆದಿದ್ದು, ದೇಶದ ಭೌಗೋಳಿಕ ಪರಿಸ್ಥಿತಿಯನ್ನು ಆಧಾರವಾಗಿಟ್ಟುಕೊಂಡು ದಾಳಿ ನಡೆದಿದೆ. ಆದರೆ 2014ಕ್ಕೆ ಹೋಲಿಸಿದರೆ 2015ರಲ್ಲಿ ಒಟ್ಟು ಭಯೋತ್ಪಾದಕ ದಾಳಿ ಶೇಕಡಾ 13ರಷ್ಟು ಇಳಿಮುಖವಾಗಿದೆ ಎಂದು ಸಿಬರೆಲ್ಲ್ ವರದಿ ಬಿಡುಗಡೆ ಮಾಡುವಾಗ ಹೇಳಿದ್ದಾರೆ.