ಬೀಜಿಂಗ್: ಭಾರತದ ಎನ್ಎಸ್ ಜಿ ಸದಸ್ಯತ್ವಕ್ಕೆ ಚೀನಾ ವಿರೋಧ ವ್ಯಕ್ತಪಡಿಸಿದ್ದನ್ನು ಬಲವಾಗಿ ಸಮರ್ಥಿಸಿಕೊಂಡಿರುವ ಚೀನಾ ಸರ್ಕಾರಿ ಮಾಧ್ಯಮ, ಎನ್ಎಸ್ಜಿ ಸದಸ್ಯತ್ವ ಪಡೆಯಲು ಏನೆಲ್ಲಾ ಅರ್ಹತೆಗಳು ಇರಬೇಕು ಎಂಬುದನ್ನು ಭಾರತ ಮೊದಲು ತಿಳಿಯಲಿ ವಾಗ್ದಾಳಿ ನಡೆಸಿದೆ.
ಎನ್ಎಸ್ಜಿ ಸದಸ್ಯತ್ವ ಕೈತಪ್ಪಲು ಚೀನಾ ಕಾರಣ ಎಂದು ಭಾರತೀಯ ನಾಯಕರು ಆರೋಪಿಸಿರುವ ಹಿನ್ನೆಲೆಯಲ್ಲಿ ಚೀನಾದ ಗ್ಲೋಬಲ್ ಟೈಮ್್ಸ ಎಂಬ ಅಂತಾರಾಷ್ಟ್ರೀಯ ವ್ಯವಹಾರಗಳಿಗೆ ಸಂಬಂಧಿಸಿದ ಸರ್ಕಾರಿ ಸ್ವಾಮ್ಯದ ಪತ್ರಿಕೆ ತನ್ನ ಸಂಪಾದಕೀಯದಲ್ಲಿ, ಭಾರತ ಮತ್ತು ಭಾರತೀಯ ಮಾಧ್ಯಮಗಳ ವಿರುದ್ಧ ವಾಗ್ದಾಳಿ ನಡೆಸಿದೆ.
ಪರಮಾಣು ಪ್ರಸರಣ ತಡೆ ಒಡಂಬಡಿಕೆಗೆ (ಎನ್ಪಿಟಿ) ಸಹಿ ಹಾಕಿದ ದೇಶಗಳಿಗೆ ಮಾತ್ರ ಎನ್ಎಸ್ ಜಿ ಸದಸ್ಯತ್ವ ನೀಡಲಾಗಿದೆ. ಎನ್ಎಸ್ ಜಿ ಸದಸ್ಯತ್ವ ಪಡೆಯಲು ಪ್ರಾಥಮಿಕ ನಿಯಮಗಳಲ್ಲಿ ಇದು ಒಂದು. ಆದರೆ ಭಾರತ ಎನ್ಪಿಟಿಗೆ ಸಹಿ ಹಾಕದೆ ಎನ್ಎಸ್ಜಿ ಸದಸ್ಯತ್ವ ಪಡೆಯಲು ಬಯಸುತ್ತಿದೆ. ಹಾಗಾಗಿ ಭಾರತದ ಸದಸ್ಯತ್ವವನ್ನು ವಿರೋಧಿಸುವುದು ಚೀನಾ ಮತ್ತು ಇತರ ರಾಷ್ಟ್ರಗಳ ನೈತಿಕ ಕಾನೂನುಬದ್ಧ ಹಕ್ಕು ಚೀನಾ ಮಾಧ್ಯಮ ವಾದಿಸಿದೆ.
ಚೀನಾ ಸೇರಿದಂತೆ ಒಟ್ಟು 10 ರಾಷ್ಟ್ರಗಳು ಭಾರತಕ್ಕೆ ಸದಸ್ಯತ್ವ ನೀಡದಂತೆ ವಿರೋಧಿಸಿವೆ ಎಂದು ಗ್ಲೋಬಲ್ ಟೈಮ್್ಸ ವರದಿ ಮಾಡಿದೆ.
ಕೇವಲ ಅಮೆರಿಕ ಬೆಂಬಲ ಸೂಚಿಸಿದ ಮಾತ್ರಕ್ಕೆ ಇಡೀ ವಿಶ್ವವೇ ಭಾರತಕ್ಕೆ ಬೆಂಬಲ ಸೂಚಿಸಿದಂತೆ ಆಗುವುದಿಲ್ಲ. ಅಮೆರಿಕವೊಂದೇ ಇಡೀ ವಿಶ್ವವಲ್ಲ. ಭಾರತ ಎಲ್ಲಾ ರಾಷ್ಟ್ರಗಳನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಮತ್ತು ಕಾನೂನುಬದ್ಧವಾಗಿ ಅರ್ಜಿ ಸಲ್ಲಿಸಬೇಕು ಎಂದು ಚೀನಾ ಪತ್ರಿಕೆ ತಿಳಿಸಿದೆ.