ಉ.ಕೊರಿಯಾ ಕ್ಷಿಪಣಿ ಉಡಾವಣೆ ವಿಫಲ; ಬೀಜಿಂಗ್ ಗೆ ದೌಡಾಯಿಸಿದ ಅಧಿಕಾರಿಗಳು

ವಿಶ್ವಸಮುದಾಯದ ಎಚ್ಚರಿಕೆಯ ನಡುವೆಯೇ ಕ್ಷಿಪಣಿ ಪರೀಕ್ಷೆ ನಡೆಸಿದ್ದ ಉತ್ತರಿಕೊರಿಯಾಕ್ಕೆ ಭಾರಿ ಮುಖಭಂಗವಾಗಿದ್ದು, ಮಂಗಳವಾರ ನಡೆದ ಮಧ್ಯಂತರ ಶ್ರೇಣಿಯ ಖಂಡಾಂತರ ಕ್ಷಿಪಣಿ "ಮಸುಡನ್" ಪರೀಕ್ಷೆ ವಿಫಲವಾಗಿದೆ..
ಉತ್ತರ ಕೊರಿಯಾ ಕ್ಷಿಪಣಿ ಪರೀಕ್ಷೆ ವಿಫಲ (ಸಂಗ್ರಹ ಚಿತ್ರ)
ಉತ್ತರ ಕೊರಿಯಾ ಕ್ಷಿಪಣಿ ಪರೀಕ್ಷೆ ವಿಫಲ (ಸಂಗ್ರಹ ಚಿತ್ರ)

ಬೀಜಿಂಗ್: ವಿಶ್ವಸಮುದಾಯದ ಎಚ್ಚರಿಕೆಯ ನಡುವೆಯೇ ಕ್ಷಿಪಣಿ ಪರೀಕ್ಷೆ ನಡೆಸಿದ್ದ ಉತ್ತರಿಕೊರಿಯಾಕ್ಕೆ ಭಾರಿ ಮುಖಭಂಗವಾಗಿದ್ದು, ಮಂಗಳವಾರ ನಡೆದ ಮಧ್ಯಂತರ ಶ್ರೇಣಿಯ  ಖಂಡಾಂತರ ಕ್ಷಿಪಣಿ "ಮಸುಡನ್" ಪರೀಕ್ಷೆ ವಿಫಲವಾಗಿದೆ.

ಕ್ಷಿಪಣಿ ಪರೀಕ್ಷೆ ವಿಫಲವಾದ ಬೆನ್ನಲ್ಲೇ ಉತ್ತರ ಕೊರಿಯಾ ಅಧಿಕಾರಿಗಳು ಚೀನಾಗೆ ದೌಡಾಯಿಸಿದ್ದು, ಚೀನಾದ ರಕ್ಷಣಾ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಕೇವಲ  2 ತಿಂಗಳ ಅವಧಿಯಲ್ಲಿ ಉತ್ತರ ಕೊರಿಯಾ ನಡೆಸಿದ ನಾಲ್ಕನೇ ವಿಫಲ ಕ್ಷಿಪಣಿ ಪರೀಕ್ಷೆ ಇದಾಗಿದೆ. ಈ ಹಿನ್ನಲೆಯಲ್ಲಿ ಉತ್ತರ ಕೊರಿಯಾದ ಮಾಜಿ ವಿದೇಶಾಂಗ ಸಚಿವ ರಿಸು ಯಾಂಗ್ ಬೀಜಿಂಗ್  ಗೆ ಭೇಟಿ ನೀಡಿ ಚೀನಾದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ.

ಆದರೆ ಈ ಭೇಟಿ ವಿಚಾರವನ್ನು ರಹಸ್ಯವಾಗಿಟ್ಟಿರುವ ಚೀನಾ ಭೇಟಿ ಕುರಿತಂತೆ ಯಾವುದೇ ವಿಚಾರಗಳನ್ನು ಬಹಿರಂಗ ಪಡಿಸಲು ಹಿಂದೇಟು ಹಾಕಿದೆ. ಆದರೆ ಜಪಾನ್ ನ ಸುದ್ದಿಸಂಸ್ಥೆಯೊಂದು  ವರದಿ ಮಾಡಿರುವಂತೆ ಮಂಗಳವಾರ ಬೆಳಗ್ಗೆ ಬೀಜಿಂಗ್ ನಲ್ಲಿರುವ ಸರ್ಕಾರಿ ಗೆಸ್ಟ್ ಹೌಸ್ ನಲ್ಲಿ ಉತ್ತರ ಕೊರಿಯಾ ಮತ್ತು ಚೀನಾದ ರಕ್ಷಣಾ ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ. ಚೀನಾದ  ಅಡಳಿತಾರೂಢ ಕಮ್ಯುನಿಸ್ಟ್ ನಾಯಕರನ್ನು ಕೂಡ ಉತ್ತರ ಕೊರಿಯಾ ಅಧಿಕಾರಿಗಳು ಭೇಟಿ ಮಾಡಿ ಚರ್ಚಿಸಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ. ಅಂತೆಯೇ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್  ಅವರನ್ನು ಕೂಡ ಉತ್ತರ ಕೊರಿಯಾದ ಮಾಜಿ ಸಚಿವರು ಭೇಟಿಯಾಗಲಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

ಆದರೆ ಈ ವರದಿಯನ್ನು ತಿರಸ್ಕರಿಸಿರುವ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರು ಉತ್ತರ ಕೊರಿಯಾದ ಯಾವುದೇ ಅಧಿಕಾರಿಗಳನ್ನು ಭೇಟಿಯಾಗುವ ಪ್ರಸ್ತಾಪ ಇಲ್ಲ ಎಂದು ಹೇಳಿದೆ.

ಒಟ್ಟಾರೆ ಅಂತಾರಾಷ್ಟ್ರೀಯ ಸಮುದಾಯದ ವಿರೋಧದ ಹಿನ್ನಲೆಯಲ್ಲಿ ಅಧಿಕೃತವಾಗಿ ಚೀನಾ ಮತ್ತು ಉತ್ತರ ಕೊರಿಯಾ ಬಾಂಧವ್ಯ ಮುಕ್ತಾಯವಾಗಿದ್ದರೂ, ಉತ್ತರ ಕೊರಿಯಾದ ಅಧಿಕಾರಿಗಳ  ಚೀನಾ ಭೇಟಿ ಇದೀಗ ಕುತೂಹಲ ಕೆರಳಿಸಿದೆ. ಅಧಿಕೃತವಾಗಿ ಚೀನಾ ಉತ್ತರಕೊರಿಯಾ ಬಾಂಧವ್ಯ ಕಡಿದುಕೊಂಡಿದ್ದರೂ ಹಿಂಬಾಗಿಲಿನಲ್ಲಿ ಉತ್ತರಕೊರಿಯಾಕ್ಕೆ ನೆರವು ನೀಡುತ್ತಿದೆಯೇ ಎಂಬ  ಪ್ರಶ್ನೆ ಉದ್ಭವಿಸುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com