ನ್ಯೂಯಾರ್ಕ್: ಅಮೆರಿಕ ಪ್ರಪಂಚದ ಬಲಿಷ್ಠ ರಾಷ್ಟ್ರವಾಗಿದ್ದು, ಇದನ್ನು ಮತ್ತೊಮ್ಮೆ ಮಹಾ ಬಲಿಷ್ಠ ರಾಷ್ಟ್ರವನ್ನಾಗಿ ಪುನರ್ ನಿರ್ಮಾಣ ಮಾಡಬೇಕಿದೆ ಎಂದು ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಬಹು ನಿರೀಕ್ಷಿತ ಅಮೆರಿಕ ಅಧ್ಯಕ್ಷೀಯ ಚುನಾವಣೆ ಬಳಿಕ ಇದೇ ಮೊದಲ ಬಾರಿಗೆ ಅಮೆರಿಕ ಪ್ರಜೆಗಳನ್ನು ಉದ್ದೇಶಿಸಿ ನ್ಯೂಯಾರ್ಕ್ ನಲ್ಲಿ ಮಾತನಾಡಿದ ಟ್ರಂಪ್ ಅವರು, ತಮ್ಮನ್ನು ಬೆಂಬಲಿಸಿದ ಅಮೆರಿಕ ಪ್ರಜೆಗಳಿಗೆ ಧನ್ಯವಾದ ತಿಳಿಸಿದರು. ಇದೇ ವೇಳೆ ತಮ್ಮ ಪಕ್ಷದ ಗೆಲುವಿಗೆ ಶ್ರಮಿಸಿದ ಪ್ರತಿಯೊಬ್ಬ ಮುಖಂಡರಿಗೂ ಡೊನಾಲ್ಡ್ ಟ್ರಂಪ್ ಧನ್ಯವಾದ ತಿಳಿಸಿದರು.
ದೇಶದ ಜನತೆಯನ್ನುದ್ದೇಶಿಸಿ ಮಾತನಾಡಿದ ಡೊನಾಲ್ಡ್ ಟ್ರಂಪ್ ಅವರು, ಇಂದು ನನಗೆ ಸಿಕ್ಕ ಜಯ ಅಮೆರಿಕವನ್ನು ಪ್ರೀತಿಸುವವರಿಗೆ ಸಿಕ್ಕ ಜಯ. ಅಮೆರಿಕ ಜನತೆಗೆ ನಾನೆಂದಿಗೂ ಆಭಾರಿಯಾಗಿದ್ದು, ಯಾರು ಅಮೆರಿಕವನ್ನು ಪ್ರೀತಿಸುತ್ತಾರೆಯೇ ಅವರು ಈ ಜಯವನ್ನು ಆನಂದಿಸುತ್ತಾರೆ. ಕೊನೆಗೂ ನನ್ನ ಸೇವೆ ಬೇಕು ಎಂದು ಅಮೆರಿಕನ್ನರು ನನ್ನನ್ನು ಆರಿಸಿದ್ದಾರೆ. ಹೀಗಾಗಿ ಅಮೆರಿಕನ್ನರಿಗೆ ನಾನು ಮೊದಲು ಧನ್ಯವಾದ ತಿಳಿಸುತ್ತೇನೆ. ನಮ್ಮ ಸರ್ಕಾರದ ಮೊದಲ ಆಧ್ಯತೆ ಏನಿದ್ದರೂ ಅಮೆರಿಕನ್ನರಿಗೆ. ಮೊದಲು ಉದ್ಯೋಗ ಸೃಷ್ಟಿಸಿ ಅಮೆರಿಕದ ಲಕ್ಷಾಂತರ ಯುವಕರಿಗೆ ಉದ್ಯೋಗ ನೀಡುವುದು ನಮ್ಮ ಸರ್ಕಾರದ ಆಧ್ಯತೆಯಾಗಿದೆ. ಅಂತೆಯೇ ಇತರೆ ದೇಶಗಳೊಂದಿಗೆ ಸೌಹಾರ್ಧತೆ ಕಾಯ್ದುಕೊಳ್ಳುವುದು ನಮ್ಮ ಸರ್ಕಾರದ ಪ್ರಮುಖ ಗುರಿಯಾಗಿದ್ದು, ಯುದ್ಧ ನಮ್ಮ ಗುರಿಯಲ್ಲ. ಸ್ನೇಹ-ಪ್ರೀತಿ ನಮ್ಮ ಗುರಿಯಾಗಿದ್ದು, ಅದನ್ನೇ ನಾವು ಬಯಸುತ್ತೇವೆ. ಎಲ್ಲ ದೇಶಗಳೊಂದಿಗೆ ಉತ್ತಮ ಬಾಂಧವ್ಯ ಹೊಂದುವ ಪ್ರಯತ್ನ ಮಾಡುತ್ತೇವೆ ಎಂದು ಟ್ರಂಪ್ ಹೇಳಿದ್ದಾರೆ.
ವಿಶ್ವದಲ್ಲಿ ಅಮೆರಿಕ ಬಲಿಷ್ಠ ರಾಷ್ಟ್ರವಾಗಿದೆ. ನಾವು ಎಲ್ಲರೂ ಒಗ್ಗೂಡಿ ಮತ್ತೊಮ್ಮೆ ಅಮೆರಿಕವನ್ನು ಕಟ್ಟುವ ಮೂಲಕ ಮತ್ತೊಮ್ಮೆ ಅಮೆರಿಕವನ್ನು ಪ್ರಚಂಡ ಬಲಿಷ್ಠ ರಾಷ್ಟ್ರವನ್ನಾಗಿಸಬೇಕಿದೆ. ಹೀಗಾಗಿ ನಾವೆಲ್ಲರೂ ಒಂದು ಗೂಡಿ ಕೆಲಸ ಮಾಡಬೇಕಿದ್ದು, ಅಮೆರಿಕ ಶ್ರೇಷ್ಟ ರಾಷ್ಟ್ರವಾಗಿದ್ದು, ನಾವು ಕೂಡ ಶ್ರೇಷ್ಠವಾದದನ್ನೇ ಮಾಡುತ್ತೇವೆ. ಎಲ್ಲವನ್ನೂ ಸಾಧಿಸುವ ಸಾಮರ್ಥ್ಯ ನಮ್ಮಲ್ಲಿದೆ. ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡುವ ಮೂಲಕ ನಮ್ಮ ಕನಸುಗಳನ್ನು ಈಡೇರಿಸಿಕೊಳ್ಳೋಣ. ಉತ್ತಮ ಭವಿಷ್ಯದತ್ತ ಎಲ್ಲರೂ ಒಗ್ಗೂಡಿ ಹೆಜ್ಜೆ ಇಡೋಣ ಎಂದು ಟ್ರಂಪ್ ಹೇಳಿದರು.
ಇದೇ ವೇಳೆ ತಮ್ಮ ಪ್ರತಿಸ್ಪರ್ಧಿ ಹಿಲರಿ ಕ್ಲಿಂಟನ್ ಕುರಿತು ಮಾತನಾಡಿದ ಡೊನಾಲ್ಡ್ ಟ್ರಂಪ್, ಚುನಾವಣೆಯಲ್ಲಿ ಹಿಲರಿ ತುಂಬಾ ಕಷ್ಟಪಟ್ಟು ಕೆಲಸ ಮಾಡಿದ್ದರು. ಚುನಾವಣೆಯಲ್ಲಿ ಹಿಲರಿ ನಿಜಕ್ಕೂ ನನಗೆ ಕಠಿಣ ಸವಾಲಾಗಿದ್ದರು. ಆದರೆ ಅಮೆರಿಕದ ಜನರು ನನ್ನನ್ನು ಜಯಶಾಲಿಯನ್ನಾಗಿಸಿದ್ದಾರೆ. ಈ ಹಿಂದೆ ಕ್ಲಿಂಟನ್ ಕೂಡ ಅಮೆರಿಕಕ್ಕೆ ಸಾಕಷ್ಟು ಸೇವೆ ಸಲ್ಲಿಸಿದ್ದಾರೆ. ಚುನಾವಣೆಯಲ್ಲಿ ಸಾಕಷ್ಟು ಶ್ರಮ ಪಟ್ಟು ಪ್ರಚಾರ ನಡೆಸಿದ್ದಾರೆ. ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಿದ್ದಂತೆಯೇ ಹಿಲರಿ ತಮಗೆ ಕರೆ ಮಾಡಿ ಶುಭಾಶಯ ಕೋರಿದ್ದಾರೆ. ನಾನು ಕೂಡ ಅವರಿಗೆ ಶುಭಾಶಯ ತಿಳಿಸಿದ್ದೇನೆ ಎಂದು ಟ್ರಂಪ್ ಹೇಳಿದರು.
ಕುಟುಂಬಸ್ಥರ ನೆನೆದ ಟ್ರಂಪ್
ಇದೇ ವೇಳೆ ಚುನಾವಣೆಯಲ್ಲಿ ತಮ್ಮ ಗೆಲುವಿಗೆ ತಮ್ಮ ಕುಟುಂಬದ ಪಾತ್ರವನ್ನು ನೆನೆದ ಟ್ರಂಪ್ ತಮ್ಮ ತಂದೆ-ತಾಯಿ, ಪತ್ನಿ ಲಾರಾ ಹಾಗೂ ಪುತ್ರನ ಕುರಿತು ಮಾತನಾಡಿದರು. ನನ್ನ ತಂದೆ ತಾಯಿ ಆಶೀರ್ವಾದದಿಂದ ನಾನು ಚುನಾವಣೆ ಜಯಿಸಿದ್ದೇನೆ. ಅವರಿಂದ ನಾನು ಸಾಕಷ್ಟು ಪಾಠ ಕಲಿತಿದ್ದೇನೆ. ನನ್ನ ಗೆಲುವಿನಲ್ಲಿ ಪತ್ನಿ ಲಾರಾ ಕೂಡ ಮಹತ್ತರ ಪಾತ್ರ ನಿರ್ವಹಿಸಿದ್ದಾಳೆ. ಪುತ್ರ ಹಾಗೂ ಸೊಸೆ ಕೂಡ ನನಗಾಗಿ ಪ್ರಚಾರ ನಡೆಸಿದ್ದರು. ಅವರ ಪ್ರೀತಿಗೆ ನಾನು ಅಭಾರಿ ಎಂದು ಟ್ರಂಪ್ ಹೇಳಿದರು.