
ಇಸ್ಲಾಮಾಬಾದ್: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಸೇನೆ ನಡೆಸಿದ ಸೀಮಿತ ದಾಳಿ ಹಾಗೂ ಕದನ ವಿರಾಮ ಉಲ್ಲಂಘನೆ ವೇಳೆ 7 ಮಂದಿ ಪಾಕ್ ಸೈನಿಕರ ಹತ್ಯೆ ಬಳಿಕ ಉಭಯ ದೇಶಗಳ ನಡುವಿನ ಬಾಂಧವ್ಯ ಹಳಸಿದ್ದು, ಮತ್ತೆ ಭಾರತದೊಂದಿಗೆ ಸೌಹಾರ್ಧತೆ ಮುಂದುವರೆಸುವ ನಿಟ್ಟಿನಲ್ಲಿ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರ ಸಲಹೆಗಾರ ಸರ್ತಾಜ್ ಎಜೀಜ್ ಅವರು ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ವಿದೇಶಾಂಗ ಇಲಾಖೆಯ ಸಲಹೆಗಾರ ಸರ್ತಾಜ್ ಎಜೀಜ್ ಅವರು ಭಾರತ ಭೇಟಿಗೆ ಸಮ್ಮತಿ ಸೂಚಿಸಿದ್ದು, ಇದೇ ಡಿಸೆಂಬರ್ ನಲ್ಲಿ ಭಾರತದಲ್ಲಿ ನಡೆಯಲಿರುವ ಏಷ್ಯನ್ ಕಾನ್ಫರೆನ್ಸ್ ನಲ್ಲಿ ಪಾಕಿಸ್ತಾನವನ್ನು ಸರ್ತಾಜ್ ಎಜೀಜ್ ಪ್ರತಿನಿಧಿಸಲಿದ್ದಾರೆ ಎಂದು ತಿಳಿದುಬಂದಿದೆ. ಉರಿ ಉಗ್ರ ದಾಳಿ ಬಳಿಕ ಪಾಕಿಸ್ತಾನದಲ್ಲಿ ನಡೆದ ಸಾರ್ಕ್ ಶೃಂಗಸಭೆಗೆ ಭಾರತ ಬಹಿಷ್ಕಾರ ಹಾಕಿತ್ತು. ಭಾರತ ನಡೆಗೆ ಬೆಂಬಲ ಸೂಚಿಸಿದ್ದ ನೇಪಾಳ, ಆಪ್ಘಾನಿಸ್ತಾನ, ಬಾಂಗ್ಲಾದೇಶಗಳು ಕೂಡ ಸಾರ್ಕ್ ಶೃಂಗಸಭೆಯಿಂದ ಹಿಂದಕ್ಕೆ ಸರಿದಿದ್ದವು. ಅದೇ ರೀತಿ ಪಾಕಿಸ್ತಾನ ಕೂಡ ಇದೇ ಡಿಸೆಂಬರ್ 3ರಿಂದ ಅಮೃತಸರದಲ್ಲಿ ಆರಂಭವಾಗಲಿರುವ ಎಷ್ಯನ್ ಕಾನ್ಫರೆನ್ಸ್ ನಲ್ಲಿ ಗೈರಾಗುವ ಕುರಿತು ಮಾತುಗಳು ಕೇಳಿಬಂದಿದ್ದವು.
ಈ ಬಗ್ಗೆ ಪಾಕಿಸ್ತಾನದ ಖಾಸಗಿ ಸುದ್ದಿವಾಹಿನಿಗೆ ಮಾಹಿತಿ ನೀಡಿರುವ ಸಲಹೆಗಾರ ಸರ್ತಾಜ್ ಎಜೀಜ್ ಅವರು, ತಾವು ಭಾರತದಲ್ಲಿ ನಡೆಯಲಿರುವ ಏಷ್ಯನ್ ಕಾನ್ಫರೆನ್ಸ್ ನಲ್ಲಿ ಪಾಲ್ಗೊಳ್ಳುವುದಾಗಿ ಹೇಳಿದ್ದಾರೆ. ಆದರೆ ಸಭೆಯಲ್ಲಿ ಭಾರತದ ವಿದೇಶಾಂಗ ಸಲಹೆಗಾರರನ್ನು ಭೇಟಿ ಮಾಡುವ ಕುರಿತು ಎಜೀಜ್ ಯಾವುದೇ ಮಾಹಿತಿ ನೀಡಿಲ್ಲ. "ಇಂಡೋ-ಪಾಕಿಸ್ತಾನ ಗಡಿಯಲ್ಲಿ ಭಾರತೀಯ ಯೋಧರು ಪಾಕಿಸ್ತಾನದ ಏಳು ಮಂದಿ ಸೈನಿಕರನ್ನು ಕೊಂದು ಹಾಕಿದ್ದಾರೆ. ಆದರೂ ಕೂಡ ಪಾಕಿಸ್ತಾನ ಏಷ್ಯನ್ ಕಾನ್ಫರೆನ್ಸ್ ಅನ್ನು ಬಹಿಷ್ಕರಿಸುವುದಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ಏಷ್ಯನ್ ಕಾನ್ಫರೆನ್ಸ್ ನಲ್ಲಿ ಆಫ್ಘಾನಿಸ್ತಾನ ನಮ್ಮ ಪ್ರಮುಖ ವಿಷಯವಲ್ಲ ಎಂದೂ ಏಜೀಜ್ ಹೇಳಿದ್ದಾರೆ.
ಅಮೃತಸರದಲ್ಲಿ ನಡೆಯಲಿರುವ ಏಷ್ಯನ್ ಕಾನ್ಫರೆನ್ಸ್ ನಲ್ಲಿ ಆಫ್ಘಾನಿಸ್ತಾನ ವಿಚಾರ ಪ್ರಮುಖವಾಗಿ ಚರ್ಚೆಗೆ ಬರುವ ವಿಷಯವಾಗಿದ್ದು, ಮೂಲಭೂತವಾದಿಗಳ ಕಪಿಮುಷ್ಟಿಯಲ್ಲಿರುವ ಆಫ್ಘಾನಿಸ್ತಾನದಲ್ಲಿ ಶಾಂತಿ ಸ್ಥಾಪಿಸುವ ಕುರಿತು ಕೈಗೊಳ್ಳಬೇಕಾದ ಪ್ರಮುಖ ನಿರ್ಧಾರಗಳು ಕುರಿತು ಚರ್ಚಿಸಲಾಗುತ್ತದೆ ಎಂದು ತಿಳಿದುಬಂದಿದೆ.
19 ಭಾರತೀಯ ಯೋಧರ ಸಾವಿಗೆ ಕಾರಣವಾದ ಪಾಕಿಸ್ತಾನ ಮೂಲದ ಉಗ್ರರು ನಡೆಸಿದ ಉರಿ ಉಗ್ರ ದಾಳಿ ಘಟನೆ ನಡೆದ ಬಳಿಕ ಇದೇ ಮೊದಲ ಬಾರಿಗೆ ಪಾಕಿಸ್ತಾನದ ವಿದೇಶಾಂಗ ಸಲಹೆಗಾರ ಸರ್ಜಾಜ್ ಎಜೀಜ್ ಅವರು ಭಾರತಕ್ಕೆ ಆಗಮಿಸುತ್ತಿದ್ದಾರೆ.
Advertisement