
ನವದೆಹಲಿ: ಭಾರತೀಯ ಸೇನೆಯನ್ನು ಕೆರಳಿಸುವ ಕೆಲಸಗಳನ್ನು ಮಾಡಿ, ನಂತರ ಏನೂ ತಿಳಿಯದಂತೆ ನಟಿಸುವ ಪಾಕಿಸ್ತಾನ ಸೇನೆಯ ಮತ್ತೊಂದು ಮುಖವಾಡ ಬಯಲಾಗಿದ್ದು, ಭಾರತದ ಗಡಿಯಲ್ಲಿ ಸಮಾರಾಭ್ಯಾಸವನ್ನು ನಡೆಸಿ ಪರೋಕ್ಷವಾಗಿ ಭಾರತೀಯ ಸೇನೆಗೆ ಪ್ರಚೋದನೆ ನೀಡುವ ಕೆಲಸಗಳನ್ನ ಮಾಡುತ್ತಿದೆ.
ಪಂಜಾಬ್ ಪ್ರಾಂತ್ಯದ ಭಾರತೀಯ ಗಡಿ ಭವಲ್ಪುರ್ ನ ಖೈರ್ಪುರ್ ತಮೇವಾಲಿ ಪ್ರದೇಶದಲ್ಲಿ ಪಾಕಿಸ್ತಾನ ಸೇನೆ ತನ್ನ ಸಮರಾಭ್ಯಾಸ ಚಟುವಟಿಕೆಗಳನ್ನು ನಡೆಸುತ್ತಿದೆ ಎಂದು ತಿಳಿದುಬಂದಿದೆ.
ಪಾಕಿಸ್ತಾನ ಪ್ರಧಾನಮಂತ್ರಿ ನವಾಜ್ ಷರೀಫ್ ಹಾಗೂ ಪಾಕಿಸ್ತಾನ ಸೇನಾ ಮುಖ್ಯಸ್ಥ ರಹೀಲ್ ಷರೀಫ್ ಅವರು ಸೇನಾ ಪಡೆ ಮತ್ತು ವಾಯುಪಡೆಗಳ ಈ ಸಮರಾಭ್ಯಾಸವನ್ನು ವೀಕ್ಷಿಸಿದ್ದಾರೆಂದು ವರದಿಗಳು ತಿಳಿಸಿವೆ.
ಗಡಿಯಲ್ಲಿ ಪಾಕಿಸ್ತಾನದ ಸೇನಾ ಪಡೆ ಹಾಗೂ ವಾಯುಪಡೆಗಳು ಯುದ್ಧ ಹೆಲಿಕಾಪ್ಟರ್ ಗಳೊಂದಿಗೆ ಸಮಾರಾಭ್ಯಾಸವನ್ನು ನಡೆಸುತ್ತಿವೆ ಎಂದು ತಿಳಿದುಬಂದಿದೆ.
ಗಡಿಯಲ್ಲಿ ಅಪ್ರಚೋದಿತ ಗುಂಡಿನ ದಾಳಿ ಹಾಗೂ ಪದೇ ಪದೇ ಕದನ ವಿರಾಮ ಉಲ್ಲಂಘಿಸುತ್ತಿದ್ದ ಪಾಕಿಸ್ತಾನ ಸೇನೆಗೆ ಇತ್ತೀಚೆಗಷ್ಟೇ ದಿಟ್ಟ ಉತ್ತರವನ್ನು ನೀಡಿತ್ತು. ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿದ್ದ 7 ಪಾಕಿಸ್ತಾನ ಸೈನಿಕರನ್ನು ಭಾರತೀಯ ಸೇನೆ ಹತ್ಯೆ ಮಾಡಿತ್ತು. ಇದರ ಬೆನ್ನಲ್ಲೇ ಇದೀಗ ಪಾಕಿಸ್ತಾನ ಸೇನೆ ಭಾರತದ ಗಡಿಯಲ್ಲಿ ಸಮರಾಭ್ಯಾಸ ನಡೆಸುತ್ತಿರುವುದು ಮಹತ್ವವನ್ನು ಪಡೆದುಕೊಂಡಿದೆ.
ಪಾಕಿಸ್ತಾನ ಸೈನಿಕರ ಹತ್ಯೆ ಕುರಿತಂತೆ ಈ ಹಿಂದೆ ಹೇಳಿಕೆ ನೀಡಿದ್ದ ಪಾಕಿಸ್ತಾನ ಪ್ರಧಾನಮಂತ್ರಿ ನವಾಜ್ ಷರೀಪ್ ಅವರು, ಭಾರತದ ತಂತ್ರಗಳಿಗೆ ಪಾಕಿಸ್ತಾನ ಎಂದಿಗೂ ಬಗ್ಗುವುದಿಲ್ಲ. ನಮ್ಮ ತಾಳ್ಮೆಯನ್ನು ದೌರ್ಬಲವ್ಯವೆಂದು ಪರಿಗಣಿಸಬಾರದು. ಯಾವುದೇ ರೀತಿಯ ಆಕ್ರಮಣಗಳು ನಡೆದರೂ ಅದನ್ನು ಎದುರಿಸಲು ಪಾಕಿಸ್ತಾನ ಸದಾ ಸಿದ್ಧವಿದೆ ಎಂದು ಹೇಳಿದ್ದರು.
Advertisement