ವಾಷಿಂಗ್ಟನ್: ನೂತನ ಸಮೀಕ್ಷೆಯೊಂದರ ಪ್ರಕಾರ, ಹೊಸದಾಗಿ ಆಯ್ಕೆಯಾಗಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡುವುದನ್ನು ನಿಲ್ಲಿಸಬೇಕೆಂಬ ಅಭಿಪ್ರಾಯವನ್ನು ಅಮೆರಿಕಾ ಮತದಾರರು ವ್ಯಕ್ತಪಡಿಸಿದ್ದಾರಂತೆ.
ಕ್ವಿನ್ನಿಪಿಯಕ್ ವಿಶ್ವವಿದ್ಯಾಲಯ ನಡೆಸಿರುವ ರಾಷ್ಟ್ರೀಯ ಸಮೀಕ್ಷೆಯ ಪ್ರಕಾರ ೫೯% ಜನ ಟ್ರಂಪ್ ತಮ್ಮ ಟ್ವಿಟರ್ ಖಾತೆಯನ್ನು ಸ್ಥಗಿತಗೊಳಿಸಬೇಕೆಂದು ಹೇಳಿದ್ದಾರಂತೆ.
"ಈಗ ನಿಮಗೆ ಹೊಸ ಕೆಲಸ ಸಿಕ್ಕಿದೆ. ನಾಯಕರಾಗಿ, ಟ್ವೀಟರ್ ಆಗ್ಬೇಡಿ" ಎಂದು ಜನ ಹೇಳುತ್ತಿದ್ದಾರೆ ಎಂದು ಕ್ವಿನ್ನಿಪಿಯಕ್ ವಿಶ್ವವಿದ್ಯಾಲಯ ಸಮೀಕ್ಷೆಯ ಸಹ ಸಂಪಾದಕ ಟಿಮ್ ಮೆಲ್ಲಾಯ್ ಹೇಳಿದ್ದಾರೆ.
"ನೀವು ಟ್ರಂಪ್ ಬ್ರಾಂಡ್ ಬದಲು ದೇಶವನ್ನು ಮುಂದು ಮಾಡುತ್ತೀರೆಂದು ಕಾಯುತ್ತಿದ್ದೇವೆ" ಎಂದು ಮತದಾರರು ತಿಳಿಸಿದ್ದಾರೆ.
"ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿರುವುದಕ್ಕೆ ಮುಂದಿನ ನಾಲ್ಕು ವರ್ಷಗಳ ಬಗ್ಗೆ ಆಶಾದಾಯವಿದೆ" ಎಂದು ಬಹುತೇಕ ಮತದಾರರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಟ್ರಂಪ್ ನೀತಿಗಳು ಅಮೆರಿಕಾ ಆರ್ಥಿಕ ವ್ಯವಸ್ಥೆಯನ್ನು ವೃದ್ಧಿಸಲಿವೆ ಎಂದು ೫೨% ಜನ ಹೇಳಿದ್ದಾರೆ, ೩೧% ಜನ ಇದರಿಂದ ಧಕ್ಕೆಯಾಗಲಿದೆ ಎಂದಿದ್ದಾರೆ.
ಟ್ರಂಪ್ ಅಮೆರಿಕಾವನ್ನು ಇನ್ನಷ್ಟು ಒಡೆಯಲಿದ್ದಾರೆ ಎಂದು ೪೯% ಜನ ಹೇಳಿದ್ದಾರೆ, ೪೭% ಜನ ಒಗ್ಗೂಡಿಸಲಿದ್ದಾರೆ ಎಂದಿದ್ದಾರೆ. ನವೆಂಬರ್ ೧೭ ರಿಂದ ೨೦ ರವರೆಗೆ ನಡೆಸಿರುವ ಈ ಸಮೀಕ್ಷೆಯಲ್ಲಿ ರಾಷ್ಟ್ರದಾದ್ಯಂತ ೧೦೭೧ ಮತದಾರರು ಭಾಗಿಯಾಗಿದ್ದಾರೆ.