
ಇಸ್ಲಾಮಾಬಾದ್: ಗಡಿ ನಿಯಂತ್ರಣ ರೇಖೆ ಬಳಿ ಭಾರತ ಕದನ ವಿರಾಮವನ್ನು ಉಲ್ಲಂಘನೆ ಮಾಡುತ್ತಿದೆ ಎಂದು ಆರೋಪಿಸಿರುವ ಪಾಕಿಸ್ತಾನ ಭಾರತದ ಉಪ ಹೈಕಮಿಷನರ್ ಜೆ.ಪಿ.ಸಿಂಗ್ ಅವರಿಗೆ ಸಮನ್ಸ್ ಜಾರಿ ಮಾಡಿದೆ ಎಂದು ಗುರುವಾರ ತಿಳಿದುಬಂದಿದೆ.
ಪಾಕಿಸ್ತಾನ ಮಹಾ ನಿರ್ದೇಶಕ (ದಕ್ಷಿಣ ಏಷ್ಯಾ ಮತ್ತು ಸಾರ್ಕ್) ಡಾ.ಮೊಹಮ್ಮದ್ ಫೈಸಲ್ ಭಾರತೀಯ ರಾಯಭಾರಿ ಜೆ.ಪಿ. ಸಿಂಗ್ ಅವರಿಗೆ ಸಮನ್ಸ್ ಜಾರಿ ಮಾಡಿದ್ದಾರೆಂದು ಹೇಳಲಾಗುತ್ತಿದೆ.
ನವೆಂಬರ್ 21ರಂದು ಗಡಿ ನಿಯಂತ್ರಣ ರೇಖೆ ಬಳಿ ಅಪ್ರಚೋದಿತ ದಾಳಿ ಹಾಗೂ ಕದನ ವಿರಾಮವನ್ನು ಉಲ್ಲಂಘನೆ ಮಾಡಿರುವುದನ್ನು ಪಾಕಿಸ್ತಾನ ತೀವ್ರವಾಗಿ ಖಂಡಿಸುತ್ತದೆ. ಜನ್ದ್ರೋತ್, ನಿಕಯಲ್, ಕರೇಲಾ ಮತ್ತು ಬರೋಹ್ ಸೆಕ್ಟರ್ ಗಳ ಭಾರತ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದು, ಪರಿಣಾಮ ಷಹದತ್ ನಲ್ಲಿ ನಾಲ್ವರು ನಾಗರೀಕರು ಸಾವನ್ನಪ್ಪಿ, 10 ಮಂದಿ ಗಾಯಗೊಂಡಿದ್ದಾರೆ.
ನಾಗರೀಕ ಪ್ರದೇಶಗಳ ಮೇಲೆ ದಾಳಿ ಮಾಡುತ್ತಿರುವುದು ನಿಜಕ್ಕೂ ಶೋಚನೀಯ ಸಂಗತಿ ಎಂದು ಸಮನ್ಸ್ ನಲ್ಲಿ ಪಾಕಿಸ್ತಾನ ಅಧಿಕಾರಿ ತಿಳಿಸಿದ್ದಾರೆ. ಇದಲ್ಲದೆ, ನವೆಂಬರ್ 14 ರಂದು ಭಾರತ ನಡೆಸಿದ ಸಮರಾಭ್ಯಾಸಕ್ಕೆ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆಂದು ತಿಳಿದುಬಂದಿದೆ.
ಗಡಿಯಲ್ಲಿ ನಡೆಯುತ್ತಿರುವ ಕದನ ವಿರಾಮ ಕುರಿತಂತೆ ಭಾರತ ಸೂಕ್ತ ರೀತಿಯಲ್ಲಿ ತನಿಖೆ ನಡೆಸಬೇಕಿದ್ದು, ಯೋಧರಿಗೆ ಅಂತರಾಷ್ಟ್ರೀಯ ಗಡಿ ಹಾಗೂ ಕದನ ವಿರಾಮ ಉಲ್ಲಂಘನೆ ಒಪ್ಪಂದವನ್ನು ಗೌರವಿಸುವಂತೆ ತಿಳಿಸಿ ಎಂದು ಹೇಳಿದ್ದಾರೆಂದು ತಿಳಿದುಬಂದಿದೆ.
Advertisement