ಬ್ಯಾಂಕಾಕ್: ವಿಶ್ವದಲ್ಲೇ ಅತಿ ಹೆಚ್ಚು ಕಾಲ ಚಕ್ರವರ್ತಿಯಾಗಿ ಆಡಳಿತ ನಡೆಸಿದ ದೊರೆ ಎಂಬ ಗೌರವಕ್ಕೆ ಪಾತ್ರರಾಗಿದ್ದ ಥಾಯ್ಲೆಂಡ್ ದೊರೆ ಭೂಮಿಬೊಲ್ ಅವರು ತಮ್ಮ 88ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ ಎಂದು ಥಾಯ್ಲೆಂಡ್ ಅರಮನೆ ಪ್ರಕಟಿಸಿದೆ.
ಬ್ಯಾಂಕಾಕ್ನ ಸಿರಿರಾಜ್ ಆಸ್ಪತ್ರೆಯಲ್ಲಿ ಗುರುವಾರ ದೊರೆ ಶಾಂತರಾಗಿ ಕೊನೆಯುಸಿರೆಳೆದಿರುವುದಾಗಿ ಅರಮನೆ ತಿಳಿಸಿದೆ.
ವೈದ್ಯರ ತಂಡ ಅವಿರತ ಶ್ರಮ ಪಟ್ಟು ಚಿಕಿತ್ಸೆ ನೀಡಿದರೂ ದೊರೆಯ ಆರೋಗ್ಯ ಸ್ಥಿತಿ ಸುಧಾರಣೆಯಾಗಲಿಲ್ಲ, ಬದಲಿಗೆ ಇಂದು ಮತ್ತಷ್ಟು ವಿಷಮಿಸಿತು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಆದರೆ ಶೋಕಾಚರಣೆ ಅಥವಾ ಉತ್ತರಾಧಿಕಾರತ್ವದ ಬಗ್ಗೆ ಯಾವುದೇ ಪ್ರಸ್ತಾಪ ಮಾಡಿಲ್ಲ.
ಭೂಮಿಬೊಲ್ ಅಡುಲ್ಯಡೆಜ್ ಅವರು 1946ರಲ್ಲಿ ದೊರೆಯಾಗಿ ಅಧಿಕಾರ ವಹಿಸಿಕೊಂಡರು. ಥಾಯ್ಲೆಂಡ್ನಲ್ಲಿ ಜನ ಅವರನ್ನು ದೇವಾಂಶಸಂಭೂತ ಎಂದೇ ಭಾವಿಸಿದ್ದರು. ಸುಧಾರಣೆಗಳಿಗೆ ಪ್ರಭುತ್ವದ ಜೊತೆಗೆ ಸಾಮಾನ್ಯ ಸ್ಪರ್ಶವನ್ನೂ ನೀಡುವ ಮೂಲಕ ಅವರು ರಾಷ್ಟ್ರವನ್ನು ಮುನ್ನಡೆಸಿದ್ದರು.
ದಶಕದ ಬಳಿಕ ಅನಾರೋಗ್ಯದ ಹಿನ್ನೆಲೆಯಲ್ಲಿ ದೊರೆ ಸಾರ್ವಜನಿಕ ಬದುಕಿನಿಂದ ದೂರ ಸರಿದಿದ್ದರು. ಬ್ಯಾಂಕಾಕ್ ಆಸ್ಪತ್ರೆಯಲ್ಲಿ ವಾಸವಾಗಿದ್ದ ಅವರು ಇತ್ತೀಚೆಗೆ ಥಾಯ್ಲೆಂಡನ್ನು ಅಲುಗಾಡಿಸಿದ್ದ ರಾಜಕೀಯ ಏಳುಬೀಳುಗಳ ಬಗ್ಗೆ ಗಂಭೀರ ಮೌನವನ್ನು ತಾಳಿದ್ದರು.