
ರಾವಲ್ಪಿಂಡಿ: ಪಾಕಿಸ್ತಾನ ಸರ್ಕಾರ ಹಾಗೂ ಸೇನೆ ನಡುವಿನ ಬಿರುಕಿನ ಕುರಿತಂತೆ ಡಾನ್ ವರದಿ ಮಾಡಿರುವುದಕ್ಕೆ ಪಾಕಿಸ್ತಾನ ಸೇನೆ ಆಕ್ಷೇಪ ವ್ಯಕ್ತಪಡಿಸಿದ್ದು, ಡಾನ್ ವರದಿಯಿಂದ ರಾಷ್ಟ್ರೀಯ ಭದ್ರತೆಗೆ ಧಕ್ಕೆಯುಂಟಾಗಿದೆ ಎಂದು ಶನಿವಾರ ಹೇಳಿದೆ.
ಗಡಿ ಭದ್ರತೆ ಹಾಗೂ ಭಯೋತ್ಪಾದಕರ ವಿರುದ್ಧ ಕ್ರಮಕೈಗೊಳ್ಳುವ ಕುರಿತಂತೆ ನಿನ್ನೆಯಷ್ಟೇ ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ರಹೀಲ್ ಶರೀಫ್ ಅವರು ಅಧಿಕಾರಿಗಳೊಂದಿಗೆ ಸಭೆಯನ್ನು ನಡೆಸಿದ್ದರು. ಸಭೆಯಲ್ಲಿ ಗಡಿ ನಿಯಂತ್ರಣ ರೇಖೆ ಬಳಿಯಿರುವ ಪರಿಸ್ಥಿತಿ ಹಾಗೂ ಸೇನಾ ಸಿದ್ಧತೆ ಕುರಿತಂತೆ ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ.
ಅಲ್ಲದೆ, ಡಾನ್ ಪತ್ರಿಕೆಯ ವರದಿ ಕುರಿತಂತೆಯೂ ಮಾತುಕತೆ ನಡೆಸಲಾಗಿದೆ. ಮಾತುಕತೆ ವೇಳೆ ಡಾನ್ ಪತ್ರಿಕೆ ರಾಷ್ಟ್ರೀಯ ಭದ್ರತಾ ನಿಯಮಗಳನ್ನು ಉಲ್ಲಂಘನೆ ಮಾಡಿದೆ ಎಂದು ರಹೀಲ್ ಶರೀಫ್ ಅವರು ಅಭಿಪ್ರಾಯಪಟ್ಟಿದ್ದಾರೆನ್ನಲಾಗಿದೆ. ಇದೇ ವೇಳೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಉಗ್ರರ ನೆಲೆಗಳ ಮೇಲೆ ಭಾರತೀಯ ಸೇನೆ ನಡೆಸಿದ್ದ ಸೀಮಿತ ದಾಳಿಯನ್ನು ತಿರಸ್ಕರಿಸಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ.
ಭಯೋತ್ಪಾದನೆ ಕುರಿತಂತೆ ವಿಶ್ವದಲ್ಲಿ ವ್ಯಕ್ತವಾಗುತ್ತಿರುವ ವಿರೋಧಗಳಿಗೆ ಈಗಾಗಲೇ ಪಾಕಿಸ್ತಾನ ಕೇಂದ್ರ ಬಿಂದುವಾಗಿ ನಿಂತಿದೆ. ಈಗಾಗಲೇ ವಿಶ್ವ ಸಮುದಾಯದಲ್ಲಿ ಪ್ರತ್ಯೇಕಗೊಳ್ಳುವ ಭೀತಿಯಲ್ಲಿರುವ ಪಾಕಿಸ್ತಾನಕ್ಕೆ ಆಂತರಿಕ ಸಮಸ್ಯೆಗಳೂ ಕೂಡ ಎದುರಾಗತೊಡಗಿವೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಪ್ರಜೆಗಳು ಅಲ್ಲಿನ ಸರ್ಕಾರದ ವಿರುದ್ಧ ದಿಕ್ಕಾರ ಕೂಗಿ ಪ್ರತಿಭಟನೆಗಳನ್ನು ನಡೆಸುತ್ತಿವೆ. ಇದರ ನಡುವೆಯೇ ಅಲ್ಲಿನ ಮಾಧ್ಯಮವೇ ಪಾಕಿಸ್ತಾನದಲ್ಲಿ ಉಂಟಾಗಿರುವ ಆಂತರಿಕ ಹಗ್ಗಜಗ್ಗಾಟವನ್ನು ವಿಶ್ವಕ್ಕೆ ತಿಳಿಯುವಂತೆ ಬಹಿರಂಗಪಡಿಸಿದೆ.
ಕೆಲ ದಿನಗಳ ಹಿಂದಷ್ಟೇ ಪಾಕಿಸ್ತಾನ ಮೂಲಕ ಡಾನ್ ಪತ್ರಿಕೆ ಪಾಕಿಸ್ತಾನ ಸೇನೆ ಹಾಗೂ ಅಲ್ಲಿನ ಸರ್ಕಾರದ ನಡುವಿನ ಆಂತರಿಕ ಯುದ್ಧದ ಕುರಿತಂತೆ ವರದಿ ಮಾಡಿತ್ತು. ಸಿರಿಲ್ ಅಲ್‌ಮೇಡಾ ಅವರು ಸೇನೆ ಹಾಗೂ ಅಲ್ಲಿನ ಸರ್ಕಾರದ ನಡುವಿನ ಹೊಂದಾಣಿಕೆ ಕುರಿತಂತೆ ಲೇಖನವೊಂದನ್ನು ಬರೆದಿದ್ದರು.
ಭಾರತೀಯ ಸೇನೆ ಸೀಮಿತ ದಾಳಿ ನಡೆಸಿರುವುದೇ ಸುಳ್ಳು ಎಂದು ಒಂದೆಡೆ ಪಾಕಿಸ್ತಾನ ಪ್ರತಿಪಾದಿಸುತ್ತಿರುವಾಗಲೇ ಪಾಕಿಸ್ತಾನ ಸೇನೆ ಹಾಗೂ ಅಲ್ಲಿನ ಸರ್ಕಾರ ನಡುವೆ ಭಿನ್ನಾಭಿಪ್ರಾಯ, ಒಡಕು ಇರುವುದಾಗಿ ಸಿರಿಲ್ ಅಲ್‌ಮೇಡಾ ಲೇಖನ ಬರೆದಿದ್ದರು. ಇದರಿಂದ ಸೀಮಿತ ದಾಳಿ ನಡೆಸಿರುವ ಭಾರತದ ಹೇಳಿಕೆ ಪಾಕಿಸ್ತಾನದಿಂದಲೇ ದೃಢಪಟ್ಟಿತ್ತು.
ಭಾರತೀಯ ಸೇನೆ ಸೀಮಿತ ದಾಳಿ ನಡೆಸಿದ ಬಳಿಕ ಪಾಕಿಸ್ತಾನ ಪ್ರಧಾನಮಂತ್ರಿ ನವಾಜ್ ಷರೀಫ್ ಅವರು ಉನ್ನತ ಮಟ್ಟದ ಸಭೆಯೊಂದನ್ನು ನಡೆಸಿದ್ದರು. ಸಭೆಯಲ್ಲಿ ಪಾಕಿಸ್ತಾನ ಸೇನೆಗೆ ಉಗ್ರರ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಸೂಚಿಸಿದ್ದರು. ಒಂದು ವೇಳೆ ಉಗ್ರರ ವಿರುದ್ಧ ಕ್ರಮಕೈಗೊಳ್ಳದಿದ್ದರೆ, ಪಾಕಿಸ್ತಾನ ರಾಷ್ಟ್ರ ಅಂತರಾಷ್ಟ್ರೀಯ ಸಮುದಾಯದಲ್ಲಿ ಪ್ರತ್ಯೇಕಗೊಳ್ಳುವ ಅಪಾಯವಿದೆ ಹೀಗಾಗಿ ಕೂಡಲೇ ಉಗ್ರರ ವಿರುದ್ಧ ಕ್ರಮಕೈಗೊಳ್ಳಿ ಎಂದು ಸೇನೆಗೆ ಎಚ್ಚರಿಕೆಯ ಸಂದೇಶವನ್ನು ನೀಡಿದ್ದರು. ಈ ವಿಚಾರದಲ್ಲಿ ಸೇನೆ ಹಾಗು ಸರ್ಕಾರ ನಡುವೆ ಮನಸ್ತಾಪವಿದೆ. ಇಬ್ಬರ ನಡುವೆ ಹೊಂದಾಣಿಕೆಯಿಲ್ಲ ಎಂದು ಸಿರಿಲ್ ಅಲ್‌ಮೇಡಾ ಲೇಖನವನ್ನು ಬರೆದಿದ್ದರು.
ಈ ಲೇಖವನ್ನು ಗಂಭೀರವಾಗಿ ಪರಿಗಣಿಸಿದ್ದ ಪಾಕಿಸ್ತಾನ ಸರ್ಕಾರ, ಸಿರಿಲ್ ಅಲ್‌ಮೇಡಾ ಅವರಿಗೆ ಪಾಕಿಸ್ತಾನ ದೇಶದಿಂದ ಹೊರಹೋಗದಂತೆ ನಿರ್ಬಂಧ ಹೇರಿತ್ತು.
ಮಾಧ್ಯಮ ವರದಿಗಾರ ಹಾಗೂ ಅಂಕಣಕಾರನಿಗೆ ಪಾಕಿಸ್ತಾನ ಸರ್ಕಾರ ನಿರ್ಬಂಧ ಹೇರಿರುವುದಕ್ಕೆ ವಿಶ್ವದೆಲ್ಲಡೆ ತೀವ್ರ ವಿರೋಧಗಳು ವ್ಯಕ್ತವಾಗತೊಡಿಗಿದ್ದವು. ವಿಶ್ವದ ದೊಡ್ಡಣ್ಣ ಅಮೆರಿಕಾ ಕೂಡ ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿತ್ತು. ವಿಚಾರದ ಗಂಭೀರತೆಯನ್ನು ಅರಿತು ಎಚ್ಚೆತ್ತುಕೊಂಡ ಪಾಕಿಸ್ತಾನ ಪತ್ರಕರ್ತನ ಮೇಲೆ ಹೇರಲಾಗಿದ್ದ ನಿರ್ಬಂಧವನ್ನು ಹಿಂದಕ್ಕೆ ಪಡೆಯಿತು.
Advertisement