ಭಯೋತ್ಪಾದನೆ ಮಟ್ಟಹಾಕಲು ಬಹ್ರೇನ್ ಜೊತೆ ಜಂಟಿ ಹೋರಾಟಕ್ಕೆ ಭಾರತ ಸಿದ್ಧ: ರಾಜನಾಥ ಸಿಂಗ್

ಭಯೋತ್ಪಾದನೆ ಇಡೀ ವಿಶ್ವಕ್ಕೆ ದೊಡ್ಡ ಆಪಾಯವಾಗಿದ್ದು, ಬಹ್ರೇನ್ ರಾಷ್ಟ್ರದೊಂದಿಗೆ ಕೂಡಿ ಭಯೋತ್ಪಾದನೆಯನ್ನು ಮಟ್ಟ ಹಾಕಲು ಜಂಟಿಯಾಗಿ ಕಾರ್ಯಾಚರಣೆ ನಡೆಸಲು ಭಾರತ ಸಿದ್ಧವಿದೆ...
ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್
ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್

ಮನಾಮ: ಭಯೋತ್ಪಾದನೆ ಇಡೀ ವಿಶ್ವಕ್ಕೆ ದೊಡ್ಡ ಆಪಾಯವಾಗಿದ್ದು, ಬಹ್ರೇನ್ ರಾಷ್ಟ್ರದೊಂದಿಗೆ ಕೂಡಿ ಭಯೋತ್ಪಾದನೆಯನ್ನು ಮಟ್ಟ ಹಾಕಲು ಜಂಟಿಯಾಗಿ ಕಾರ್ಯಾಚರಣೆ ನಡೆಸಲು ಭಾರತ ಸಿದ್ಧವಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅವರು ಮಂಗಳವಾರ ಹೇಳಿದ್ದಾರೆ.

ಬಹ್ರೇನ್ ರಾಷ್ಟ್ರಕ್ಕೆ ರಾಜನಾಥ ಸಿಂಗ್ ಅವರು ಭೇಟಿ ನೀಡಿದ್ದು, ಬಹ್ರೇನ್ ಉನ್ನತ ನಾಯಕರೊಂದಿಗೆ ಭಯೋತ್ಪಾದನೆ ಕುರಿತಂತೆ ಮಾತುಕತೆಯನ್ನು ನಡೆಸಿದ್ದಾರೆ.

ಬಹ್ರೇನ್ ಪ್ರಜೆಗಳು ಹಾಗೂ ಭಾರತೀಯರು ಹಲವು ವರ್ಷಗಳಿಂದಲೂ ಒಟ್ಟಿಗೆ ವಾಸ ಮಾಡುತ್ತಿದ್ದಾರೆ. ಎರಡು ಸರ್ಕಾರಗಳ ನಡುವಿನ ಒಪ್ಪಂದಗಳು ಮತ್ತಷ್ಟು ಅಭಿವೃದ್ಧಿಗೆ ಕಾರಣವಾಗುತ್ತವೆ. ಭದ್ರತೆ ಕುರಿತಂತೆ ಉಭಯ ರಾಷ್ಟ್ರಗಳು ಹಲವು ಒಪ್ಪಂದಗಳಿಗೆ ಒಪ್ಪಿಗೆ ಸೂಚಿಸಿವೆ. ಪ್ರಮುಖವಾಗಿ ಭಯೋತ್ಪಾದನೆ ಮಟ್ಟಹಾಕುವ ಕುರಿತ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ ಎಂದು ಬಹ್ರೇನ್ ಆಂತರಿಕ ಸಚಿವ ಲೆಫ್ಟಿನೆಂಟ್ ಜನರಲ್ ಶೇಖ್ ರಷಿದ್ ಬಿನ್ ಅಬ್ದುಲ್ಲಾ ಅಲ್ ಖಲೀಫಾ ಅವರು ಹೇಳಿದ್ದಾರೆ.

ಭಯೋತ್ಪಾದಕರ ದಾಳಿಯ ಅನುಭವಗಳು ಬಹ್ರೇನ್ ರಾಷ್ಟ್ರಕ್ಕೂ ಆಗಿದೆ. ಉಗ್ರ ಕೃತ್ಯಗಳಿಂದ ಸಾಕಷ್ಟು ಪ್ರಾಣಹಾನಿಗಳು, ಮುಗ್ಧ ಜನರಿಗೆ ಗಾಯ ಹಾಗೂ ದೇಶದ ಮೂಲಭೂತ ಸೌಕರ್ಯಗಳ ಮೇಲೆ ಪರಿಣಾಮ ಬೀರುತ್ತವೆ.

ಭಯೋತ್ಪಾದನೆ ವಿರುದ್ಧ ಹೋರಾಡಲು ಎರಡು ರಾಷ್ಟ್ರಗಳು ಮತ್ತಷ್ಟು ಪ್ರಮುಖ ತೀರ್ಮಾನಗಳನ್ನು ಕೈಗೊಂಡಿದೆ. ಒಪ್ಪಂದಗಳ ಮೂಲಕ ಪ್ರಾದೇಶಿಕ ಭದ್ರತೆಗಳನ್ನು ಹೆಚ್ಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಬಹ್ರೇನ್ ನಾಯಕರಿಗೆ ಧನ್ಯವಾದ ಸೂಚಿಸಿರುವ ರಾಜನಾಥ ಸಿಂಗ್ ಅವರು, ಎರಡು ರಾಷ್ಟ್ರಗಳ ನಡುವೆ ಪ್ರೀತಿ ಹಾಗೂ ಶಾಂತಿಯುತವಾಗಿ ಐತಿಹಾಸಿಕ ಒಪ್ಪಂದಗಳು ನಡೆದಿದೆ. ಬಹ್ರೇನ್ ನಾಗರೀಕ ಹಾಗೂ ಮುಕ್ತ ಸಮಾಜವನ್ನು ಹೊಂದಿರುವ ರಾಷ್ಟ್ರವಾಗಿದ್ದು, ಇದು ಏಕತೆ ಮತ್ತು ಸಹಬಾಳ್ವೆ ಉತ್ತೇಜಿಸುತ್ತದೆ. ಪರಸ್ಪರ ಭೇಟಿ ಉಭಯ ರಾಷ್ಟ್ರಗಳ ದ್ವಿಪಕ್ಷೀಯ ಒಪ್ಪಂದಗಳನ್ನು ಗಟ್ಟಿಗೊಳಿಸುತ್ತದೆ ಎಂದು ಹೇಳಿದ್ದಾರೆ.

ಭಯೋತ್ಪಾದನೆ ಇಡೀ ವಿಶ್ವಕ್ಕೆ ಅಪಾಯವಾಗಿದ್ದು, ಭಯೋತ್ಪಾದನೆ ವಿರುದ್ಧ ಹೋರಾಡಲು ಎರಡೂ ರಾಷ್ಟ್ರಗಳು ಹಲವು ಒಪ್ಪಂದಗಳನ್ನು ಮಾಡಿಕೊಂಡಿದೆ. ಭಯೋತ್ಪಾದನೆ ವಿರುದ್ಧ ಜಂಟಿಯಾಗಿ ಹೋರಾಟ ಮಾಡಲು ಭಾರತ ಸಿದ್ಧವಿದೆ. ಭಯೋತ್ಪಾದಕರನ್ನು ಸ್ವಾತಂತ್ರ್ಯ ಹೋರಾಟಗಾರರೆಂದು ಬಿಂಬಿಸುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com