
ನ್ಯೂಯಾರ್ಕ್: ಇಸ್ಲಾಮಾಬಾದ್ ತನ್ನ ಜನರನ್ನು ಮೂರ್ಖರನ್ನಾಗಿ ಮಾಡಬಹುದು ಆಧರೆ, ಭಯೋತ್ಪಾದನೆ ಕುರಿತಂತೆ ವಿಶ್ವವನ್ನು ಮೂರ್ಖರನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಕೇಂದ್ರ ವಿದೇಶಾಂಗ ಖಾತೆ ರಾಜ್ಯ ಸಚಿವ ಎಂ.ಜೆ. ಅಕ್ಬರ್ ಅವರು ಹೇಳಿದ್ದಾರೆ.
ವಿಶ್ವಸಂಸ್ಥೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಪಾಕಿಸ್ತಾನ ಭಾಷಣ ಮಾಡಿತ್ತು. ಬುರ್ಹಾನ್ ವಾನಿಯೊಬ್ಬ ಯುವ ನಾಯಕನೆಂದು ಪ್ರಶಂಸಿಸಿತ್ತು. ಆದರೆ, ಪಾಕಿಸ್ತಾನದ ವಾದವನ್ನು ಯಾರೊಬ್ಬರೂ ಪರಿಗಣನೆಗೆ ತೆಗೆದುಕೊಳ್ಳಲಿಲ್ಲ. ಯಾರೊಬ್ಬರೂ ಅದರ ವಾದವನ್ನು ಒಪ್ಪಿಕೊಳ್ಳಲಿಲ್ಲ. ಪಾಕಿಸ್ತಾನ ತನ್ನ ಜನರನ್ನು ಮೂರ್ಖರನ್ನಾಗಿ ಮಾಡಬಹುದೇ ವಿನಃ ಇದೀ ವಿಶ್ವದ ಜನರನ್ನು ಮೂರ್ಖರನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಯೋತ್ಪಾದನೆ ವಿರುದ್ಧ ಮಾತನಾಡಿದ್ದರು. ಅದರ ಫಲಿತಾಂಶವನ್ನು ಇಂದು ಕಾಣಬಹುದಾಗಿದೆ. ಭಾರತದ ನಿಲುವು ಇದೀಗ ವಿಶ್ವಕ್ಕೆ ಅರ್ಥವಾಗುತ್ತಿದೆ. ಭಾರತ ಎಂದಿಗೂ ಸತ್ಯವನ್ನೇ ನುಡಿಯುತ್ತಿದ್ದು, ಯಾವಾಗಲೂ ಸರಿಯಾಗಿಯೇ ಇರುತ್ತದೆ. ಯುದ್ಧದಲ್ಲಿ ಭಾಗಿಯಾಗುವುದನ್ನು ಬಿಟ್ಟು ವಿಶ್ವ ಭಯೋತ್ಪಾದನೆ ವಿರುದ್ಧ ಹೋರಾಡಲು ಒಗ್ಗೂಡಬೇಕಿದೆ ಎಂದು ತಿಳಿಸಿದ್ದಾರೆ.
ಈ ಹಿಂದೆಯಷ್ಟೇ ಉರಿ ಉಗ್ರ ದಾಳಿ ಕುರಿತಂತೆ ನವಾಜ್ ಶರೀಫ್ ಅವರು ಪ್ರತಿಕ್ರಿಯೆ ನೀಡಿದ್ದರು. ಉರಿ ದಾಳಿಯಲ್ಲಿ ಪಾಕಿಸ್ತಾನದ ಪಾತ್ರವಿಲ್ಲ. ಸಾಕ್ಷ್ಯಾಧಾರಗಳಿಲ್ಲದೆಯೇ ಭಾರತ ಪಾಕಿಸ್ತಾನದ ವಿರುದ್ಧ ಆರೋಪ ವ್ಯಕ್ತಪಡಿಸುತ್ತಿದೆ ಎಂದು ಹೇಳಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಅಕ್ಬರ್ ಅವರು, ಪಾಕಿಸ್ತಾನ ಕನಿಷ್ಟ ಪಕ್ಷ 1-2 ವಿಜ್ಞಾನಿಗಳನ್ನಾದರೂ ಹೊಂದಿರುತ್ತದೆ ಅಥವಾ ಪಾಕಿಸ್ತಾನದಲ್ಲಿರುವ ಒಬ್ಬ ವ್ಯಕ್ತಿಯಾದರೂ ಡಿಎನ್ ಎ ಪರೀಕ್ಷಾ ವರದಿಯನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯವನ್ನಾದರೂ ಹೊಂದಿರುತ್ತಾರೆ. ನವಾಜ್ ಶರೀಫ್ ಅವರಿಗೆ ಡಿಎನ್ ಎ ವರದಿ ಅರ್ಥವಾಗದಿದ್ದರೆ. ಅರ್ಥ ಮಾಡಿಕೊಳ್ಳುವ ವ್ಯಕ್ತಿಗಳಿಗೆ ವರದಿಗಳನ್ನು ನೀಡಲಿ. ಪಠಾಣ್ ಕೋಟ್ ಮತ್ತು ಉರಿ ದಾಳಿ ಯಾರು ಮಾಡಿದ್ದು ಎಂಬುದನ್ನು ಅವರೇ ಸ್ಪಷ್ಟಪಡಿಸುತ್ತಾರೆಂದು ಹೇಳಿದ್ದಾರೆ.
ಬಲೂಚಿಸ್ತಾನ ವಿಚಾರ ಬಗ್ಗೆ ಮಾತನಾಡಿರುವ ಅವರು. ಬಲೂಚಿಸ್ತಾನ ಜನತೆಯ ಪರಿಸ್ಥಿತಿಯನ್ನು ಇಡೀ ವಿಶ್ವವೇ ನೋಡುತ್ತಿದೆ ಎಂದಿದ್ದಾರೆ.
Advertisement