ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಭಾರತೀಯ ಕಾರ್ಮಿಕರಿಗೆ ಆಸಿಸ್ ಸರ್ಕಾರದ ಶಾಕ್; ಆಸ್ಟ್ರೇಲಿಯಾ '457 ವೀಸಾ' ರದ್ದು!

ಅಮೆರಿಕ ಎಚ್-1ಬಿ ವೀಸಾ ನಿಯಮಗಳನ್ನು ಕಠಿಣಗೊಳಿಸಿ ಭಾರತೀಯ ಉದ್ಯೋಗಿಗಳಿಗೆ ಶಾಕ್ ನೀಡಿದೆ ಬೆನ್ನಲ್ಲೇ ಆಸ್ಟ್ರೇಲಿಯಾ ಸರ್ಕಾರ ಕೂಡ ತನ್ನ ಆಸ್ಟ್ರೇಲಿಯಾ ‘457 ವೀಸಾ’ಗಳನ್ನು ರದ್ದುಗೊಳಿಸಿದೆ.
Published on

ಮೆಲ್ಬೋರ್ನ್: ಅಮೆರಿಕ ಎಚ್-1ಬಿ ವೀಸಾ ನಿಯಮಗಳನ್ನು ಕಠಿಣಗೊಳಿಸಿ ಭಾರತೀಯ ಉದ್ಯೋಗಿಗಳಿಗೆ ಶಾಕ್ ನೀಡಿದೆ ಬೆನ್ನಲ್ಲೇ ಆಸ್ಟ್ರೇಲಿಯಾ ಸರ್ಕಾರ ಕೂಡ ತನ್ನ ಆಸ್ಟ್ರೇಲಿಯಾ ‘457 ವೀಸಾ’ಗಳನ್ನು ರದ್ದುಗೊಳಿಸಿದೆ.

ವಿದೇಶಿ ಕಾರ್ಮಿಕರು ಆಸ್ಟ್ರೇಲಿಯಾದಲ್ಲಿ ನೆಲೆಸಿ ಕೆಲಸ ಮಾಡಲು ಅನುಮಾಡಿಕೊಡಬಲ್ಲ ಆಸ್ಟ್ರೇಲಿಯಾ ‘457 ವೀಸಾ’ ಎಂದೇ ಪ್ರಖ್ಯಾತವಾಗಿರುವ ವೀಸಾ ವ್ಯವಸ್ಥೆಯನ್ನು ಆಸ್ಟ್ರೇಲಿಯಾ ಸರ್ಕಾರ ಇಂದು ರದ್ದುಗೊಳಿಸಿದೆ.  ಆಸ್ಟ್ರೇಲಿಯಾದಲ್ಲಿನ ನಿರುದ್ಯೋಗ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ನಿಟ್ಟಿನಲ್ಲಿ ಸರ್ಕಾರ ಈ ಕಠಿಣ ಕ್ರಮ ಕೈಗೊಂಡಿದ್ದು, ಭವಿಷ್ಯದಲ್ಲಿ ಮತ್ತೆ ಈ ಮಾದರಿಯ ವೀಸಾ ವಿತರಿಸುವುದಿಲ್ಲ ಎಂದೂ ಸ್ಪಷ್ಟಪಡಿಸಿದೆ.

ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಆಸ್ಟ್ರೇಲಿಯಾದ ಪ್ರಧಾನ ಮಂತ್ರಿ ಮಾಲ್ಕಮ್ ಟರ್ನ್ ​ಬುಲ್ ಅವರು, "ಆಸ್ಟ್ರೇಲಿಯಾದ ನಾಗರಿಕರಿಗೆ ಉದ್ಯೋಗ ನೀಡಲು ತಮ್ಮ ಸರ್ಕಾರ ಮೊದಲ ಆದ್ಯತೆ ನೀಡಬೇಕಿದೆ. ಹಾಗಾಗಿ  457 ವೀಸಾವನ್ನು ರದ್ದುಗೊಳಿಸುತ್ತಿದ್ದು,  ಮುಂದಿನ ದಿನಗಳಲ್ಲಿ 457 ವೀಸಾವನ್ನು ಮತ್ತೆ ವಿತರಿಸುವುದಿಲ್ಲ. ಭವಿಷ್ಯದಲ್ಲಿ ಹೊಸ ನಿಯಮಾವಳಿಗಳನ್ನು ಒಳಗೊಂಡ ಹೊಸ ವೀಸಾ ವ್ಯವಸ್ಥೆಯನ್ನು ಪರಿಚಯಿಸಲಾಗುತ್ತದೆ. ಆ ಮೂಲಕ  ತಮ್ಮದೇ ದೇಶದ ನುರಿತ ಕೆಲಸಗಾರರಿಗೆ ಮಾತ್ರ ಅವಕಾಶ ದೊರಕಿಸಿಕೊಡಲಾಗುವುದು ಎಂದು ಅವರು ಹೇಳಿದ್ದಾರೆ.

ಆಸ್ಟ್ರೇಲಿಯಾ ಮೊದಲು ಎಂಬ ಉದ್ದೇಶದ ಆಧಾರದ ಮೇಲೆಯೇ ಹೊಸ ವೀಸಾ ನಿಯಮಾವಳಿಗಳನ್ನು ಸಿದ್ಧಪಡಿಸಲಾಗುತ್ತದೆ. ಕೆಲ ಕೈಗಾರಿಕೆಗಳು ಸ್ಥಳೀಯ ಯುವಕರಿಗೆ ಉದ್ಯೋಗ ನೀಡುವುದರಿಂದ ಲಾಭಾಂಶ  ಕಡಿಮೆಯಾಗುತ್ತದೆ ಎಂದು ಭಾವಿಸಿದಂತಿದೆ. ವಿದೇಶ ಕಾರ್ಮಿಕರಿಗೆ ಕಡಿಮೆ ಭತ್ಯೆ ನೀಡಿ ಹೆಚ್ಚು ಕೆಲಸ ಮಾಡಿಸಿಕೊಳ್ಳುವುದು ಆ ಕೈಗಾರಿಕೆಗಳ ಉದ್ದೇಶವಾಗಿರಬಹುದು. ಆದರೆ ನಮ್ಮ ದೇಶದಲ್ಲೇ ಸಮರ್ಥ ಯುವಕರಿದ್ದು, ಅವರಿಗೇ  ಮೊದಲ ಆದ್ಯತೆ ನೀಡಬೇಕು ಎಂಬ ಉದ್ದೇಶದಿಂದ ಈ ನಿಯಮ ಜಾರಿಗೊಳಿಸಲಾಗುತ್ತಿದೆ ಎಂದು ಅವರು ಸ್ಪಷ್ಟಪಡಿಸಿದರು.

ಇನ್ನು ಆಸ್ಟ್ರೇಲಿಯಾ ಸರ್ಕಾರ ಈ ಹಿಂದೆ ವಿತರಿಸಿರುವ  457 ವೀಸಾ ಯೋಜನೆಯಡಿಯಲ್ಲಿ ವಿದೇಶದ ಸುಮಾರು  95,757 ಮಂದಿ ಕೆಲಸ ಮಾಡುತ್ತಿದ್ದು, ಈ ಪೈಕಿ ಬಹುತೇಕ ಭಾರತೀಯ ಕಾರ್ಮಿಕರು ಕೂಡ ಸೇರಿದ್ದಾರೆ. ಭಾರತದ  ಬಳಿಕ ಬ್ರಿಟನ್ ದೇಶದ ಹೆಚ್ಚು ಕಾರ್ಮಿಕರು ಆಸ್ಟ್ರೇಲಿಯಾದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಮೂರನೇ ಸ್ಥಾನದಲ್ಲಿ ಚೀನಾ ದೇಶದ ಕಾರ್ಮಿಕರಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com