ಅಮೆರಿಕ ಯುದ್ಧ ನೌಕೆಯನ್ನು ಹೊಡೆದು ಹಾಕುತ್ತೇವೆ: ಉ.ಕೊರಿಯಾ ಎಚ್ಚರಿಕೆ

ಜಪಾನ್ ಸಮುದ್ರ ತೀರಕ್ಕೆ ಅಮೆರಿಕ ನೌಕಾಪಡೆಯನ್ನು ರವಾನಿಸಿದ ಬೆನ್ನಲ್ಲೇ, ಅಮೆರಿಕದ ಯುದ್ಧ ವಿಮಾನ ವಾಹನ ನೌಕೆಯನ್ನು ಮುಳುಗಿಸಿ ತನ್ನ ಪರಾಕ್ರಮ ಸಾಬೀತುಪಡಿಸುವುದಾಗಿ ಉತ್ತರ ಕೊರಿಯಾ ಭಾನುವಾರ ಬೆದರಿಕೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಸೋಲ್: ಜಪಾನ್ ಸಮುದ್ರ ತೀರಕ್ಕೆ ಅಮೆರಿಕ ನೌಕಾಪಡೆಯನ್ನು ರವಾನಿಸಿದ ಬೆನ್ನಲ್ಲೇ, ಅಮೆರಿಕದ ಯುದ್ಧ ವಿಮಾನ ವಾಹನ ನೌಕೆಯನ್ನು ಮುಳುಗಿಸಿ ತನ್ನ ಪರಾಕ್ರಮ ಸಾಬೀತುಪಡಿಸುವುದಾಗಿ ಉತ್ತರ ಕೊರಿಯಾ ಭಾನುವಾರ ಬೆದರಿಕೆ ಹಾಕಿದೆ. 
ನಮ್ಮ ಕ್ರಾಂತಿಕಾರಿ ಪಡೆಗಳು ಅಮೆರಿಕದ ಅಣ್ವಸ್ತ್ರಗಳನ್ನು ಹೊತ್ತೊಯ್ಯುವ ಯುದ್ಧವಿಮಾನ ವಾಹಕ ನೌಕೆಯೊಂದನ್ನು ಮುಳುಗಿಸಲಿದೆ ಎಂದು ಕೊರಿಯಾದ ಆಡಳಿತ ಪಕ್ಷದ ಪತ್ರಿಕೆ ರೊಡೊಂಗ್ ಸಿನ್ಸನ್ ಹೇಳಿಕೊಂಡಿದೆ. 
ಬರುವ ಮಂಗಳವಾರ ಕೊರಿಯನ್ ಪೀಪಲ್ಸ್ ಆರ್ಮಿ'ಯ ಸಂಸ್ಥಾಪನಾ ದಿನಾಚರಣೆಯ 85ನೇ ವರ್ಷಾಚರಣೆ ನಡೆಯಲಿದ್ದು, ಈ ಹಿನ್ನಲೆಯಲ್ಲಿ ರೊಡೊಂಗ್ ಸಿನ್ಸನ್ ಪತ್ರಿಕೆ ವಿಶೇಷ ಲೇಖನವೊಂದನ್ನು ಪ್ರಕಟಿಸಿದೆ. ಲೇಖನದಲ್ಲಿ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಆಡಳಿತವನ್ನು ಕೊಂಡಾಡಿದೆ. ಅಲ್ಲದೆ, ಉತ್ತರಕೊರಿಯಾದ ಸೇನಾ ಬಲವನ್ನು ಪ್ರದರ್ಶನ ಮಾಡಲು ಇದು ಸಕಾಲವಾಗಿದೆ ಎಂದು ಅಭಿಪ್ರಾಯಪಟ್ಟಿದೆ.
ಅಮೆರಿಕದ ಕಾರ್ಲ್ ವಿನ್ಸನ್ ನೌಕೆಯನ್ನು 'ಕುರೂಪಿ ಪ್ರಾಣಿ' ಎಂದು ಪತ್ರಿಕೆ ಅಣಕಿಸಿದೆ. ಈ ಯುದ್ಧ ನೌಕೆಯ ಮೇಲೆ ದಾಳಿ ಮಾಡುವುದು ನಮ್ಮ ಮಿಲಿಟರಿ ಸಾಮರ್ಥ್ಯವನ್ನು ತೋರಿಸುವುದಕ್ಕೆ ನೈಜ ಉದಾಹರಣೆ ಪತ್ರಿಕೆ ಎಂದು ತಿಳಿಸಿದೆ. 
ಈ ನಡುವೆ ಇಡೀ ಕೊರಿಯಾ ದ್ವೀಪಕಲ್ಪವನ್ನು ಪರಮಾಣು ಶಸ್ತ್ರಾಸ್ತ್ರರಹಿತ ವಲಯವನ್ನಾಗಿ ಘೋಷಿಸಬೇಕು ಎಂದು ಉತ್ತರಕೊರಿಯಾ ಬೆಂಬಲಕ್ಕೆ ಇರುವ ಚೀನಾ ಅಂತಾರಾಷ್ಟ್ರೀಯ ಸಮುದಾಯವನ್ನು ಒತ್ತಾಯಿಸಿದೆ. 
ಅಮೆರಿಕಾಗೆ ಉತ್ತರಕೊರಿಯಾ ಬೆದರಿಕೆ ಹಾಕಿದ ಬೆನ್ನಲ್ಲೇ ಉತ್ತರಕೊರಿಯಾ ಹಾಗೂ ಅಮೆರಿಕ ನಡುವೆ ಯುದ್ಧ ಸನ್ನಿವೇಶ ನಿರ್ಮಾಣವಾಗಿದ್ದು, ಅಮೆರಿಕಾಗೆ ಜಪಾನ್ ಸಾಥ್ ನೀಡಿದೆ. ಈಗಾಗಲೇ ಫಿಲಿಪ್ಟೀನ್ ಸಮುದ್ರದಲ್ಲಿ ಸಮರಾಭ್ಯಾಸಕ್ಕೆ ಜಪಾನಿನ 2 ಹಡಗುಗಳು ಸೇರ್ಪಡೆಗೊಂಡಿದ್ದು, ದಕ್ಷಿಣ ಕೊರಿಯಾ ತೀರಕ್ಕೆ ಅಮೆರಿ ಸಮರ ನೌಕೆಗಳು ತಲುಪಿವೆ ಎಂದು ಮೂಲಗಳು ತಿಳಿಸಿವೆ. 
ಅಂತರಾಷ್ಟ್ರೀಯ ನಿರ್ಬಂಧಗಳನ್ನೂ ದಿಕ್ಕರಿಸಿ ಅಣ್ವಸ್ತ್ರ ಕಾರ್ಯಕ್ರಮ ನಡೆಸುತ್ತಿರುವ ಹಾಗೂ ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗಗಳನ್ನು ಕೈಗೊಂಡಿರುವ ಉತ್ತರ ಕೊರಿಯಾವನ್ನು ಸುತ್ತುವರಿದು ಬಗ್ಗು ಬಡಿಯಲು ಅಮೆರಿಕ ತಂತ್ರಗಾರಿಕೆಗಳನ್ನು ಹೆಣೆಯುತ್ತಿದೆ. ಇದಕ್ಕೆ ಸಾಕ್ಷಿಯೆಂಬಂತೆ ಯುಎಸ್ಎಸ್ ಕಾರ್ಲ್ ವಿನ್ಸನ್ ಎಂಬ ಯುದ್ಧ ನೌಕೆಯನ್ನು ಅಮೆರಿಕ ದಕ್ಷಿಣ ಕೊರಿಯಾ ತೀರಕ್ಕೆ ರವಾನಿಸಿದೆ. ಈ ಯುದ್ಧ ನೌಕೆ ಜೊತೆಗೆ ಜಪಾನ್ ನ ಸ್ಯಾಮಿಡೇರ್ ಮತ್ತು ಅಶಿಗಾರಾ ಹೆಸರಿನ ಎರಡು ಯುದ್ಧ ನೌಕೆಗಳು ದಕ್ಷಿಣ ಕೊರಿಯಾ ಸಮುದ್ರ ತೀರಕ್ಕೆ ಬಂದಿದ್ದು, ಅಲ್ಲಿಂದ ತಾಲೀಮು ನಡೆಸುತ್ತಿವೆ. 
ಅಮೆರಿಕಾದ ಈ ವರ್ತನೆ ಸಹಜವಾಗಿಯೇ ಉತ್ತರ ಕೊರಿಯಾವನ್ನು ಕೆರಳಿಸಿದ್ದು, ನಮ್ಮ ಸರಹದ್ದಿನಲ್ಲಿ ಪ್ರಚೋದನಾತ್ಮಕ ಕ್ರಮಗಳನ್ನು ಕೈಗೊಳ್ಳದಿರಿ. ಹಾಗೇನಾದರೂ ಮಾಡಿದಲ್ಲಿ ಅಣುಬಾಂಬಿನೊಂದಿಗೆ ತಿರುಗೇಟು ನೀಡಲು ನಾವು ಹಿಂದೆ ಮುಂದೆ ನೋಡುವುದಿಲ್ಲ. ಯಾವುದೇ ಸವಾಲು ಎದುರಿಸಲು ನಾವು ಸಿದ್ಧರಿದ್ದೇವೆ. ನಮ್ಮ ತಂಟೆಗೆ ಬಂದರೆ ಅಮೆರಿಕ ಸೇರಿದಂತೆ ಅದಕ್ಕೆ ಸಾಥ್ ನೀಡುವ ರಾಷ್ಟ್ರಗಳಿಗೂ ತಕ್ಕ ಶಾಸ್ತಿ ಮಾಡುತ್ತೇವೆ. ಅಷ್ಟು ಶಕ್ತಿ ನಮಗಿದೆ ಎಂದು ಎಚ್ಚರಿಕೆ ನೀಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com