ಪಾಕ್ ವಿರುದ್ದ ಟ್ರಂಪ್ ಕಿಡಿ: ಅಮೆರಿಕದೊಂದಿಗೆ ದ್ವಿಪಕ್ಷೀಯ ಮಾತುಕತೆ ಸ್ಥಗಿತಗೊಳಿಸಿದ ಪಾಕಿಸ್ತಾನ

ಪಾಕಿಸ್ತಾನ ಭಯೋತ್ಪಾದಕರ ಸ್ವರ್ಗ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆಗೆ ತೀವ್ರವಾಗಿ ಪ್ರತಿಭಟಿಸುತ್ತಿರುವ ಪಾಕಿಸ್ತಾನ ಇದೀಗ ಅಮೆರಿಕ ಭೇಟಿ ಹಾಗೂ ದ್ವಿಪಕ್ಷೀಯ ಮಾತುಕತೆಯನ್ನು ಸ್ಥಗಿತಗೊಳಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಪಾಕಿಸ್ತಾನ ಭಯೋತ್ಪಾದಕರ ಸ್ವರ್ಗ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆಗೆ ತೀವ್ರವಾಗಿ ಪ್ರತಿಭಟಿಸುತ್ತಿರುವ ಪಾಕಿಸ್ತಾನ ಇದೀಗ ಅಮೆರಿಕ ಭೇಟಿ ಹಾಗೂ ದ್ವಿಪಕ್ಷೀಯ ಮಾತುಕತೆಯನ್ನು ಸ್ಥಗಿತಗೊಳಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. 

ಈ ಕುರಿತಂತೆ ಪಾಕಿಸ್ತಾನ ದಿನಪತ್ರಿಕೆ ಡಾನ್ ವರದಿ ಮಾಡಿದ್ದು, ಪಾಕಿಸ್ತಾನದ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೇಳಿಕೆ ನೀಡಿರು ಹಿನ್ನಲೆಯಲ್ಲಿ ಅಮೆರಿಕದೊಂದಿಗಿನ ದ್ವಿಪಕ್ಷೀಯ ಮಾತುಕತೆಯನ್ನು ಸ್ಥಗಿತಗೊಳಿಸಲಾಗಿದೆ. ಅಲ್ಲದೆ, ಪಾಕಿಸ್ತಾನ ಹಾಗೂ ಅಮೆರಿಕ ಅಧಿಕಾರಿಗಳ ಭೇಟಿಯನ್ನೂ ಮುಂದೂಡಲಾಗಿದೆ ಎಂದು ಪಾಕಿಸ್ತಾನದ ಸರ್ಕಾರಿ ಅಧಿಕಾರಿಗಳು ಹೇಳಿದ್ದಾರೆಂದು ತಿಳಿಸಿದೆ. 

ಮುಂದಿನ ತಿಂಗಳು ವಿಶ್ವಸಂಸ್ಥೆಯ ಸಾಮಾನ್ಯ ಸಭೆ ನಡೆಯುತ್ತಿದ್ದು, ಸಭೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಪಾಕಿಸ್ತಾನ ಪ್ರಧಾನಮಂತ್ರಿ ಶಾಹಿದ್ ಅಬ್ಬಾಸಿಯವರು ಅಮೆರಿಕಾ ದೇಶಕ್ಕೆ ಭೇಟಿ ನೀಡಲಿದ್ದಾರೆ. ಅಬ್ಬಾಸಿ ಅಮೆರಿಕ ರಾಷ್ಟ್ರಕ್ಕೆ ಭೇಟಿ ನೀಡಿದ ಬಳಿಕವಷ್ಟೇ ವಾಷಿಂಗ್ಟನ್ ಜೊತೆಗೆ ಪಾಕಿಸ್ತಾನ ದ್ವಿಪಕ್ಷೀಯ ಮಾತುಕತೆಗಳನ್ನು ಮುಂದವರೆಸಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆಂದು ಡಾನ್ ತನ್ನ ವರದಿಯಲ್ಲಿ ಹೇಳಿಕೊಂಡಿದೆ. 

ಈ ಕುರಿತಂತೆ ಮಾತನಾಡಿರು ಪಾಕಿಸ್ತಾನ ವಿದೇಶಾಂಗ ಸಚಿವ ಖವಾಜಾ ಮೊಹಮ್ಮದ್ ಆಸಿಫ್ ಅವರು, ಟ್ರಂಪ್ ಅವರ ಹೇಳಿಕೆಯನ್ನು ಇಸ್ಲಾಮಾಬಾದ್ ಗಂಭೀರವಾಗಿ ಪರಿಗಣಿಸಿದ್ದು, ಈ ಹಿನ್ನಲೆಯಲ್ಲಿ ಉನ್ನತಾಧಿಕಾರಿಗಳ ಅಮೆರಿಕ ಭೇಟಿಯನ್ನು ಮುಂದೂಡಲಾಗಿದೆ. ಕಳೆದ ವಾರ ಅಮೆರಿಕಾಗೆ ನೀಡಬೇಕಿದ್ದ ನನ್ನ ಭೇಟಿಯನ್ನೂ ಕೂಡ ಮುಂದೂಡಲಾಗಿತ್ತು ಎಂದು ಹೇಳಿದ್ದಾರೆ. 

ಟ್ರಂಪ್ ಅವರ ಹೇಳಿಕೆ ಸಂಬಂಧ ಪಾಕಿಸ್ತಾನ ಸೆನೆಟ್ ಈಗಾಗಲೇ ವಿಶೇಷ ಸಮಿತಿಯನ್ನು ರಚನೆ ಮಾಡಿದ್ದು, ಅಮೆರಿಕಾದ ಈ ಹೇಳಿಕೆಗೆ ಯಾವ ರೀತಿಯಲ್ಲಿ ಪ್ರತಿಕ್ರಿಯೆ ನೀಡಬೇಕೆಂಬುದರ ಬಗ್ಗೆ ಶೀಘ್ರದಲ್ಲಿ ನಿಲುವಳಿಯನ್ನು ಮಂಡಿಸಲಾಗುತ್ತದೆ ಎಂದು ಪಾಕಿಸ್ತಾನ ಮಾಧ್ಯಮಗಳು ತಮ್ಮ ವರದಿಯಲ್ಲಿ ಹೇಳಿಕೊಂಡಿವೆ. 
ಕೆಲ ದಿನಗಳ ಹಿಂದಷ್ಟೇ ಅಮೆರಿಕದ ಮೂರು ಸೇನೆಗಳ ಮಹಾದಂಡ ನಾಯಕನ ನೆಲೆಯಲ್ಲಿ ಮೊದಲ ಬಾರಿಗೆ ದೇಶವನ್ನುದ್ದೇಶಿಸಿ ಮಾತನಾಡಿದ್ದ ಟ್ರಂಪ್ ಅವರು, ಪಾಕಿಸ್ತಾನದ ವಿಷಯದಲ್ಲಿ ಅಮೆರಿಕದ ಹೊಸ ನೀತಿಯಲ್ಲಿ ಬದಲಾವಣೆಯಾಗಿದೆ. ಉಗ್ರ ಸಂಘಟನೆಗಳಿಗೆ ಸುರಕ್ಷಿತ ತಾಣಾವಾಗಿರುವ ಪಾಕಿಸ್ತಾನದ ಬಗ್ಗೆ ಇನ್ನೂ ಮೌನವಾಗಿರಲು ಸಾಧ್ಯವಿಲ್ಲ. ಅಫ್ಘಾನಿಸ್ತಾನದಲ್ಲಿ ಶಾಂತಿ, ಸ್ಥಿರತೆ ಸೃಷ್ಟಿಸುವಲ್ಲಿ ಭಾರತದ ಕೊಡುಗೆಗಳನ್ನು ಮೆಚ್ಚುತ್ತೇವೆ. ಉಗ್ರರನ್ನು ಪಾಕಿಸ್ತಾನ ಹತ್ತಿಕ್ಕದೇ ಹೋದಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com