ದಾವೂದ್ ಇಲ್ಲೇ ಇರಬಹುದು, ಬೇರೆಲ್ಲೋ ಇರಲಿ, ನಾವೇಕೆ ಭಾರತಕ್ಕೆ ಸಹಾಯ ಮಾಡಬೇಕು: ಮುಷರಫ್

1993 ಮುಂಬೈ ಸರಣಿ ಸ್ಫೋಟದ ರುವಾರಿ, ಮೋಸ್ಟ್ ವಾಂಟೆಡ್ ಉಗ್ರ ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲಿಯೇ ಇರಲಿ, ಎಲ್ಲಿಯೇ ಇರಲಿ, ನಾವೇಕೆ ಭಾರತಕ್ಕೆ ಸಹಾಯ ಮಾಡಬೇಕೆಂದು ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಗುರುವಾರ ಹೇಳಿದ್ದಾರೆ...
ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ (ಸಂಗ್ರಹ ಚಿತ್ರ)
ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ (ಸಂಗ್ರಹ ಚಿತ್ರ)

ಲಾಹೋರ್: 1993 ಮುಂಬೈ ಸರಣಿ ಸ್ಫೋಟದ ರುವಾರಿ, ಮೋಸ್ಟ್ ವಾಂಟೆಡ್ ಉಗ್ರ ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲಿಯೇ ಇರಲಿ, ಎಲ್ಲಿಯೇ ಇರಲಿ, ನಾವೇಕೆ ಭಾರತಕ್ಕೆ ಸಹಾಯ ಮಾಡಬೇಕೆಂದು ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಗುರುವಾರ ಹೇಳಿದ್ದಾರೆ. 

ಪಾಕಿಸ್ತಾನದ ಮಾಧ್ಯಮ ನಡೆಸಿರುವ ಸಂದರ್ಶನದಲ್ಲಿ ಮಾತನಾಡಿರುವ ಮುಷರಫ್ ಅವರು, ದೀರ್ಘಕಾಲದಿಂದ ಭಾರತ ಪಾಕಿಸ್ತಾನದ ಮೇಲೆ ಆರೋಪಗಳನ್ನು ಮಾಡುತ್ತಲೇ ಬಂದಿದೆ. ನಮ್ಮ ವಿರುದ್ಧ ಆರೋಪ ಮಾಡುತ್ತಿರುವ ಭಾರತಕ್ಕೆ ಏಕೆ ನಾವು ಒಳ್ಳೆಯವರಾಗಿ ಸಹಾಯ ಮಾಡಬೇಕು? ದಾವೂದ್ ಇದೀಗ ಎಲ್ಲಿದ್ದಾನೆಂಬುದು ನನಗೆ ಗೊತ್ತಿಲ್ಲ. ಆದರೆ, ಆತ ಕರಾಚಿಯಲ್ಲಿದ್ದಾನೋ ಅಥವಾ ಬೇರೆಲ್ಲಿದ್ದಾನೆಂಬುದು ನನಗೆ ಗೊತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ. 

ಭಾರತ ಮುಸ್ಲಿಮರನ್ನು ಹತ್ಯೆ ಮಾಡುತ್ತಿದ್ದು, ಇದರ ಪ್ರತೀಕಾರವಾಗಿ ದಾವೂದ್ ಭಾರತದ ವಿರುದ್ಧ ತಿರುಗಿಬಿದ್ದಿದ್ದಾನೆಂದು ಹೇಳುವ ಮೂಲಕ ಮುಷರಫ್, ಭಾರತಕ್ಕೆ ಬೇಕಾಗಿರುವ ಮೋಸ್ಟ್ ವಾಂಟೆಡ್ ಉಗ್ರ ದಾವೂದ್ ಪಾಕಿಸ್ತಾನದಲ್ಲಿಯೇ ಇದ್ದಾನೆಂದು ಪರೋಕ್ಷವಾಗಿ ಮಾಹಿತಿ ನೀಡಿದ್ದಾರೆ. 

ಇದೇ ವೇಳೆ ಬಿನ್ ಲಾಡೆನ್ ಕುರಿತು ಪಾಕಿಸ್ತಾನದ ವಿರುದ್ಧ ಕೇಳಿ ಬಂದಿದ್ದ ಆರೋಪಗಳನ್ನು ತಳ್ಳಿಹಾಕಿದ್ದ ಪ್ರಶ್ನೆಗೆ ಉತ್ತರಿಸಿರುವ ಅವರು, ಒಸಾಮಾ ಬಿನ್ ಲಾಡನ್'ನನ್ನು ಹತ್ಯೆ ಮಾಡಿದ್ದಾಗ, ಹತ್ಯೆಯಾಗಿದ್ದು ಲಾಡನ್'ನ್ನೇ ಎಂಬುದು ಯಾರಿಗೂ ತಿಳಿದಿರಲಿಲ್ಲ. ಹತ್ಯೆಯಾದ ವ್ಯಕ್ತಿ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಯಾಗಿರಬಹುದೆಂದು ಎಲ್ಲರೂ ತಿಳಿದಿದ್ದರು. ಹತ್ಯೆಯಾಗಿದ್ದ ಬಿನ್ ಲಾಡೆನ್ ಎಂದು ತಿಳಿದಾಗ ನನಗೂ ಆಶ್ಚರ್ಯವಾಗಿತ್ತು. ಅಬ್ಬೊಟಾಬಾದ್'ನಲ್ಲಿ ಆದ 5 ವರ್ಷಗಳಿಂದ ಅಡಗಿ ಕುಳಿತಿದ್ದ ಎಂಬುದರ ನನಗೆ ಸಂಶಯಗಳಿವೆ ಎಂದು ಮುಷರಫ್ ಹೇಳಿಕೊಂಡಿದ್ದಾರೆ. 

ಬಿನ್ ಲಾಡೆನ್ ಹತ್ಯೆಯಾಗುವುದಕ್ಕೂ ಮುನ್ನ ಲಾಡೆನ್'ಗೆ ಪಾಕಿಸ್ತಾನ ಆಶ್ರಯ ನೀಡುತ್ತಿದ್ದು, ಆತ ಪಾಕಿಸ್ತಾನದಲ್ಲಿಯೇ ಅಡಗಿ ಕುಳಿತಿದ್ದಾನೆಂದು ಭಾರತ ಹಲವು ಬಾರಿ ಆರೋಪಗಳನ್ನು ಮಾಡಿತ್ತು. ಆದರೆ, ಪಾಕಿಸ್ತಾನ ಮಾತ್ರ ಆರೋಪಗಳನ್ನು ನಿರಾಕರಿಸುತ್ತಲೇ ಬಂದಿತ್ತು. ಬಳಿಕ ಅಮೆರಿಕದ ಭದ್ರತಾ ಸಿಬ್ಬಂದಿಗಳು ಲಾಡೆನ್ ಇದ್ದ ಸ್ಥಳವನ್ನು ಸುತ್ತುವರೆದು ವಿಶೇಷ ಕಾರ್ಯಾಚರಣೆ ನಡೆಸಿ 2011ರ ಮೇ. 2 ರಂದು ಹತ್ಯೆ ಮಾಡಿತ್ತು. 

ಇದೀಗ ದಾವೂದ್ ಕೂಡ ಕಳೆದ 10 ವರ್ಷಗಳಿಂದಲೂ ಪಾಕಿಸ್ತಾನ ಕರಾಚಿಯಲ್ಲಿಯೇ ಅಡಗಿ ಕುಳಿತಿದ್ದಾನೆಂದು ಭಾರತ ಆರೋಪ ಮಾಡುತ್ತಿದ್ದರೂ, ಪಾಕಿಸ್ತಾನ ಮಾತ್ರ ಈ ಆರೋಪಗಳನ್ನು ನಿರಾಕರಿಸುತ್ತಲೇ ಬರುತ್ತಿದೆ. 

ದಾವೂದ್ ಪಾಕಿಸ್ತಾನದಲ್ಲಿ ಅಡಗಿ ಕುಳಿತಿರುವ ಬಗ್ಗೆ ಮಾಹಿತಿ ದೊರಕಿದ ಹಿನ್ನಲೆಯಲ್ಲಿ ಭಾರತ ಹಲವು ಬಾರಿ ಇಸ್ಲಾಮಾಬಾದ್'ಗೆ ಮಾಹಿತಿಗಳನ್ನು, ಕಡತಗಳನ್ನು ನೀಡಿದೆ. ಆದರೆ, ಪಾಕಿಸ್ತಾನ ಇದನ್ನು ಗಂಭೀರವಾಗಿ ಪರಿಗಣಿಸದೆ ಆರೋಪಗಳನ್ನು ನಿರಾಕರಿಸುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com