
ಮಾಸ್ಕೋ: ಭಾರತವೂ ಸೇರಿದಂತೆ ವಿಶ್ವಾದ್ಯಂತ ಭಾರಿ ಕುಖ್ಯಾತಿಗಳಿಸಿರುವ ಡೆಡ್ಲಿ ಬ್ಲೂವೇಲ್ ಆಟದ ಮಾಸ್ಟರ್ ಮೈಂಡ್ ಅನ್ನು ರಷ್ಯನ್ ಪೊಲೀಸರು ಗುರುವಾರ ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ಆಗ್ನೇಯ ರಷ್ಯಾದ ಖಬರೋವಸ್ಕ್ ಕರೈ ಪ್ರದೇಶದಲ್ಲಿ 17 ವರ್ಷದ ಬಾಲಕಿಯನ್ನು ಬಂಧಿಸಿದ್ದು, ಈಕೆಯ ಬ್ಲೂವೇಲ್ ಗೇಮ್ ನ ಮಾಸ್ಟರ್ ಮೈಂಡ್ ಎಂದು ಹೇಳಲಾಗುತ್ತಿದೆ. ಬ್ಲೂವೇಲ್ ಹೆಸರಲ್ಲಿ ನಡೆಸಲಾಗುತ್ತಿರುವ ಹಲವು ಗುಂಪುಗಳನ್ನು ಈಕೆಯೇ ಮುನ್ನಡೆಸುತ್ತಿದ್ದಳು ಎಂದು ತಿಳಿದುಬಂದಿದೆ. ಬ್ಲೂವೇಲ್ ನಲ್ಲಿರುವ ಡೆಡ್ಲಿ ಟಾಸ್ಕ್ ಗಳನ್ನು ಪೂರ್ಣಗೊಳಿಸುವಂತೆ ಆಟಗಾರರನ್ನು ಪ್ರೇರೇಪಿಸುವುದು, ಒಂದು ವೇಳೆ ಟಾಸ್ಕ್ ಪೂರ್ಣಗೊಳಿಸಲು ಹಿಂದೇಟು ಹಾಕಿದರೆ ಆಟಗಾರರ ಮನೆಯವರನ್ನು ಮತ್ತು ಆಟಗಾರರನ್ನು ಕೊಲ್ಲುವುದಾಗಿ ಬೆದರಿಕೆ ಹಾಕುವಂತಹ ಕೆಲಸಗಳನ್ನು ಈಕೆ ಮಾಡುತ್ತಿದ್ದಳಂತೆ.
ಖಬರೋವಸ್ಕ್ ಕರೈ ಪ್ರದೇಶದಲ್ಲಿ ಈಕೆಯ ಮನೆಗೆ ಪೊಲೀಸರು ದಾಳಿ ಮಾಡಿದ್ದ ವೇಳೆ ಬ್ಲೂವೇಲ್ ಚಾಲೆಂಜ್ ಗೆ ಸಂಬಂಧಿಸಿದ ಹಲವು ಪುಸ್ತಕಗಳು ದೊರೆತಿವೆ. ಅಲ್ಲದೆ ಆತ್ಮಹತ್ಯೆಗೆ ಸಂಬಂಧಿಸಿದ ಚಿತ್ರಗಳು ಪತ್ತೆಯಾಗಿದೆ. ಅಲ್ಲದೆ ಡೆಡ್ಲಿ ಬ್ಲೂವೇಲ್ ಚಾಲೆಂಜ್ ನಿರ್ಮಿಸಿದ್ದ 22 ವರ್ಷದ ಫಿಲಿಪ್ ಬುಡೆಕಿನ್ ಬಿಡಿಸಿದ ಚಿತ್ರಗಳೂ ಕೂಡ ಈಕೆಯ ಬಳಿ ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ವಿಚಾರಣೆ ವೇಳೆ ಈಕೆ ಸ್ವತಃ ತಾನೇ ಬ್ಲೂವೇಲ್ ಗೇಮ್ ಆಡಿರುವುದಾಗಿ ಹೇಳಿಕೊಂಡಿದ್ದು, ಆಟದ ನಿಯಮದಂತೆ ಆತ್ಮಹತ್ಯೆ ಮಾಡಿಕೊಳ್ಳುವ ಆಂತಿಮ ಟಾಸ್ಕ್ ಆನ್ನು ಈಕೆ ಪೂರ್ಣಗೊಳಿಸಿಲ್ಲ. ಬದಲಾಗಿ ತಾನೇ ಆಟಕ್ಕೆ ಅಡ್ಮಿನ್ ಆಗಿದ್ದೇನೆ ಎಂದು ಹೇಳಿಕೊಂಡಿದ್ದಾಳೆ.
ಒಟ್ಟಾರೆ ಹಲವು ಮುಗ್ದ ಕಂದಮ್ಮಗಳ ಪ್ರಾಣಕ್ಕೆ ಎರವಾಗಿದ್ದ ಬ್ಲೂವೇಲ್ ಗೇಮ್ ನ ಮಾಸ್ಟರ್ ಮೈಂಡ್ ಗಳಲ್ಲಿ ಓರ್ವಳನ್ನು ಬಂಧಿಸುವಲ್ಲಿ ರಷ್ಯಾ ಪೊಲೀಸರು ಯಶಸ್ವಿಯಾಗಿದ್ದಾರೆ.
Advertisement