
ಮಾಸ್ಕೋ: ಪ್ರಸ್ತುತ ರಷ್ಯಾದಲ್ಲಿ ಬಂಧನಕ್ಕೀಡಾಗಿರುವ ಡೆಡ್ಲಿ ಬ್ಲೂವೇಲ್ ಚಾಲೆಂಜ್ ಗೇಮ್ ನ ಮಾಸ್ಟರ್ ಮೈಂಡ್ ತಾನೇ ಖುದ್ದು 50 ಟಾಸ್ಕ್ ಗಳನ್ನು ರಚಿಸಿದ್ದ ಆಘಾತಕಾರಿ ಅಂಶವನ್ನು ರಷ್ಯಾ ಪೊಲೀಸರು ಪತ್ತೆ ಹಚ್ಚಿದ್ದಾರೆ.
ಬಂಧಿತ 17 ವರ್ಷದ ಬಾಲಕಿ ಬ್ಲೂವೇಲ್ ಚಾಲೆಂಜ್ ನ ಗ್ರೂಪ್ ಅಡ್ಮಿನ್ ಆಗಿದ್ದು, ಗ್ರೂಪ್ ಸೇರುವ ಸದಸ್ಯರಿಗಾಗಿ 50 ಕ್ಲಿಷ್ಟಕರ ಟಾಸ್ಕ್ ಗಳನ್ನು ರಚಿಸಿದ್ದಳಂತೆ. ಈ ಟಾಸ್ಕ್ ಗಳ ಪೈಕಿ ಸದಸ್ಯರು ತಾವೇ ತಾವಾಗಿ ದೈಹಿಕ ಹಾನಿ ಮಾಡಿಕೊಳ್ಳುವುದು, ಮಧ್ಯರಾತ್ರಿ ನಿದ್ರೆಯಿಂದ ಎದ್ದು ದೆವ್ವದ ಚಿತ್ರಗಳನ್ನು ನೋಡುವುದು ಹೀಗೆ ದೈಹಿಕ ಮತ್ತು ಮಾನಸಿಕ ಚಿತ್ರ ಹಿಂಸೆ ಆಗುವ ಟಾಸ್ಕ್ ಗಳನ್ನು ರಚಿಸುತ್ತಿದ್ದಳಂತೆ.
ಇನ್ನೂ ಆಘಾತಕಾರಿ ವಿಚಾರವೆಂದರೆ ಕೇವಲ ಟಾಸ್ಕ್ ಗಳನ್ನು ರಚಿಸುವುದು ಮಾತ್ರವಲ್ಲ, ಸದಸ್ಯರು ಟಾಸ್ಕ್ ಗಳನ್ನು ಸರಿಯಾಗಿ ನಿರ್ವಹಿಸುತ್ತಿದ್ದಾರೆಯೇ ಇಲ್ಲವೇ ಎಂಬುದುನ್ನು ವೀಕ್ಷಿಸುವುದು. ಒಂದು ವೇಳೆ ಟಾಸ್ಕ್ ಗಳ ನಿರ್ವಹಣೆಯಾಗದಿದ್ದರೆ ಟಾಸ್ಕ್ ಗಳನ್ನು ಪೂರ್ಣಗೊಳಿಸುವಂತೆ ಒತ್ತಾಯಿಸುವುದು. ಅದಕ್ಕೂ ಬಗ್ಗದಿದ್ದರೆ ಅವರ ಕುಟುಂಬಸ್ಥರನ್ನು ಕೊಲ್ಲುವುದಾಗಿ ಬೆದರಿಕೆ ಹಾಕುವ ಕಾರ್ಯಗಳನ್ನೂ ಮಾಡುತ್ತಿದ್ದಳಂತೆ. ಗ್ರೂಪ್ ಸದಸ್ಯರ ಮಾನಸಿಕ ದುರ್ಬಲ ಅಂಶಗಳನ್ನು ಅವಲೋಕಿಸಿ ಅವುಗಳನ್ನೇ ಮುಂದಿಟ್ಟುಕೊಂಡು ಟಾಸ್ಕ್ ಪೂರ್ಣಗೊಳಿಸುವಂತೆ ಒತ್ತಾಯಿಸುತ್ತಿದ್ದಳು ಎಂದು ಪೊಲೀಸ್ ತನಿಖೆಯಿಂದ ಹೊರಬಿದ್ದಿದೆ.
ಮತ್ತೊಂದು ಪ್ರಮುಖ ವಿಚಾರವೆಂದರೆ 50 ಟಾಸ್ಕ್ ಗಳನ್ನು ರಚಿಸಿದ್ದ ಈಕೆ ತಾನೇ ಬ್ಲೂವೇಲ್ ಚಾಲೆಂಜ್ ಗೇಮ್ ಆಡಿದ್ದಳಂತೆ. ಆದರೆ ಅಂತಿಮ ಟಾಸ್ಕ್ ಆದ ಆತ್ಮಹತ್ಯೆ ಮಾಡಿಕೊಳ್ಳುವ ಟಾಸ್ಕ್ ಅನ್ನು ಮಾತ್ರ ಪೂರ್ಣಗೊಳಿಸಿರಲಿಲ್ಲ ಎಂದು ಹೇಳಿಕೊಂಡಿದ್ದಾಳೆ.
ಪದೇ ಪದೇ ಬದಲಾಗುತ್ತಿದ್ದಾರೆ ಡೆಡ್ಲಿ ಗೇಮ್ ನ ಅಡ್ಮಿನ್ ಗಳು
ಪೊಲೀಸ್ ತನಿಖೆಯ ಪ್ರಕಾರ ಡೆಡ್ಲಿ ಬ್ಲೂವೇಲ್ ಗೇಮ್ ನ ಅಡ್ಮಿನ್ ಗಳು ಪದೇ ಪದೇ ಬದಲಾಗುತ್ತಿದ್ದು, ಈ ಹಿಂದೆ ಇದೇ ಬ್ಲೂ ವೇಲ್ ಗೇಮ್ ನ ಅಡ್ಮಿನ್ ಆಗಿದ್ದ 26 ವರ್ಷದ ಇಲ್ಯಾ ಸಿಡೋರೋವ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಈತನ ಬಂಧನದ ಬಳಿಕ ಬ್ಲೂವೇಲ್ ಗೇಮ್ ಅಡ್ಮಿನ್ ಬದಲಾಗಿದ್ದು, ಈ ಹಿಂದೆ ಮಾಸ್ಕೋ ಬಳಿ 21 ವರ್ಷದ ಯುವಕನ್ನು ಪೊಲೀಸರು ಬಂಧಿಸಿದ್ದರು. ಈತ ಯುವತಿಯರಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಒತ್ತಾಯಿಸುತ್ತಿದ್ದ ಎಂದು ಆರೋಪಿಸಲಾಗಿತ್ತು. ಇನ್ನು ಪ್ರಸ್ತುತ ಬಂಧನಕ್ಕೀಡಾಗಿರುವ 17 ಬಾಲಕಿ ಗ್ರೂಪ್ ನ ಅಡ್ಮಿನ್ ಆಗಿದ್ದಾಳೆ. ಇದೀಗ ಈಕೆಯ ಬಂಧನ ಕೂಡ ಆಗಿದ್ದು, ಮುಂದೆ ಮತ್ತೋರ್ವರಿಗೆ ಗ್ರೂಪ್ ಅಡ್ಮಿನ್ ಹೋಗುವ ಸಾಧ್ಯತೆ ಇದೆ. ಹೀಗಾಗಿ ಈ ಬಗ್ಗೆ ಇನ್ನೂ ಕೂಲಂಕುಷ ತನಿಖೆ ಅಗತ್ಯವಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರಿಗೆ ಅಚ್ಚರಿ ಮೂಡಿಸಿದ ಅಂಶವೆಂದರೆ ಈ ಡೆಡ್ಲಿ ಗೇಮ್ ಅಡ್ಮಿನ್ ಗಳು ಪರಸ್ಪರ ಮುಖತಃ ಪರಿಚಯವೇ ಇಲ್ಲವಂತೆ. ಹೀಗಿದ್ದೂ ಗೇಮ್ ಮೂಲಕ ಇವರುಗಳು ಸಂಪರ್ಕ ಸಾಧಿಸುತ್ತಿದ್ದರು ಎಂದು ಹೇಳಲಾಗಿದೆ.
Advertisement