ನವದೆಹಲಿ: ಭಯೋತ್ಪಾದಕ ಸಂಘಟನೆ ಹಾಗೂ ಅದರ ನಾಯಕರನ್ನು ನಿಷೇಧಿಸುವ ಕುರಿತು ತೀರ್ಮಾನ ಕೈಗೊಳ್ಳುವ ಸಮಿತಿಯಲ್ಲಿ ಇರಬೇಕಿರುವ ರಾಷ್ಟ್ರಗಳನ್ನು ಸೂಚಿಸುವಂತೆ ವಿಶ್ವಸಂಸ್ಥೆ ಭಾರತವನ್ನು ಕೇಳಿದೆ.
ವಿಶ್ವಸಂಸ್ಥೆ ಮನವಿಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಗೃಹ ಖಾತೆ ಹಾಗೂ ಹಣಕಾಸು ಸಚಿವರಿಗೆ ಉಗ್ರ ನಿಗ್ರಹ ಸಮಿತಿಯಲ್ಲಿರಬೇಕಿರುವ ಹೆಸರುಗಳನ್ನು ಸೂಚಿಸುವಂತೆ ಕೇಳಿದೆ. ಪಾಕಿಸ್ತಾನ ಮೂಲದ ಭಯೋತ್ಪಾದಕ ಮೌಲಾನ ಮಸೂದ್ ಅಜರ್ ಗೆ ವಿಶ್ವಸಂಸ್ಥೆ ಮೂಲಕ ನಿಷೇಧ ವಿಧಿಸಲು ಭಾರತ ಹಲವು ತಿಂಗಳುಗಳಿಂದ ಯತ್ನಿಸುತ್ತಿದೆ. ಆದರೆ ಚೀನಾ ಇದಕ್ಕೆ ನಿರಂತರವಾಗಿ ಅಡ್ಡಗಾಲು ಹಾಕುತ್ತಿದೆ. ಈ ಬೆನ್ನಲ್ಲೇ ವಿಶ್ವಸಂಸ್ಥೆ ಉಗ್ರ ವಿರೋಧಿ ಹೋರಾಟಕ್ಕೆ ರಚನೆಯಾಗಲಿರುವ ಸಮಿತಿಗೆ ಭಾರತದ ಸಲಹೆ- ಸೂಚನೆಗಳನ್ನು ಕೇಳಿರುವುದು ಮಹತ್ವ ಪಡೆದುಕೊಂಡಿದೆ.
ನಾಮನಿರ್ದೇಶನಗೊಳ್ಳಲಿರುವ ಸದಸ್ಯರು ವಿಶ್ಲೇಷಣಾತ್ಮಕ ಮತ್ತು ನಿಷೇಧದ ಪರಿವೀಕ್ಷಣೆ ತಂಡದಲ್ಲಿ ಕಾರ್ಯನಿರ್ವಹಿಸಲಿದೆ. ಕಳೆದ ವರ್ಷವೂ ಭಾರತ ಸಮಿತಿಯಲ್ಲಿರಬೇಕಾದರ ಹೆಸರುಗಳನ್ನು ವಿಶ್ವಸಂಸ್ಥೆಗೆ ಕಳಿಸಿಕೊಟ್ಟಿತ್ತು. ಆದರೆ ಅದನ್ನು ಪರಿಗಣಿಸಲಾಗಿರಲಿಲ್ಲ ಎಂಬ ವರದಿಗಳು ಪ್ರಕಟವಾಗಿವೆ.
ಇರಾಕ್ ನಲ್ಲಿನ ಐಎಸ್ಐಎಲ್, ಅಲ್-ಖೈದಾ ಉಗ್ರ ಸಂಘಟನೆ ಸೇರಿದಂತೆ ವಿವಿಧ ರೀತಿಯ ಭಯೋತ್ಪಾದಕ ಸಂಘಟನೆ ಹಾಗೂ ಅವುಗಳಿಂದ ಎದುರಾಗಬಹುದಾದ ಹೊಸ ರೀತಿಯ ಅಪಾಯಗಳನ್ನು ಎದುರಿಸುವ ವಿಷಯದಲ್ಲಿನ ತಜ್ಞರನ್ನು ವಿಶ್ವಸಂಸ್ಥೆ ಉಗ್ರ ವಿರೋಧಿ ಹೋರಾಟದ ಸಮಿತಿಗೆ ನೇಮಕ ಮಾಡಿಕೊಳ್ಳುತ್ತಿದೆ.
ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ(ಯುಎನ್ಎಸ್ ಸಿ)ಯಲ್ಲಿ 15 ರಾಷ್ಟ್ರಗಳಿದ್ದು, ಉಗ್ರರಿಗೆ ನಿರ್ಬಂಧ, ನಿಷೇಧ ವಿಧಿಸುವ ಸಮಿತಿಯಲ್ಲೂ ಸ್ಥಾನ ಪಡೆದಿವೆ, ಭಾರತ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಸ್ಥಾನ ಪಡೆಯದ ಹಿನ್ನೆಲೆಯಲ್ಲಿ ಸಮಿತಿಯಲ್ಲೂ ಸ್ಥಾನ ಪಡೆದಿಲ್ಲ.