

ಲಾಹೋರ್: ಜಮತ್-ಉದ್-ದವಾ(ಜೆಯುಡಿ) ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ನನ್ನು ಕೂಡಲೇ ಗೃಹ ಬಂಧನದಿಂದ ಮುಕ್ತಗೊಳಿಸುವಂತೆ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರು ಗುರುವಾರ ಆಗ್ರಹಿಸಿದ್ದಾರೆ.
ಸಯೀದ್ ಗೃಹ ಬಂಧ ಕುರಿತಂತೆ ಡಾನ್ ಪತ್ರಿಕೆಯ ಸಂದರ್ಶನದಲ್ಲಿ ಮಾತನಾಡಿರುವ ಅವರು, ಭಯೋತ್ಪಾದನೆ ಕುರಿತಂತೆ ಪಾಕಿಸ್ತಾನ ಸರ್ಕಾರ ಸ್ಪಷ್ಟ ದೃಷ್ಟಿಕೋನವನ್ನು ಹೊಂದಿಲ್ಲ. ಹೀಗಾಗಿಯೇ ಇದರಿಂದ ಹಫೀಜ್ ಸಯೀದ್ ಸಮಸ್ಯೆ ಎದುರಿಸುತ್ತಿದ್ದಾರೆ. ಹಫೀಜ್ ಸಯೀದ್ ತಾಲಿಬಾನ್ ಗಳ ವಿರುದ್ಧವಿದ್ದು, ಪಾಕಿಸ್ತಾನದಲ್ಲಾಗಲೀ ಅಥವಾ ವಿಶ್ವದಲ್ಲಿಯೇ ಆಗಲೀ ಭಯೋತ್ಪಾದನಾ ಕೃತ್ಯಗಳಲ್ಲಿ ಭಾಗಿಯಾಗಿಲ್ಲ. ಹೀಗಾಗಿ ಭಯೋತ್ಪಾದನಾ ಪಟ್ಟದಿಂದ ಹಫೀಜ್ ಸಯೀದ್ ನನ್ನು ಪ್ರತ್ಯೇಕವಾಗಿ ನೋಡಬೇಕಿದೆ. ತಾಲಿಬಾನ್ ಗಳನ್ನು ವಿಶ್ವಸಂಸ್ಥೆ ಹಾಗೂ ಭಾರತ ನಿಷೇಧಿಸಿದೆ. ನಾವೂ ಕೂಡ ಅದೇ ಹಾದಿಯಲ್ಲೇ ನಡೆಯುತ್ತಿದ್ದೇವೆಂದು ಹೇಳಿದ್ದಾರೆ.
ಹಫೀಜ್ ಸಯೀದ್ ನನ್ನು ಪಾಕಿಸ್ತಾನ ಸರ್ಕಾರ ಕೂಡಲೇ ಬಿಡುಗಡೆ ಮಾಡಬೇಕಿದೆ. ಜೆಯುಡಿ ಭಯೋತ್ಪಾದನಾ ಸಂಘನಟೆಯಲ್ಲ. ಉತ್ತಮವಾದ ಎನ್ ಜಿಒ ಆಗಿ ಕಾರ್ಯನಿರ್ವಹಿಸುತ್ತಿದೆ. ಭೂಕಂಪ ಸಂಭವಿಸಿದಾಗ ಸಾಕಷ್ಟು ಪರಿಹಾರ ಕೆಲಸಗಳನ್ನುಮಾಡಿದೆ. ಸಾಕಷ್ಟು ದೇಶ ಕಲ್ಯಾಣ ಕೆಲಸಗಳನ್ನು ಮಾಡಿದೆ. ಇಂತಹವನ್ನು ಗೋಡೆಗಳ ಹಿಂದೆ ಇಟ್ಟು ಭಯೋತ್ಪಾದಕರನ ಪಟ್ಟ ಕಟ್ಟಿದರೆ, ಯುವಕರು ತಾಲಿಬಾನ್ ಹಾಗೂ ಭಯೋತ್ಪಾದಕ ಸಂಘಟನೆಗಳತ್ತ ಮುಖ ಮಾಡುತ್ತಾರೆಂದು ಮುಷರಫ್ ಹೇಳಿಕೊಂಡಿದ್ದಾರೆ.