

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಜನರ ಸಹಮತದ ಮೂಲಕ ಜಯಭೇರಿ ಸಾಧಿಸಿದ್ದ ಡೊನಾಲ್ಡ್ ಟ್ರಂಪ್ ಅವರು ಇಂದು ಪ್ರಮಾಣ ವಚನ ಸ್ವೀಕಾರ ಮಾಡುತ್ತಿದ್ದಾರೆ. ಆದರೆ, ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ಕೆಲ ಸಂಘಟನೆಗಳು ಟ್ರಂಪ್ ಅವರ ವಿರುದ್ಧ ಅಮೆರಿಕಾದಾದ್ಯಂತ ಬೀದಿಗಿಳಿದು ಭಾರೀ ಪ್ರತಿಭಟನೆಗಳನ್ನು ನಡೆಸುತ್ತಿವೆ.
ಕಳೆದ ವರ್ಷ ನವೆಂಬರ್ ತಿಂಗಳಿನಲ್ಲಿ ನಡೆದ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಹಿಲ್ಲರಿ ಕ್ಲಿಂಟನ್ ವಿರುದ್ಧ ಡೊನಾಲ್ಡ್ ಟ್ರಂಪ್ ಅವರು ಭರ್ಜರಿ ಜಯಭೇರಿ ಬಾರಿಸಿದ್ದರು.
ಅಧ್ಯಕ್ಷೀಯ ಚುನಾವಣೆಯಲ್ಲಿ ಬಹುಮತದಿಂದ ಆಯ್ಕೆಯಾಗಿ ಬಂದಿರುವ ಟ್ರಂಪ್ ಅವರು ಸಹಜವಾಗಿಯೇ ಜನರ ಸಹಮತದ ಮೂಲಕ ಆಯ್ಕೆಯಾಗಿದ್ದರು. ಆದರೆ, ಜನಮತಕ್ಕೆ ತಲೆಭಾಗದ ಅಲ್ಲಿನ ಕೆಲ ಸಂಘಟನೆಗಳು ಇಂದು ಟ್ರಂಪ್ ವಿರುದ್ಧ ಅಮೆರಿಕದಲ್ಲಿ ಪ್ರತಿಭಟನೆ ನಡೆಸುತ್ತಿವೆ.
ಟ್ರಂಪ್ ಅವರು ಪ್ರಮಾಣವಚನ ಸ್ವೀಕಾರ ಮಾಡುತ್ತಿರುವ ಹಿನ್ನೆಲೆಯಲ್ಲಿ ಅಮೆರಿಕದಲ್ಲಿ ಸಾಕಷ್ಟು ವಿರೋಧಗಳು ವ್ಯಕ್ತವಾಗತೊಡಗಿವೆ. ಸಾವಿರಾರು ಸಂಖ್ಯೆಯಲ್ಲಿ ಜನರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.
ಟ್ರಂಪ್ ಅವರನ್ನು ತಡೆಯಿರಿ/ ದಬ್ಬಾಳಿಕೆ ಆಳ್ವಿಕೆಯನ್ನು ತಡೆಯಿರಿ. ಟ್ರಂಪ್ ವಿರುದ್ಧ, ನ್ಯಾಯ ಮತ್ತು ನಾಗರೀಕ ಹಕ್ಕಿಗಾಹಿ ಪ್ರತೀನಿತ್ಯ ಪ್ರತಿಭಟನೆಗಳನ್ನು ನಡೆಸುತ್ತೇವೆಂದು ಸಾವಿರಾರು ಜನರು ಘೋಷಣಾ ಫಲಕಗಳನ್ನು ಪ್ರದರ್ಶಿಸುತ್ತಿದ್ದಾರೆ.
ಪ್ರತಿಭಟನೆಯಲ್ಲಿ ಸಾಮಾನ್ಯ ಜನರಷ್ಟೇ ಅಲ್ಲದೆ ಕೆಲ ಹಾಲಿವುಡ್ ಚಿತ್ರರಂಗದ ನಟರು ಹಾಗೂ ಗಣ್ಯರೂ ಕೂಡ ಪಾಲ್ಗೊಂಡಿದ್ದಾರೆ. ನಟ ರಾಬರ್ಟ್ ಡಿ ನೈರೋ, ಆಸ್ಕರ್ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ಮಾಪಕ ಮೈಕೆಲ್ ಮೋರೆ, ಗಾಯಕ ಚೆರ್, ಹಾಸ್ಯ ನಟ ಅಲೆಕ್ ಬಾಲ್ಡ್ ವಿನ್ ಮತ್ತು ನ್ಯೂಯಾರ್ಕ್ ರಾಜ್ಯಾಪಾಲ ಬಿಲ್ ಡೆ ಬ್ಲಾಸಿಯೋ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.
ಟ್ರಂಪ್ ಪ್ರಮಾಣವಚನಕ್ಕೆ ವಿರೋಧ ವ್ಯಕ್ತಪಡಿಸಿರುವ ನ್ಯೂಯಾರ್ಕ್ ರಾಜ್ಯಪಾಲ ಬಿಲ್ ಡೆ ಬ್ಲಾಸಿಯೋ ಅವರು, ಟ್ರಂಪ್ ಅವರು ವಾಷಿಂಗ್ಟನ್'ನ್ನು ನಿಯಂತ್ರಿಸಬಹುದು. ಆದರೆ, ಅಮೆರಿಕನ್ನರ ಹಣೆಬರಹವನ್ನು ನಾವು ಬದಲಿಸುತ್ತೇವೆ. ಭವಿಷ್ಯದ ಬಗ್ಗೆ ನಮಗೆ ಭಯವಿಲ್ಲ. ಜನರ ದನಿಯನ್ನು ಕೇಳಿದ್ದೇ ಆದರೆ, ಭವಿಷ್ಯ ಪ್ರಕಾಶಮಾನವಾಗಿರಲಿದೆ ಎಂಬುದರ ಬಗ್ಗೆ ಆಲೋಚಿಸುತ್ತೇವೆಂದು ಹೇಳಿದ್ದಾರೆ.
ಪ್ರತಿಭಟನೆ ವೇಳೆ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ಜಟಾಪಟಿಗಳೂ ಕೂಡ ನಡೆದಿದ್ದು, ಪ್ರತಿಭಟನಾಕಾರರನ್ನು ನಿಯಂತ್ರಿಸುವ ಸಲುವಾಗಿ ಅಲ್ಲಿನ ಪೊಲೀಸರು ಪೆಪ್ಪಕ್ ಸ್ಪ್ರೇಯನ್ನು ಬಳಕೆ ಮಾಡಿದ್ದಾರೆಂದು ತಿಳಿದುಬಂದಿದೆ. ಈ ಕುರಿತ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡತೊಡಗಿವೆ.
ಅಮೆರಿಕ ಅಧ್ಯಕ್ಷೀಯ ಚುನಾವಣಾ ಪ್ರಕ್ರಿಯೆಗಳು ಆರಂಭವಾದಾಗಿನಿಂದಲೂ ಹಿಲ್ಲರಿ ಕ್ಲಿಂಟನ್ ಹಾಗೂ ಟ್ರಂಪ್ ಅವರ ನಡುವೆ ಸಾಕಷ್ಟು ಪೈಪೋಟಿಗಳು ನಡೆದಿತ್ತು. ಚುನಾವಣಾ ಸಮೀಕ್ಷೆಗಳು ಕೂಡ ಹಿಲ್ಲರಿ ಕ್ಲಿಂಟನ್ ಅವರೇ ಗೆಲುವು ಸಾಧಿಸುತ್ತಾರೆಂಬು ಭವಿಷ್ಯ ನುಡಿದಿದ್ದವು. ಆದರೆ, ಅಂತಿಮವಾಗಿ ಈ ಎಲ್ಲಾ ಭವಿಷ್ಯಗಳನ್ನು ತಲೆಕೆಳಗಾಗಿ ಮಾಡಿದ್ದ ಟ್ರಂಪ್ ಅವರು ಬಹುಮತದಿಂದ ಬರ್ಜರಿ ಗೆಲವು ಸಾಧಿಸಿದ್ದರು. ಆದರೆ, ಅಮೆರಿಕ ಇದೀಗ ಕೆಲ ವಿಚಿತ್ರ ಬೆಳವಣಿಗೆಗಳಿಗೆ ಉದಾಹರಣೆಯಾಗತೊಡಗಿದೆ.
ಬಹುಮತದಿಂದ ಟ್ರಂಪ್ ಅವರು ಗೆಲವು ಸಾಧಿಸುವಂತೆ ಮಾಡಿದ್ದ ಅಲ್ಲಿನ ಜನರೇ ಇದೀಗ ಟ್ರಂಪ್ ಅವರ ವಿರುದ್ಧ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಟ್ರಂಪ್ ಅವರು ಚುನಾವಣೆಯಲ್ಲಿ ಗೆಲವು ಸಾಧಿಸಿದ ಬಳಿಕ ಕೂಡ ಅಲ್ಲಿನ ಜನರು ಬೀದಿಗಿಳಿದು ಪ್ರತಿಭಟನೆಗಳನ್ನು ನಡೆಸಿದ್ದರು. ಇದೀಗ ಪದಗ್ರಹಣ ಸಮಾರಂಭ ನಡೆಯುತ್ತಿದ್ದು ಮತ್ತೊಮ್ಮೆ ಅಮೆರಿಕದಲ್ಲಿ ಪ್ರತಿಭಟನೆಗಳು ಆರಂಭವಾಗಿದೆ. ನ್ಯೂಯಾರ್ಕ್ ನ ಟ್ರಂಪ್ ಟವರ್ ಹೊರಭಾಗದಲ್ಲಿ ಸಾವಿರಾರು ಅಮೆರಿಕದ ಪ್ರಜೆಗಳು ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ.