ಪಾಕಿಸ್ತಾನದ ಮೇಲೂ ಅಮೆರಿಕ ನಿರ್ಬಂಧ ಹೇರಬೇಕು: ಇಮ್ರಾನ್ ಖಾನ್
ಲಾಹೋರ್: ಪಾಕಿಸ್ತಾನದ ಮೇಲೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನಿರ್ಬಂಧ ಹೇರಬೇಕು. ಈ ನಿರ್ಬಂಧದಿಂದ ಪಾಕಿಸ್ತಾನದ ಪ್ರಜೆಗಳು ತಮ್ಮ ದೇಶವನ್ನು ಅಭಿವೃದ್ಧಿಪಡಿಸಲು ಸಹಾಯಕವಾಗುತ್ತದೆ ಎಂದು ತೆಹ್ರಿಕ್-ಏ-ಇನ್ಸಾಫ್ ಅದ್ಯಕ್ಷ ಇಮ್ರಾನ್ ಖಾನ್ ಅವರು ಸೋಮವಾರ ಹೇಳಿದ್ದಾರೆ.
ಮುಸ್ಲಿಂ ಪ್ರಜೆಗಳಿಗೆ ನಿರ್ಬಂಧ ಹೇರಿರುವ ಕುರಿತಂತೆ ಸಹಿವಾಲ್ ನಲ್ಲಿ ನಡೆದ ರ್ಯಾಲಿಯೊಂದರಲ್ಲಿ ಮಾತನಾಡಿರುವ ಅವರು, ಮುಸ್ಲಿಮೇತರ ರಾಷ್ಟ್ರಗಳ ಮೇಲೆ ಡೊನಾಲ್ಡ್ ಟ್ರಂಪ್ ಅವರು ನಿರ್ಬಂಧ ಹೇರಿರುವ ಬೆನ್ನಲ್ಲೇ ಪಾಕಿಸ್ತಾನದ ಪ್ರಜೆಗಳ ಮೇಲೂ ಅಮೆರಿಕ ನಿರ್ಬಂಧ ಹೇರಲಿದೆ ಎಂಬ ವಿಚಾರ ತಿಳಿಯಿತು. ಈ ನಿರ್ಧಾರವನ್ನು ಟ್ರಂಪ್ ಅವರು ಶೀಘ್ರಗತಿಯಲ್ಲಿ ತೆಗೆದುಕೊಳ್ಳಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಇದರಿಂತ ನಮ್ಮ ದೇಶವನ್ನು ಅಭಿವೃದ್ಧಿಪಡಿಸಲು ಸಹಾಯಕವಾಗುತ್ತದೆ ಎಂದು ಹೇಳಿದ್ದಾರೆ.
ಇರಾನ್ ನಂತೆಯೇ ನಾವೂ ಕೂಡ ಅಮೆರಿಕಾಗೆ ಪ್ರತಿಕ್ರಿಯೆಯನ್ನು ನೀಡಲಿದ್ದೇವೆ. ನಾವೂ ಕೂಡ ಅಮೆರಿಕ ಪ್ರಜೆಗಳನ್ನು ಪಾಕಿಸ್ತಾನ ದೇಶದಲ್ಲಿ ಇರಲು ಬಿಡುವುದಿಲ್ಲ ಎಂದು ತಿಳಿಸಿದ್ದಾರೆ.
ಇದೇ ವೇಳೆ ಪಾಕಿಸ್ತಾನ ಪ್ರಧಾನಮಂತ್ರಿ ನವಾಜ್ ಷರೀಫ್ ಅವರು ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳಿರುವ ಹಿನ್ನಲೆಯಲ್ಲಿ ವ್ಯಂಗ್ಯವಾಡಿರುವ ಅವರು, ತಲೆನೋವು ಬಂದರೂ ಕೂಡ ಚಿಕಿತ್ಸೆ ಪಡೆಯಲು ಷರೀಫ್ ಅವರು ವಿದೇಶಕ್ಕೆ ಹೋಗುತ್ತಾರೆ ಎಂದಿದ್ದಾರೆ. ಅಮೆರಿಕ ಪಾಕಿಸ್ತಾನ ಪ್ರಜೆಗಳ ಮೇಲೆ ನಿರ್ಬಂಧ ಹೇರಿದ್ದೇ ಆದರೆ, ಷರೀಫ್ ಅವರು ಕೂಡ ಪಾಕಿಸ್ತಾನದ ಬಗ್ಗೆ ಚಿಂತನೆ ನಡೆಸಿ, ರಾಷ್ಟ್ರವನ್ನು ಅಭಿವೃದ್ಧಿಪಡಿಸಬೇಕಿದೆ ಎಂದಿದ್ದಾರೆ.
ತಂದೆಯೇ ತನ್ನ ಭ್ರಷ್ಟಾಚಾರವನ್ನು ಮರೆಮಾಚಲು ಮಕ್ಕಳನ್ನು ಮುಂದೆ ತರುತ್ತಿದ್ದು, ಮರ್ಯಾಮ್ ನವಾಜ್ ಅವರನ್ನು ನೋಡಿದರೆ ನನಗೆ ಪಾಪ ಎನಿಸುತ್ತದೆ. ನನ್ನ ಕೊನೆಯ ಉಸಿರಿರುವವರೆಗೂ ಷರೀಫ್ ಕುಟುಂಬದ ವಿರುದ್ಧ ಹೋರಾಡುತ್ತೇನೆಂದು ಹೇಳಿದ್ದಾರೆ.
ನಂತರ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧ ಕುರಿತಂತೆ ಮಾತನಾಡಿರುವ ಅವರು, ಭಾರತ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಒಂದನ್ನು ನೆನಪಿಸಲು ಇಚ್ಛಿಸುತ್ತೇನೆ ಪಾಕಿಸ್ತಾನದಲ್ಲಿರುವ ಪ್ರತೀಯೊಬ್ಬರು ಷರೀಫ್ ರಂತೆ ಹೇಡಿಗಳಲ್ಲ. ನಮ್ಮದು ಶಾಂತಿಯುತ ದೇಶವಾಗಿದ್ದು, ಭಾರತದಲ್ಲಿರುವ ಬಹುತೇಕ ಜನರು ಪಾಕಿಸ್ತಾನ ಜೊತೆಗೆ ಯುದ್ಧ ಬೇಡವೆಂದೇ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ