ಹಖ್ಖಾನಿ ಉಗ್ರ ಸಂಘಟನೆಗೆ ನೆರವು ಹಿನ್ನಲೆ: ಪಾಕಿಸ್ತಾನಕ್ಕೆ ಅಮೆರಿಕ ನೆರವು ಕಟ್!

ಭಯೋತ್ಪಾದಕ ಸಂಘಟನೆಗಳ ನಿಗ್ರಹಕ್ಕೆ ಪಾಕಿಸ್ತಾನ ಕೈಗೊಳ್ಳುತ್ತಿರುವ ಕ್ರಮಗಳ ಬಗ್ಗೆ ಅಸಮಾಧಾನ ತೀವ್ರ ವ್ಯಕ್ತಪಡಿಸಿರುವ ಅಮೆರಿಕ, ಆ ದೇಶಕ್ಕೆ ನೀಡುತ್ತಿದ್ದ 350 ಮಿಲಿಯನ್ ಡಾಲರ್ ಆರ್ಥಿಕ ನೆರವನ್ನು ತಡೆ ಹಿಡಿಯಲು ನಿರ್ಧರಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ವಾಷಿಂಗ್ಟನ್: ಭಯೋತ್ಪಾದಕ ಸಂಘಟನೆಗಳ ನಿಗ್ರಹಕ್ಕೆ ಪಾಕಿಸ್ತಾನ ಕೈಗೊಳ್ಳುತ್ತಿರುವ ಕ್ರಮಗಳ ಬಗ್ಗೆ ಅಸಮಾಧಾನ ತೀವ್ರ ವ್ಯಕ್ತಪಡಿಸಿರುವ ಅಮೆರಿಕ, ಆ ದೇಶಕ್ಕೆ ನೀಡುತ್ತಿದ್ದ 350 ಮಿಲಿಯನ್ ಡಾಲರ್ ಆರ್ಥಿಕ ನೆರವನ್ನು ತಡೆ  ಹಿಡಿಯಲು ನಿರ್ಧರಿಸಿದೆ.

ಮೂಲಗಳ ಪ್ರಕಾರ ಪಾಕಿಸ್ತಾನ ಉಗ್ರ ನಿಗ್ರಹಕ್ಕಾಗಿ ನೀಡಲಾಗುತ್ತಿರುವ ಹಣವನ್ನು ದುರ್ಬಳಕೆ ಮಾಡಿಕೊಂಡು ಕುಖ್ಯಾತ ಹಖ್ಖಾನಿ ನೆಟವರ್ಕ್ ಗೆ ನೆರವು ನೀಡುತ್ತಿದೆ ಮತ್ತು ಉಗ್ರ ಸಂಘಟನೆಗಳ ವಿರುದ್ಧ ಸೂಕ್ತ ಕ್ರಮಗಳನ್ನು  ಪಾಕಿಸ್ತಾನ ಸರ್ಕಾರ ಕೈಗೊಳ್ಳುತ್ತಿಲ್ಲ ಎಂದು ಅಮೆರಿಕ ರಕ್ಷಣಾ ಕಾರ್ಯದರ್ಶಿ ಈ ಹಿಂದೆ ವರದಿ ನೀಡಿದ್ದರು. ಈ ವರದಿಯಾಧರಿಸಿ ಡೊನಾಲ್ಡ್ ಟ್ರಂಪ್ ಸರ್ಕಾರ ಈ ಮಹತ್ವದ ನಿರ್ಧಾರ ಕೈಗೊಂಡಿದೆ ಎಂದು ತಿಳಿದುಬಂದಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಯೋತ್ಪಾದನೆ ವಿರುದ್ಧ ಕಠಿಣ ನಿಲುವು ತಳೆದಿದ್ದು, ಇತ್ತೀಚೆಗಷ್ಟೇ ಪಾಕಿಸ್ತಾನಕ್ಕೆ ಅಮೆರಿಕ ನೀಡುತ್ತಿದ್ದ ಆರ್ಥಿಕ ನೆರವಿಗೆ ಕಠಿಣ ಷರತ್ತುಗಳನ್ನು ವಿಧಿಸುವ ಮಸೂದೆಯನ್ನು ಅಮೆರಿಕ ಸಂಸತ್​ನಲ್ಲಿ  ಮಂಡಿಸಲಾಗಿತ್ತು. ಅದರಂತೆ ಪಾಕಿಸ್ತಾನ ಸರ್ಕಾರದ ಉಗ್ರ ನಿಗ್ರಹ ಕಾರ್ಯಾಚರಣೆ ಸಮಾಧಾನಕರವಾಗಿದ್ದರೆ ಮಾತ್ರ ಆರ್ಥಿಕ ನೆರವು ನೀಡುವುದಾಗಿ ಹೇಳಿತ್ತು. ಅಂತೆಯೇ ಪಾಕಿಸ್ತಾನ ಭಯೋತ್ಪಾದನೆಗೆ ಪ್ರಚೋದನೆ ನೀಡುವ  ದೇಶವೆಂದು ಘೊಷಿಸುವಂತೆ ಅಮೆರಿಕ ಸಂಸದರು ಒತ್ತಾಯಿಸಿದ್ದರು.

ಇದೇ ಕಾರಣಕ್ಕಾಗಿ ಡೊನಾಲ್ಡ್ ಟ್ರಂಪ್ ಆಡಳಿತ ಇತ್ತೀಚೆಗೆ ಮಂಡಿಸಿದ್ದ ರಕ್ಷಣಾ ಮುಂಗಡಪತ್ರದಲ್ಲಿ ಪಾಕಿಸ್ತಾನಕ್ಕೆ ನೀಡಲಾಗುತ್ತಿದ್ದ ಆರ್ಥಿಕ ನೆರವಿನಲ್ಲಿ ಗಣನೀಯ ಪ್ರಮಾಣ ಇಳಿಕೆ ಮಾಡಿತ್ತು. 2016ಕ್ಕೆ ಹೋಲಿಸಿದರೆ ಪಾಕ್  ಸರ್ಕಾರಕ್ಕೆ ನೀಡಲಾಗುವ ನೆರವನ್ನು ಅಮೆರಿಕ ಸುಮಾರು190 ಮಿಲಿಯನ್ ಡಾಲರ್​ಗಳಷ್ಟು ಕಡಿತಗೊಳಿಸಿದೆ. ಟ್ರಂಪ್ ಆಡಳಿತ 344 ಮಿಲಿಯನ್ ಡಾಲರ್ ಹಣಕಾಸು ನೆರವು ನೀಡುವುದಾಗಿ ಹೇಳಿದೆ.

ಇನ್ನು ಅಮೆರಿಕವು ಪಾಕಿಸ್ತಾನಕ್ಕೆ ನೆರವಿಗೆ ತಡೆ ಹಾಕಿದ್ದು ಇದೇ ಮೊದಲಲ್ಲ. ಕಳೆದ ವರ್ಷ ಅಮೆರಿಕ 300 ಮಿಲಿಯನ್ ಡಾಲರ್ ಮೊತ್ತವನ್ನು ಮರುಪಾವತಿ ಮಾಡುವುದಕ್ಕೆ ತಡೆ ನೀಡಿತ್ತು. 2016ರಲ್ಲಿ ಪಾಕಿಸ್ತಾನವು 900 ಮಿಲಿಯನ್  ಡಾಲರ್ ನೆರವನ್ನು ಅಮೆರಿಕದಿಂದ ಪಡೆಯಬೇಕಿತ್ತು. ಆದರೆ 550 ಮಿಲಿಯನ್ ಡಾಲರ್ ನೆರವನ್ನು ಮಾತ್ರ ಪಾಕಿಸ್ತಾನ ಪಡೆದಿತ್ತು ಎಂದು ವರದಿಗಳಿಂದ ತಿಳಿದುಬಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com