ಡ್ಯಾಮಾಸ್ಕಸ್: ಸಿರಿಯಾದ ರಾಖಾ ನಗರದ ವಸತಿ ಕಟ್ಟಡಗಳ ಮೇಲೆ ನಡೆದ ಅಮೆರಿಕ ನೇತೃತ್ವದ ವಾಯುಪಡೆ ನಡೆಸಿದ ದಾಳಿಯಲ್ಲಿ ಕನಿಷ್ಠ 43 ಮಂದಿ ನಾಗರಿಕರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಖಾದಲ್ಲಿ ಅಲ್-ಜಮಿಲಿ ಕಟ್ಟಡವನ್ನು ಗುರಿಯಾಗಿಟ್ಟುಕೊಂಡು ಈ ದಾಳಿ ನಡೆದಿದ್ದು ಮೃತಪಟ್ಟವರಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳಾಗಿದ್ದಾರೆ ಎಂದು ಸನಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ರಾಖಾ ನಗರದ ಮೇಲೆ ಅಮೆರಿಕದ ವಾಯುಪಡೆ ದಾಳಿ ಇತ್ತೀಚೆಗೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ನಾಗರಿಕರ ಸಾವು ನೋವು ಹೆಚ್ಚಾಗಿದೆ. ರಾಖಾ ನಗರ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಸಂಘಟನೆಯ ಕೇಂದ್ರ ಸ್ಥಾನವಾಗಿದೆ.
ನಿನ್ನೆ ಇದೇ ರಾಖಾ ನಗರದ ವಸತಿ ಕಟ್ಟಡಗಳು, ಆಸ್ಪತ್ರೆ ಮತ್ತು ಹೊಟೇಲ್ ಗಳನ್ನು ಗುರಿಯಾಗಿಟ್ಟುಕೊಂಡು ಅಮೆರಿಕ ನಡೆಸಿದ ವಾಯುದಾಳಿಯಲ್ಲಿ ಕನಿಷ್ಠ 20 ನಾಗರಿಕರು ಮೃತಪಟ್ಟಿದ್ದರು.
ಕಳೆದ ಗುರುವಾರ ಇಸ್ಲಾಮಿಕ್ ಸ್ಟೇಟ್ ವಶಪಡಿಸಿಕೊಂಡಿರುವ ಮಯದೀನ್ ನಗರದ ಮೇಲೆ ನಡೆದ ವಾಯುದಾಳಿಯಲ್ಲಿ ಕನಿಷ್ಠ 35 ನಾಗರಿಕರು ಮೃತಪಟ್ಟಿದ್ದರು.
ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಸಂಘಟನೆಯನ್ನು ಗುರಿಯಾಗಿಟ್ಟುಕೊಂಡು ಮುಗ್ಧ ನಾಗರಿಕರನ್ನು ವಾಯುದಾಳಿಯಲ್ಲಿ ಸಾಯಿಸುವುದು ನ್ಯಾಯಸಮ್ಮತವಲ್ಲ ಎಂದು ಸಿರಿಯಾ ಸರ್ಕಾರ ಪದೇ ಪದೇ ಖಂಡಿಸುತ್ತಾ ಬಂದಿದೆ.