ಗಿಲ್ಗಿಟ್-ಬಾಲ್ಟಿಸ್ತಾನ್ ಗೆ 5 ನೇ ಪ್ರಾಂತ್ಯದ ಸ್ಥಾನಮಾನ; ಪಾಕ್ ವಿರುದ್ಧ ತಿರುಗಿ ಬಿದ್ದ ವಕೀಲರು!

ಗಿಲ್ಗಿಟ್ ಮತ್ತು ಬಾಲ್ಟಿಸ್ತಾನ್ ಗೆ 5ನೇ ಪ್ರಾಂತ್ಯದ ಸ್ಥಾನಮಾನ ನೀಡಲು ಹೊರಟಿರುವ ಪಾಕಿಸ್ತಾನ ಸರ್ಕಾರದ ಕ್ರಮಕ್ಕೆ ಪಾಕ್ ಆಕ್ರಮಿತ ಕಾಶ್ಮೀರದ ನಿವಾಸಿಗಳು ವ್ಯಾಪಕ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಇದೀಗ ನಿವಾಸಿಗಳ ಪ್ರತಿಭಟನೆಗೆ ಸ್ಥಳೀಯ ವಕೀಲರು ಕೂಡ ಕೈ ಜೋಡಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಇಸ್ಲಾಮಾಬಾದ್: ಗಿಲ್ಗಿಟ್ ಮತ್ತು ಬಾಲ್ಟಿಸ್ತಾನ್ ಗೆ 5ನೇ ಪ್ರಾಂತ್ಯದ ಸ್ಥಾನಮಾನ ನೀಡಲು ಹೊರಟಿರುವ ಪಾಕಿಸ್ತಾನ ಸರ್ಕಾರದ ಕ್ರಮಕ್ಕೆ ಪಾಕ್ ಆಕ್ರಮಿತ ಕಾಶ್ಮೀರದ ನಿವಾಸಿಗಳು ವ್ಯಾಪಕ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಇದೀಗ  ನಿವಾಸಿಗಳ ಪ್ರತಿಭಟನೆಗೆ ಸ್ಥಳೀಯ ವಕೀಲರು ಕೂಡ ಕೈ ಜೋಡಿಸಿದ್ದಾರೆ.

ಪಾಕ್ ಆಕ್ರಮಿತ ಕಾಶ್ಮೀರ ಗಿಲ್ಗಿಟ್ ಮತ್ತು ಬಾಲ್ಟಿಸ್ತಾನವನ್ನು 5ನೇ ಪ್ರಾಂತ್ಯವಾಗಿ ಘೋಷಣೆ ಮಾಡುವ ಮೂಲಕ ಪಾಕಿಸ್ತಾನ ಸರ್ಕಾರ ಸ್ಥಳೀಯ ಹಿತಾಸಕ್ತಿಗೆ ಧಕ್ಕೆ ತರುತ್ತಿದೆ. ಅಲ್ಲದೆ ಚೀನಾದೊಂದಿಗೆ ಸೇರಿ ಮಾಡುತ್ತಿರುವ ಸಿಪಿಇಸಿ  ಯೋಜನೆಗೆ ನೆರವಾಗುವ ಉದ್ದೇಶದಿಂದ ಪಾಕಿಸ್ತಾನ ಸರ್ಕಾರ ತನ್ನದಲ್ಲದ ಭೂಮಿಯನ್ನು ದುರ್ಬಳಕೆ ಮಾಡಿಕೊಳ್ಳಲು ಹವಣಿಸುತ್ತಿದೆ ಎಂದು ಪ್ರತಿಭಟನಾಕಾರರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನ ಸರ್ಕಾರದ  ವಿರುದ್ಧ ಕಪ್ಪು ಬಾವುಟ ಪ್ರದರ್ಶನ ಮಾಡುತ್ತಿರುವ ಪ್ರತಿಭಟನಾಕಾರರು, ಗಿಲ್ಗಿಟ್-ಬಾಲ್ಟಿಸ್ತಾನವನ್ನು ಜಮ್ಮು ಮತ್ತು ಕಾಶ್ಮೀರ ರಾಜ್ಯದಿಂದ ಬೇರ್ಪಡಿಸುವ ದುರುದ್ದೇಶದಿಂದ ಪಾಕಿಸ್ತಾನ ಸರ್ಕಾರ ಇಂತಹ ನಿಲುವು ತಳೆದಿದೆ ಎಂದು  ವಕೀಲರು ಆರೋಪಿಸಿದ್ದಾರೆ.

ಈ ಹಿಂದೆ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರ ಸಲಹೆಗಾರ ಸರ್ತಾಜ್ ಎಜೀಜ್ ಅವರ ನೇತೃತ್ವದ ಸಮಿತಿ ಗಿಲ್ಗಿಟ್ ಮತ್ತು ಬಾಲ್ಟಿಸ್ತಾನ್ ಗೆ 5ನೇ ಪ್ರಾಂತ್ಯದ ಸ್ಥಾನ ಮಾನ ನೀಡುವ ಕುರಿತು ಶಿಫಾರಸ್ಸು ಮಾಡಿತ್ತು.  ಈಗಾಗಲೇ ಬಲೂಚಿಸ್ತಾನ, ಖೈಬರ್ ಪಕ್ತುಂಕ್ವಾ, ಪಂಜಾಬ್ ಮತ್ತು ಸಿಂಧ್ ಗೆ ಮೊದಲ ನಾಲ್ಕು ಪ್ರಾಂತ್ಯಗಳ ಸ್ಥಾನಮಾನ ನೀಡಲಾಗಿದೆ. ಇದೀಗ ಗಿಲ್ಗಿಟ್-ಬಾಲ್ಟಿಸ್ತಾನವನ್ನು 5ನೇ ಪ್ರಾಂತ್ಯವಾಗಿ ಘೋಷಣೆ ಮಾಡಲು ಪಾಕ್  ಹೊರಟಿದ್ದು, ಇದಕ್ಕೆ ವಿರೋಧಿಸಿರುವ ಭಾರತ ಗಿಲ್ಗಿಟ್ ಮತ್ತು ಬಾಲ್ಟಿಸ್ತಾನ ಭಾರತದ ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ಸೇರಿದ್ದು ಎಂದು ತನ್ನ ವಾದ ಮಂಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com