ಉತ್ತರ ಕೊರಿಯಾಗೆ ಮುಖಭಂಗ; ಬಹು ನಿರೀಕ್ಷಿತ ಕ್ಷಿಪಣಿ ಪರೀಕ್ಷೆ ವಿಫಲ

ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಗೆ ಮತ್ತೆ ಹಿನ್ನಡೆಯಾಗಿದ್ದು, ಉತ್ತರ ಕೊರಿಯಾದ ಬಹು ನಿರೀಕ್ಷಿತ ಕ್ಷಿಪಣಿ ಪರೀಕ್ಷೆ ವಿಫಲವಾಗಿದೆ ಎಂದು ಸಿಯೋಲ್ ವರದಿ ಮಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಸಿಯೋಲ್: ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಗೆ ಮತ್ತೆ ಹಿನ್ನಡೆಯಾಗಿದ್ದು, ಉತ್ತರ ಕೊರಿಯಾದ ಬಹು ನಿರೀಕ್ಷಿತ ಕ್ಷಿಪಣಿ ಪರೀಕ್ಷೆ ವಿಫಲವಾಗಿದೆ ಎಂದು ಸಿಯೋಲ್ ವರದಿ ಮಾಡಿದೆ.

ಅಮೆರಿಕ-ಜಪಾನ್ ದೇಶಗಳ ಸೇನಾನೆಲೆಗಳ ಗುರಿಯನ್ನು ಮುಟ್ಟಬಲ್ಲ ಕ್ಷಿಪಣಿ ತಯಾರಿಕೆಗೆ ಈ ಹಿಂದೆ ಉತ್ತರ ಕೊರಿಯಾ ಕೈ ಹಾಕಿತ್ತು. ಇದು ವಿಶ್ವ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿತ್ತು. ಆದರೆ ವಿಶ್ವ ಸಮುದಾಯದ ವಿರೋಧದ  ನಡುವೆಯೇ ಉತ್ತರ ಕೊರಿಯಾ ಕ್ಷಿಪಣಿ ತಯಾರಿಕೆ ಮುಂದುವರೆಸಿತ್ತು. ಆದರೆ ಕ್ಷಿಪಣಿ ತಯಾರಿಕೆ ಮುಕ್ತಾಯವಾಗಿ ಇಂದು ನಡೆದ ಪರೀಕ್ಷೆಯಲ್ಲಿ ಬಹು ನಿರೀಕ್ಷಿತ ಕ್ಷಿಪಣಿ ವಿಫಲವಾಗಿದೆ. ನಿಗದಿತ ಗುರಿಯನ್ನು ತಲುಪುವಲ್ಲಿ ಕ್ಷಿಪಣಿ  ವಿಫಲವಾಗಿದ್ದು, ಗುರಿಯಿಂದ ತನ್ನ ಮಾರ್ಗ ಬದಲಿಸಿ ಸ್ಫೋಟವಾಗಿದೆ ಎಂದು ದಕ್ಷಿಣ ಕೊರಿಯಾ ಹೇಳಿದೆ.

ಪ್ರಸ್ತುತ ಉತ್ತರ ಕೊರಿಯಾ ಪರೀಕ್ಷೆಗೆ ಒಳಪಡಿಸಿರುವ ಕ್ಷಿಪಣಿ ಮಾದರಿ ಎಂತಹುದು ಎಂಬುದು ಸ್ಪಷ್ಟವಾಗಿಲ್ಲವಾದರೂ, ಬುಧವಾರ ಸುಮಾರು 4ಕ್ಕೂ ಹೆಚ್ಚು ಕ್ಷಿಪಣಿಗಳನ್ನು ಉತ್ತರ ಕೊರಿಯಾ ಪರೀಕ್ಷೆಗೊಳಪಡಿಸಿದೆ. ಈ ಎಲ್ಲ  ಕ್ಷಿಪಣಿಗಳೂ ವಿಫಲವಾಗಿದೆ ಎಂದು ಜಪಾನ್ ನ ಕ್ಯೋಡೋ ಸುದ್ದಿ ಸಂಸ್ಥೆ ವರದಿ ಮಾಡಿದೆ. ಈ ನಾಲ್ಕು ಕ್ಷಿಪಣಿಗಳ ಪೈಕಿ ಒಂದು ಖಂಡಾಂತರ ಕ್ಷಿಪಣಿಯಾಗಿದ್ದು, ಇತರೆ ಮೂರು ಕ್ಷಿಪಣಿಗಳು ಅಮೆರಿಕದ ಮಿತ್ರ ರಾಷ್ಟ್ರ ಜಪಾನ್ ಸೇನಾ  ನೆಲೆಗಳ ಮೇಲೆ ದಾಳಿ ಮಾಡುವ ಸಾಮರ್ಥ್ಯ ಹೊಂದಿತ್ತು ಎಂದು ಹೇಳಲಾಗುತ್ತಿದೆ.

ಆದರೆ ದಕ್ಷಿಣ ಕೊರಿಯಾದ ಈ ವರದಿಗೆ ಸಂಬಂಧಿಸಿದಂತೆ ಮತ್ತು ತನ್ನ ಕ್ಷಿಪಣಿ ಪರೀಕ್ಷೆ ವಿಫಲವಾದುದರ ಕುರಿತಂತೆ ಉತ್ತರ ಕೊರಿಯಾ ಈ ವರೆಗೂ ಯಾವುದೇ ಸ್ಪಷ್ಟನೆ ನೀಡಿಲ್ಲ. ಕಳೆದ ವಾರವಷ್ಟೇ ದಕ್ಷಿಣ ಕೊರಿಯಾದೊಂದಿಗೆ  ಸೇರಿ ಅಮೆರಿಕ ಸೇನಾ ಪಡೆಗಳು ಜಂಟಿ ಸಮರಾಭ್ಯಾಸ ಕೈಗೊಂಡಿದ್ದವು. ಇದಕ್ಕೆ ಟಾಂಗ್ ನೀಡುವ ಉದ್ದೇಶದಿಂದ ಉತ್ತರ ಕೊರಿಯಾ ಈ ಕ್ಷಿಪಣಿ ಪರೀಕ್ಷೆಗೆ ಮುಂದಾಗಿತ್ತು ಎಂದು ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com