

ಕೊಲಂಬೊ: ಭೀಕರ ಪ್ರವಾಹದಿಂದ ನಲುಗಿ ಹೋಗಿರುವ ಶ್ರೀಲಂಕಾದಲ್ಲಿ ಭಾರತೀಯ ನೌಕಾಸೇನೆಯ ಕಾರ್ಯಾಚರಣೆ ಮುಂದುವರೆದಿದ್ದು, ಅಗತ್ಯ ಸಾಮಗ್ರಿಗಳೊಂದಿಗೆ ಭಾರತದಿಂದ ತೆರಳಿದ್ದ ಐಎನ್ ಎಸ್ ಶಾರ್ದೂಲ್ ಭಾನುವಾರ ಶ್ರೀಲಂಕಾ ತಲುಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸುಮಾರು ಟನ್ ಗಟ್ಟಲೆ ಪರಿಹಾರ ಸಾಮಗ್ರಿಗಳನ್ನು ತುಂಬಿಸಿ ಐಎನ್ ಎಸ್ ಶಾರ್ದೂಲ್ ನೌಕೆಯನ್ನು ಕಳುಹಿಸಿಕೊಡಲಾಗಿತ್ತು. ಇದೀಗ ನೌಕೆ ಶ್ರೀಲಂಕಾ ತಲುಪಿದ್ದು, ಶೀಘ್ರದಲ್ಲೇ ನಿರಾಶ್ರಿತ ಶಿಬಿರಗಳಿಗೆ ಸಾಮಗ್ರಿಗಳನ್ನು ಹಂಚಿಕೆ ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದೇ ವೇಳೆ ನೌಕೆ ಆಗಮನ ವಿಚಾರವನ್ನು ಶ್ರೀಲಂಕಾ ವಿತ್ತ ಸಚಿವ ರವಿ ಕರುಣನಾಯಕೆ ಖಾತರಿ ಪಡಿಸಿದ್ದು, ಐಎನ್ ಎಸ್ ಶೂರ್ದೂಲ್ ನೊಂದಿಗೆ ಐಎನ್ ಎಸ್ ಕಿರ್ಚ್ ಕೂಡ ನಿನ್ನೆ ಅಗತ್ಯ ಸಾಮಗ್ರಿಗಳೊಂದಿಗೆ ಕೊಲಂಬೋ ತಲುಪಿದೆ ಎಂದು ಹೇಳಿದ್ದಾರೆ.
ಕೊಲಂಬೋದಲ್ಲಿರುವ ಭಾರತೀಯ ರಾಯಭಾರಿ ತರಣ್ ಜಿತ್ ಸಿಂಗ್ ಸಂಧು ಅವರು ಶನಿವಾರ ಐಎನ್ಎಸ್ ಕಿರ್ಚ್ ಹಾಗೂ ಐಎನ್ಎಸ್ ಜಲಾಶ್ವ ನೌಕೆಗಳಲ್ಲಿನ ಪರಿಹಾರ ಸಾಮಗ್ರಿಗಳನ್ನು ಶ್ರೀಲಂಕಾ ಸರ್ಕಾರಕ್ಕೆ ವಿತರಣೆ ಮಾಡಿದರು. ನೌಕೆಯಲ್ಲಿದ್ದ ಅಪಾರ ಪ್ರಮಾಣದ ಆಹಾರ, ಔಷಧಿ ಮತ್ತು ನೀರು ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದ್ದು, ಬಳಿಕ ಇವುಗಳನ್ನು ವಿವಿಧ ನಿರಾಶ್ರಿತ ಶಿಬಿರಗಳಿಗೆ ಹಂಚಿಕೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಇನ್ನು ಭೂಕುಸಿತ ಸಂಭವಿಸಿರುವ ದ್ವೀಪರಾಷ್ಟ್ರದ ಪ್ರದೇಶಗಳಲ್ಲಿ ನೌಕಾದಳದ ಸೈನಿಕರು ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದು, ಲಂಕಾ ಮತ್ತು ಭಾರತ ಸೇನೆಯ ಸುಮಾರು ಸಾವಿರಕ್ಕೂ ಅಧಿಕ ಸೈನಿಕರು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಸೈನಿಕರಿಗೆ ಸ್ಥಳೀಯ ಪೊಲೀಸರು ಹಾಗೂ ಸ್ವಯಂ ಸೇವಕರು ಕೈ ಜೋಡಿಸಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಶ್ರೀಲಂಕಾದಲ್ಲಿ ಸಂಭವಿಸಿರುವ ಭೀಕರ ಪ್ರವಾಹದಿಂದಾಗಿ ಈ ವರೆಗೂ ಸುಮಾರು 91 ಜನರ ಮೃತದೇಹಗಳು ಪತ್ತೆಯಾಗಿದ್ದು, 110 ಮಂದಿ ನಾಪತ್ತೆಯಾಗಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.
Advertisement