ಬ್ರಹ್ಮಪುತ್ರ ನದಿ ಹೈಜಾಕ್ ಗೆ ಚೀನಾ ಸಂಚು?: ಸಾವಿರ ಕಿ.ಮೀ. ಉದ್ದದ ಸುರಂಗ ತೋಡಲು ಯೋಜನೆ

ಟಿಬೆಟ್‌ ನಲ್ಲಿರುವ ಬ್ರಹ್ಮಪುತ್ರ ನದಿಯನ್ನೇ ಹೈಜಾಕ್ ಮಾಡಲು ಚೀನಾ ಸರ್ಕಾರ ಬೃಹತ್ ಯೋಜನೆ ರೂಪಿಸಿದ್ದು, ಬರೊಬ್ಬರಿ 1 ಸಾವಿರ ಕಿ.ಮೀ ಉದ್ಧದ ಸುರಂಗ ತೋಡುವ ಮೂಲಕ ಇಡೀ ನದಿಯನ್ನೇ ತಿರುಗಿಸಲು ಯೋಜನೆ ರೂಪಿಸಿದೆ ಎಂದು ಹೇಳಲಾಗುತ್ತಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೀಜಿಂಗ್: ಟಿಬೆಟ್‌ ನಲ್ಲಿರುವ ಬ್ರಹ್ಮಪುತ್ರ ನದಿಯನ್ನೇ ಹೈಜಾಕ್ ಮಾಡಲು ಚೀನಾ ಸರ್ಕಾರ ಬೃಹತ್ ಯೋಜನೆ ರೂಪಿಸಿದ್ದು, ಬರೊಬ್ಬರಿ 1 ಸಾವಿರ ಕಿ.ಮೀ ಉದ್ಧದ ಸುರಂಗ ತೋಡುವ ಮೂಲಕ ಇಡೀ ನದಿಯನ್ನೇ ತಿರುಗಿಸಲು  ಯೋಜನೆ ರೂಪಿಸಿದೆ ಎಂದು ಹೇಳಲಾಗುತ್ತಿದೆ. 
ಮಾಧ್ಯಮವೊಂದು ವರದಿ ಮಾಡಿರುವಂತೆ ಚೀನಾದ ಮರುಭೂಮಿ ಪ್ರದೇಶ ಕ್ಸಿನ್‌ ಜಿಯಾಂಗ್ ಪ್ರಾಂತ್ಯಕ್ಕೆ ನೀರುಣಿಸಲು ಚೀನಾ ಪ್ರಸ್ತುತ ಬ್ರಹ್ಮಪುತ್ರ ನದಿ ಸಾಗುತ್ತಿರುವ ಮಾರ್ಗವನ್ನೇ ಬದಲಿಸಿ, ಸುರಂಗ ಮೂಲಕ ನದಿಯ  ನೀರನ್ನು ಕ್ಲಿನ್ ಜಿಯಾಂಗ್ ಪ್ರಾಂತ್ಯಕ್ಕೆ ಹರಿಯಬಿಡಲು ಯೋಜನೆ ರೂಪಿಸಿದೆಯಂತೆ. ಇದಕ್ಕಾಗಿ ಸುಮಾರು 1 ಸಾವಿರ ಕಿ.ಮೀ ಉದ್ಧದ ಸುರಂಗವನ್ನು ಕೊರೆಯಲು ಯೋಜನೆ ರೂಪಿಸಲಾಗಿದ್ದು, ಆ ಮೂಲಕ ಇಡೀ ನದಿಯನ್ನೇ  ಬೇರೆಡೆಗೆ ತಿರುಗಿಸಲು ಚೀನಾ ಸಂಚು ರೂಪಿಸಿದೆ ಎಂದು ಹೇಳಲಾಗಿದೆ.
ಈ ಬಗ್ಗೆ ಚೀನಾದ ಖ್ಯಾತ ಎಂಜಿನಿಯರ್ ಗಳು ಪರಿಶೀಲನೆ ನಡೆಸುತ್ತಿದ್ದು, ಚೀನಾದ ಯುನ್ನನ್ ಪ್ರಾಂತ್ಯದಲ್ಲಿ ಸುಮಾರು 600 ಕಿ.ಮೀ ವ್ಯಾಪ್ತಿಯಲ್ಲಿ ಈ ಬೃಹತ್ ಕಾಮಗಾರಿಗಾಗಿ ಸಿಬ್ಬಂದಿಗಳು ತಾಲೀಮು ನಡೆಸುತ್ತಿದ್ದಾರೆ ಎಂದು  ವರದಿಯಲ್ಲಿ ಹೇಳಲಾಗಿದೆ. ಒಂದು ವೇಳೆ ಚೀನಾ ಈ ಯೋಜನೆಯಲ್ಲಿ ಯಶಸ್ವಿಯಾಗಿದ್ದೇ ಆದರೆ ಇದು ಜಗತ್ತಿನ ಅತಿ ಉದ್ದದ ಸುರಂಗ ಕಾಲುವೆಯಾಗಲಿದೆ. ಅಂತೆಯೇ ಈ ಯೋಜನೆ ಯಶಸ್ವಿಯಾದರೆ ನೀರಿಲ್ಲದೇ ಒಣಗಿ  ನಿಂತಿರುವ ಕ್ಸಿನ್‌ ಜಿಯಾಂಗ್ ಪ್ರಾಂತ್ಯವೇ ಮಾರ್ಪಾಡಾಗಲಿದೆ.
ಮೂಲಗಳ ಪ್ರಕಾರ ಚೀನಾದ ಯಾರ್ಲುಂಗ್ ತ್ಸನ್ ಗ್ಪೋ ನದಿ (ಭಾರತಕ್ಕೆ ಪ್ರವೇಶಿಸಿದ ಬಳಿಕ ಇದನ್ನು ಬ್ರಹ್ಮಪುತ್ರ ಎನ್ನಲಾಗುತ್ತದೆ)ಗೆ ದಕ್ಷಿಣ ಟಿಬೆಟ್ ನಲ್ಲಿಯೇ ತಿರುವು ನೀಡಿ, ಸುರಂಗ ಮಾರ್ಗದ ಮೂಲಕ ಕ್ಸಿನಿ ಜಿಯಾಂಗ್  ಪ್ರಾಂತ್ಯದ ತಕ್ಲಮಕನ್ ಮರುಭೂಮಿಗೆ ಹರಿಸುವುದು ಯೋಜನೆಯ ಉದ್ದೇಶವಾಗಿದೆ. 
ಭಾರತ, ಬಾಂಗ್ಲಾದೇಶದ ಮೇಲೆ ದುಷ್ಪರಿಣಾಮ
ಇನ್ನು ಚೀನಾದ ಈ ಯೋಜನೆಯಿಂದಾಗಿ ಭವಿಷ್ಯದಲ್ಲಿ ಬ್ರಹ್ಮಪುತ್ರ ನದಿಯನ್ನೇ ಆಶ್ರಯಿಸಿ ಬದುಕುತ್ತಿರುವ ಭಾರತ, ಬಾಂಗ್ಲಾದೇಶ ಜನತೆ ನೀರಿನ ಗಂಭೀರ ಕೊರತೆ ಎದುರಿಸುವಂತಾಗುತ್ತದೆ. ಬ್ರಹ್ಮಪುತ್ರ ನದಿಗೆ ಚೀನಾ ಕಟ್ಟಿರುವ  ಅಣೆಕಟ್ಟು ಒತ್ತಡಕ್ಕೆ ಒಡೆದರೆ ಭಾರತ, ಬಾಂಗ್ಲಾದೇಶಗಳಲ್ಲಿ ಪ್ರವಾಹ ಎದುರಾಗುತ್ತದೆ. ಇವೆಲ್ಲಕ್ಕಿಂತ ಮುಖ್ಯವಾಗಿ ಚೀನಾ ಯೋಜನೆ ಸಫಲವಾದರೆ ಚೀನಾ ಕಣ್ಣಿಟ್ಟಿರುವ ದಕ್ಷಿಣ ಏಷ್ಯಾಭಾಗದಲ್ಲಿ ಚೀನಾ ಮೇಲುಗೈ  ಸಾಧಿಸಿದಂತಾಗುತ್ತದೆ.
ಚೀನಾ ಯೋಜನೆ ಅಸಾಧ್ಯ ಎಂದ ತಜ್ಞರು
ಆದರೆ ಚೀನಾದ ಈ ಯೋಜನೆ ಅಸಾಧ್ಯ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ ಹಿಮಾಲಯ ವಲಯದ ಮೇಲೆ ಬೀರಲಿರುವ ಸಂಭಾವ್ಯ ದುಷ್ಪರಿಣಾಮಗಳ ಬಗ್ಗೆ ಪರಿಸರ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. ಈ ಹಿಂದೆ  2001ರಲ್ಲಿ ಟಿಬೆಟ್ ನಲ್ಲಿ ಬೃಹತ್ ಅಣೆಕಟ್ಟು ಕಟ್ಟುವುದಕ್ಕೆ ಹೋಗಿ ಅದು ಕುಸಿದ ಪರಿಣಾಮ ಹಲವರು ಪ್ರಾಣ ಕಳೆದುಕೊಂಡಿದ್ದರು. ಈ ದುರಂತ ಅಚ್ಚಹಸಿರಾಗಿರುವ ಹೊತ್ತಿನಲ್ಲೇ ಚೀನಾ ಮತ್ತೊಮ್ಮೆ ಅಂತಹುದೇ ಬೃಹತ್  ಕಾಮಗಾರಿಗೆ ಕೈಹಾಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com