ವಿಶ್ವಸಂಸ್ಥೆಯ ಸಾಮಾನ್ಯಸಭೆಯಲ್ಲಿ ರೈಟು ಟು ರಿಪ್ಲೈ (ಪ್ರತಿಕ್ರಿಯೆ ನೀಡುವ ಹಕ್ಕು) ಸಂದರ್ಭದಲ್ಲಿ ಮಾತನಾಡಿದ ಆಪ್ಘಾನಿಸ್ತಾನ ಪ್ರತಿನಿಧಿಗಳು ಪಾಕಿಸ್ತಾನದ ವಿರುದ್ಧ ತೀವ್ರ ಕಿಡಿಕಾರಿದರು. ಪಾಕಿಸ್ತಾನ ತನ್ನ ನೆಲದಲ್ಲಿ ಸಕ್ರಿಯವಾಗಿರುವ ವಿವಿಧ ಭಯೋತ್ಪಾದಕ ಗುಂಪುಗಳು ಮತ್ತು ಅವುಗಳ ಆಶ್ರಯದಾತರ ವಿರುದ್ಧ ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳಲು ವಿಫಲವಾಗಿದೆ. ಇದೀಗ ತನ್ನ ತಪ್ಪುಗಳನ್ನು ಮುಚ್ಚಿ ಹಾಕಲು ಇತರೆ ರಾಷ್ಟ್ರಗಳ ಮೇಲೆ ಗೂಬೆ ಕೂರಿಸುವ ಮೂಲಕ ಅಂತಾರಾಷ್ಟ್ರೀಯ ಸಮುದಾಯದ ಗಮನವನ್ನು ಬೇರೆಡೆಗೆ ಸೆಳೆಯಲು ಯತ್ನಿಸುತ್ತಿದೆ ಎಂದು ಆರೋಪಿಸಿದೆ.
ಈ ಹಿಂದೆ ವಿಶ್ವಸಂಸ್ಥೆಯಲ್ಲಿ ಮಾತನಾಡಿದ್ದ ಪಾಕಿಸ್ತಾನದ ಪ್ರಧಾನಿ ಶಾಹಿದ್ ಖಾನ್ ಅಬ್ಬಾಸಿ ಅವರು, ಪಾಕಿಸ್ತಾನದಲ್ಲಿ ತಾಲಿಬಾನ್ ಗೆ ಸುರಕ್ಷಿತ ಆಶ್ರಯತಾಣಗಳಿಲ್ಲ, ಅವುಗಳು ಅಫ್ಘಾನಿಸ್ತಾನದಲ್ಲೇ ಇವೆ ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಆಫ್ಘನ್ ಪ್ರತಿನಿಧಿಗಳು ತಮ್ಮ ಉತ್ತರಿಸುವ ತನ್ನ ಹಕ್ಕನ್ನು ಚಲಾಯಿಸಿ, ಪಾಕಿಸ್ತಾನದ ವಿರುದ್ಧ ಕಿಡಿಕಾರಿದ್ದಾರೆ. ಪಾಕಿಸ್ತಾನದಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ನೆಲೆ ಸಿಕ್ಕಿರುವುದು ಆ ದೇಶದಲ್ಲಿ ಮತ್ತು ವಲಯದಲ್ಲಿ ಉಂಟಾಗಿರುವ ಅಭದ್ರತೆಯ ಪ್ರಧಾನ ಮೂಲ ಎನ್ನುವುದು ಸ್ಪಷ್ಟ. ಅಫ್ಘಾನಿಸ್ತಾನದಲ್ಲಿ ಭಯೋತ್ಪಾದಕರ ಸುರಕ್ಷಿತ ಆಶ್ರಯ ತಾಣಗಳಿವೆ ಎಂಬುದಾಗಿ ಸದಸ್ಯ ದೇಶವೊಂದು ಹೇಳಿಕೊಂಡಿರುವುದು ಸರಿಯಲ್ಲ ಎಂದು ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ಅಫ್ಘನ್ ಪ್ರತಿನಿಧಿ ಹೇಳಿದರು.