ಲಾಹೋರ್: 2008ರ ಮುಂಬೈ ಮೇಲಿನ ಭಯೋತ್ಪಾದನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಪ್ರಾಸಿಕ್ಯೂಟರ್ ಅವರನ್ನು ಪಾಕಿಸ್ತಾನದ ಆಂತರಿಕ ಸಚಿವಾಲಯ ದಿಢೀರ್ ಅಂತ ತೆಗೆದು ಹಾಕಿದೆ.
ಪಾಕ್ ಸರ್ಕಾರದ ನಿರ್ದೇಶನದಂತೆ ನಡೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿ ಪಾಕ್ ಮುಖ್ಯ ಪ್ರಾಸಿಕ್ಯೂಟರ್ ಅನ್ನು ತೆಗೆದುಹಾಕಿದ್ದು ಮುಂಬೈ ಉಗ್ರ ದಾಳಿ ಪ್ರಕರಣದಲ್ಲಿ ನ್ಯಾಯಕ್ಕಾಗಿ ಹೋರಾಡುತ್ತಿರುವ ಭಾರತಕ್ಕೆ ಇದರಿಂದ ತೀವ್ರ ಹಿನ್ನಡೆಯಾಗಿದೆ.
2008ರ ನವೆಂಬರ್ ನಲ್ಲಿ ಲಷ್ಕರ್ ಇ ತೊಯ್ಬಾ(ಎಲ್ಇಟಿ) ಉಗ್ರ ಸಂಘಟನೆ ಮುಂಬೈನಲ್ಲಿ ಉಗ್ರ ದಾಳಿ ನಡೆಸಿದ್ದು ಈ ದಾಳಿಯಲ್ಲಿ 166 ಮಂದಿ ಮೃತಪಟ್ಟಿದ್ದು 300 ಮಂದಿ ಗಾಯಗೊಂಡಿದ್ದರು.
2009ರಿಂದ ಮುಂಬೈ ದಾಳಿ ಪ್ರಕರಣದ ವಿಚಾರಣೆಗೆ ಮುಖ್ಯಸ್ಥರಾಗಿ ಪ್ರತಿನಿಧಿಸುತ್ತಿದ್ದ ಫೆಡರಲ್ ಇನ್ವೆಸ್ಟಿಗೇಶನ್ ಏಜೆನ್ಸಿ(ಎಫ್ಐಎ)ಯ ಚೌಧರಿ ಅಜರ್ ಅವರನ್ನು ಪಾಕಿಸ್ತಾನ ತೆಗೆದುಹಾಕಿದೆ.